

Pahalgam Terror Attack : ದೇಶವನ್ನೇ ಬೆಚ್ಚಿಬೀಳಿಸಿದ ಪಹಲ್ಗಾಮ್ ಭಯೋತ್ಪಾದಕ ದಾಳಿಯಲ್ಲಿ ಮೃತಪಟ್ಟವರಲ್ಲಿ ಪುಣೆ ಮೂಲದ ಉದ್ಯಮಿ ಸಂತೋಷ್ ಜಗದಾಳೆ ಕೂಡ ಒಬ್ಬರು. ಭಯೋತ್ಪಾದಕರು ಬಂದಾಗ ಸಂತೋಷ್ ಮತ್ತು ಅವರ ಕುಟುಂಬವು ಟೆಂಟ್ನಲ್ಲಿ ಆಶ್ರಯ ಪಡೆದಿತ್ತು. ಅಲ್ಲಿಗೆ ಬಂದ ಉಗ್ರರು, ಅವರನ್ನು ಹೊರಗೆ ಬರಲು ಕೇಳಿದರು ಎಂದು ಸಂತೋಷ್ ಅವರ ಮಗಳು ಅಸವರಿ ಹೇಳಿದ್ದಾರೆ.
ನನ್ನ ಪಾಲಕರು ಸೇರಿದಂತೆ ನಾವು ಐದು ಜನರ ಗುಂಪಾಗಿದ್ದೆವು. ಪಹಲ್ಗಾಮ್ ಬಳಿಯ ಬೈಸರನ್ ಕಣಿವೆಯಲ್ಲಿದ್ದೆವು. ಭಯೋತ್ಪಾದಕರು ನಮ್ಮನ್ನು ಡೇರೆಯಿಂದ ಹೊರಗೆ ಬರಲು ಹೇಳಿದರು. ನಾವು ಹೊರಗೆ ಬಂದಾಗ, ನನ್ನ ತಂದೆಗೆ ಕುರಾನ್ನ ಶ್ಲೋಕಗಳನ್ನು ಪಠಿಸಲು ಹೇಳಿದರು. ಹೇಳಿದಂತೆ ಮಾಡದಿದ್ದಾಗ, ನನ್ನ ತಂದೆಯ ತಲೆಗೆ ಮೂರು ಬಾರಿ ಗುಂಡು ಹಾರಿಸಿದರು. ನನ್ನ ತಂದೆ ನೆಲಕ್ಕೆ ಬಿದ್ದಾಗ, ಬಂದೂಕುಧಾರಿಗಳು ಹತ್ತಿರದಲ್ಲಿದ್ದ ನನ್ನ ಚಿಕ್ಕಪ್ಪನ ಕಡೆಗೆ ತಿರುಗಿ, ಅವರ ಮೇಲೂ ಹಿಂದಿನಿಂದ ಹಲವಾರು ಬಾರಿ ಗುಂಡು ಹಾರಿಸಿದರು ಎಂದು ಅಸವರಿ ತಿಳಿಸಿದ್ದಾರೆ.
ಅಲ್ಲಿದ್ದ ಹಲವಾರು ಪುರುಷರ ಮೇಲೆ ಗುಂಡು ಹಾರಿಸಿದರು. ಸಹಾಯ ಮಾಡಲು ಯಾರೂ ಇರಲಿಲ್ಲ. ಘಟನೆ ನಡೆದು 20 ನಿಮಿಷಗಳಾದರೂ ಪೊಲೀಸರು ಅಥವಾ ಸೈನ್ಯ ಬರಲಿಲ್ಲ. ಅಲ್ಲಿದ್ದ ಸ್ಥಳೀಯರು ಸಹ ಕುರಾನ್ನ ಪದ್ಯಗಳನ್ನು ಪಠಿಸುತ್ತಿದ್ದರು ಎಂದು ಅಸವರಿ ಹೇಳಿದರು.
ಹಿಂದೂಗಳಿಂದಾಗಿ ತಮ್ಮ ಧರ್ಮ ಅಪಾಯದಲ್ಲಿದೆ ಎಂದು ಭಯೋತ್ಪಾದಕರು ಹೇಳಿದರು ಮತ್ತು ಪ್ರಧಾನಿ ನರೇಂದ್ರ ಮೋದಿಯವರನ್ನು ಶಪಿಸಿದರು. ಭಯೋತ್ಪಾದಕರು ಕೇವಲ ಪುರುಷರ ಮೇಲೆಯೇ ದಾಳಿ ಮಾಡಿದರು. ಸ್ಥಳೀಯ ಪೊಲೀಸ್ ಸಮವಸ್ತ್ರ ಧರಿಸಿದ್ದರು ಮತ್ತು ಸೈನಿಕರು ಧರಿಸುವ ಮುಖವಾಡಗಳನ್ನು ಹೋಲುವ ಮುದ್ರಿತ ಮುಖವಾಡಗಳನ್ನು ಹೊಂದಿದ್ದರು ಎಂದು ಅಸವರಿ ಹೇಳಿದ್ದಾರೆ.
