ಪಹಲ್ಗಾಮ್​​ನಲ್ಲಿ ಪ್ರವಾಸಿಗರ ಮೇಲೆ ಉಗ್ರರ ದಾಳಿ: ಪಾಕಿಸ್ತಾನಕ್ಕೆ ಶುರುವಾಯ್ತು ನಡುಕ, ಗಡಿಗೆ ಬಂತು ವಿಮಾನ? Pahalgam Terror Attack

Pahalgam Terror Attack
Published on

Pahalgam Terror Attack : ನಿನ್ನೆ (ಏಪ್ರಿಲ್​ 22) 28 ಅಮಾಯಕರ ಪ್ರಾಣವನ್ನು ಬಲಿ ತೆಗೆದುಕೊಂಡ ಭಯೋತ್ಪಾದಕ ದಾಳಿಯಿಂದ ಇಡೀ ದೇಶವೇ ಆಘಾತಕ್ಕೊಳಗಾಗಿದೆ. 2019, ಫೆಬ್ರವರಿ 14ರಂದು ಪುಲ್ವಾಮಾದಲ್ಲಿ ನಡೆದ ಭಯೋತ್ಪಾದಕ ದಾಳಿಯಲ್ಲಿ 40 ಯೋಧರು ವೀರ ಮರಣ ಹೊಂದಿದ ನಂತರ, ಜಮ್ಮು ಮತ್ತು ಕಾಶ್ಮೀರವನ್ನು ಬೆಚ್ಚಿಬೀಳಿಸಿದ ಮತ್ತೊಂದು ಹತ್ಯಾಕಾಂಡ ಮಂಗಳವಾರ ಪಹಲ್ಗಾಮ್‌ನ ಪ್ರವಾಸಿ ತಾಣದಲ್ಲಿ ನಡೆದಿದೆ. ಆಗ ಸೈನಿಕರನ್ನು ಗುರಿಯಾಗಿಸಿಕೊಂಡಿದ್ದ ಉಗ್ರರು ಇಂದು ಅಮಾಯಕ ಪ್ರವಾಸಿಗರನ್ನು ಗುರಿಯಾಗಿಸಿಕೊಂಡು ಗುಂಡಿನ ಮಳೆ ಸುರಿಸಿದ್ದಾರೆ.

ಈ ಘಟನೆಯ ಬೆನ್ನಲ್ಲೇ ಗುಡುಗಿರುವ ಪ್ರಧಾನಿ ನರೇಂದ್ರ ಮೋದಿ, ಈ ದಾಳಿಗೆ ಕಾರಣರಾದವರನ್ನು ಯಾವುದೇ ಕಾರಣಕ್ಕೂ ಬಿಡಲಾಗುವುದಿಲ್ಲ ಎಂದು ಹೇಳಿರುವುದರಿಂದ ಭಯೋತ್ಪಾದಕ ಶಿಬಿರಗಳಲ್ಲಿ ನಡುಕ ಉಂಟಾಗಿದೆ. ಯಾವುದೇ ಕ್ಷಣದಲ್ಲಿ ಪ್ರತೀಕಾರವನ್ನು ನಿರೀಕ್ಷಿಸಬಹುದಾಗಿ. ಅತ್ತ ಪಾಕಿಸ್ತಾನಕ್ಕೂ ನಡುಕ ಉಂಟಾಗಿದೆ.

ಭಾರತದಲ್ಲಿನ ಪರಿಸ್ಥಿತಿಯಿಂದ ಭಯಭೀತರಾಗಿರುವ ಪಾಕಿಸ್ತಾನ, ತನ್ನ ಗಡಿ ಭದ್ರತೆಯನ್ನು ಹೆಚ್ಚಿಸಿದೆ ಎಂದು ವರದಿಯಾಗಿದೆ. ಈ ನಿಟ್ಟಿನಲ್ಲಿ ಹಲವಾರು ಸಾಮಾಜಿಕ ಜಾಲತಾಣ ಪೋಸ್ಟ್‌ಗಳು ಕಾಣಿಸಿಕೊಂಡಿವೆ. ಆದರೆ, ಆ ಪೋಸ್ಟ್​ಗಳ ಅಧಿಕೃತತೆ ಬಗ್ಗೆ ಯಾವುದೇ ಖಚಿತತೆ ಇಲ್ಲ. ವೈರಲ್​ ಆಗಿರುವ ಪೋಸ್ಟ್​ಗಳ ಪ್ರಕಾರ, ಪಾಕಿಸ್ತಾನ ವಾಯುಪಡೆಯ (ಪಿಎಎಫ್) ವಿಮಾನವು ಕರಾಚಿಯ ದಕ್ಷಿಣ ವಾಯು ಕಮಾಂಡ್‌ನಿಂದ ಲಾಹೋರ್ ಮತ್ತು ರಾವಲ್ಪಿಂಡಿ ಬಳಿಯ ಉತ್ತರ ಪ್ರದೇಶಗಳ ಕಡೆಗೆ ಹಾರುತ್ತಿರುವುದನ್ನು ತೋರಿಸುತ್ತದೆ.