ಅಸವರಿ ಅವರ ತಾಯಿ ಮತ್ತು ಓರ್ವ ಸಂಬಂಧಿಯನ್ನು ಸ್ಥಳೀಯರು ಮತ್ತು ಭದ್ರತಾ ಪಡೆಗಳು ರಕ್ಷಿಸಿವೆ. ಇದೇ ಸಂದರ್ಭದಲ್ಲಿ ಭಯೋತ್ಪಾದಕ ದಾಳಿಯಲ್ಲಿ ಸಾವಿಗೀಡಾದವರ ಸಂಖ್ಯೆ ಇಪ್ಪತ್ತೊಂಬತ್ತು ಎಂದು ವರದಿಯಾಗಿದೆ. ಪಹಲ್ಗಾಮ್ ಸೇರಿದಂತೆ ಹಲವು ಸ್ಥಳಗಳಲ್ಲಿ ಬಿಗಿ ಭದ್ರತೆಯನ್ನು ಏರ್ಪಡಿಸಲಾಗಿದೆ.
ನಿನ್ನೆ (ಏಪ್ರಿಲ್ 22) ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್ನಲ್ಲಿ ಭಯೋತ್ಪಾದಕರು ಕ್ರೂರ ದಾಳಿ ನಡೆಸಿದ್ದಾರೆ. ಕಾಶ್ಮೀರದ ಸೌಂದರ್ಯವನ್ನು ನೋಡಲು ಬಂದಿದ್ದ ಪ್ರವಾಸಿಗರನ್ನು ಗುರಿಯಾಗಿಸಿಕೊಂಡು ಗುಂಡಿನ ದಾಳಿ ನಡೆಸಲಾಗಿದ್ದು, ಇಸ್ರೇಲ್ ಮತ್ತು ಇಟಲಿಯ ತಲಾ ಒಬ್ಬರು, ಇಬ್ಬರು ಸ್ಥಳೀಯರು, ಕರ್ನಾಟಕದ ಇಬ್ಬರು ಸೇರಿದಂತೆ ಒಟ್ಟು 29 ಜನರು ಮೃತಪಟ್ಟಿದ್ದಾರೆ. ಹಲವರು ಗಾಯಗೊಂಡಿದ್ದಾರೆ. ಈ ದಾಳಿಯ ಹೊಣೆಯನ್ನು ಲಷ್ಕರ್ ಎ ತೊಯ್ಬಾ ಉಗ್ರ ಸಂಘಟನೆಯೊಂದಿಗೆ ಸಂಬಂಧ ಹೊಂದಿರುವ ‘ದಿ ರೆಸಿಸ್ಟನ್ಸ್ ಫ್ರಂಟ್’ ವಹಿಸಿಕೊಂಡಿದೆ. ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್ ಪಟ್ಟಣದಿಂದ 6 ಕಿ.ಮೀ ದೂರದಲ್ಲಿರುವ ಪ್ರಸಿದ್ಧ ಪ್ರವಾಸಿ ತಾಣ ಬೈಸರನ್ ಕಣಿವೆಯ ಹುಲ್ಲುಗಾವಲಿನ ಪ್ರದೇಶವನ್ನು ವೀಕ್ಷಿಸುವಾಗ ಮಂಗಳವಾರ ಮಧ್ಯಾಹ್ನ 2.30ರ ಸುಮಾರಿಗೆ ಪ್ರವಾಸಿಗರನ್ನು ಸುತ್ತುವರೆದ ಭಯೋತ್ಪಾದಕರು ಮನಬಂದಂತೆ ಗುಂಡು ಹಾರಿಸಿದರು. ಕೆಲವು ಭಯೋತ್ಪಾದಕರು, ಹೆಸರುಗಳನ್ನು ಕೇಳುತ್ತಾ ಮತ್ತು ಗುರುತಿನ ಚೀಟಿಗಳನ್ನು ನೋಡುತ್ತಾ, ಹಿಂದೂಗಳನ್ನು ಗುಂಡು ಹಾರಿಸಿ ಕೊಂದರು. ವಿಶೇಷವಾಗಿ ಹಿಂದೂಗಳನ್ನು ಗುರಿಯಾಗಿಸಿಕೊಂಡಂತೆ ತೋರುತ್ತದೆ. ಇಡೀ ಜಗತ್ತು ಈ ಘಟನೆಯನ್ನು ಖಂಡಿಸುತ್ತಿದೆ. ಪ್ರಧಾನಿ ಮೋದಿ ಮತ್ತು ಗೃಹ ಸಚಿವ ಅಮಿತ್ ಷಾ ಭಯೋತ್ಪಾದಕರನ್ನು ನಿರ್ಮೂಲನೆ ಮಾಡದೇ ಬಿಡುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. (ಏಜೆನ್ಸೀಸ್)