ವೈರಲ್​ ಆಗಿರುವ ಸ್ಕ್ರೀನ್‌ಶಾಟ್‌ಗಳು ಫ್ಲೈಟ್ ಟ್ರ್ಯಾಕಿಂಗ್ ವೆಬ್‌ಸೈಟ್ ಫ್ಲೈಟ್ ರಾಡಾರ್ 24 ರಿಂದ ಬಂದಿವೆ. ಇದನ್ನು ಇಂಡಿಯಾ ಟುಡೇ ವರದಿ ಮಾಡಿದೆ. ಭಾರತದ ಉತ್ತರ ಗಡಿಗಳಿಗೆ ಹತ್ತಿರದಲ್ಲಿರುವ ಪಾಕಿಸ್ತಾನ ವಾಯುಪಡೆಯ ವಾಯುನೆಲೆಗಳಾಗಿವೆ. ಇದು ಪಾಕಿಸ್ತಾನ ವಾಯುಪಡೆಯ ಅತ್ಯಂತ ಪ್ರಮುಖ ವಾಯುನೆಲೆಯೂ ಕೂಡ ಹೌದು. ವಿಐಪಿ ಪ್ರಯಾಣ ಮತ್ತು ಗುಪ್ತಚರ ಕಾರ್ಯಾಚರಣೆಗಳಿಗೆ ಬಳಸುವ ಸಿ -130 ಇ ಸಾರಿಗೆ ವಿಮಾನಗಳು ಮತ್ತು ಸಣ್ಣ ವಿಮಾನಗಳು ಭಾರತದ ಗಡಿಯ ಹತ್ತಿರ ಬಂದಿವೆ. ಆದಾಗ್ಯೂ, ಈ ವಿಷಯದಲ್ಲಿ ಪಾಕಿಸ್ತಾನದ ಕಡೆಯಿಂದ ಯಾವುದೇ ಅಧಿಕೃತ ದೃಢೀಕರಣ ಬಂದಿಲ್ಲ.

ಪುಲ್ವಾಮಾ ದಾಳಿಗೆ ಪ್ರತೀಕಾರವಾಗಿ 2019ರ ಫೆಬ್ರವರಿಯಲ್ಲಿ ಭಾರತ ಪಾಕಿಸ್ತಾನದ ಮೇಲೆ ನಡೆಸಿದ ವಾಯುದಾಳಿಯಲ್ಲಿ 325 ಭಯೋತ್ಪಾದಕರು ಸಾವಿಗೀಡಾಗಿದ್ದರು ಮತ್ತು ಜೈಶ್-ಎ-ಮೊಹಮ್ಮದ್​ನ ಮೂರು ಶಿಬಿರಗಳನ್ನು ನಾಶಪಡಿಸಲಾಗಿತ್ತು. ಇದನ್ನು ಈಗಲೂ ಪಾಕಿಸ್ತಾನ ನೆನಪಿಸಿಕೊಳ್ಳುತ್ತದೆ. ಈ ಒಂದು ಪ್ರತೀಕಾರ ಪಾಕಿಸ್ತಾನಿ ಸೇನೆಗೆ ತೀವ್ರ ಮುಜುಗರವನ್ನು ಉಂಟುಮಾಡಿತು. ಇದೀಗ ಪಹಲ್ಗಾಮ್ ಮೇಲೆ ಉಗ್ರರು ದಾಳಿ ಮಾಡಿದ್ದು, ಭಾರತ ಮತ್ತೆ ಪ್ರತೀಕಾರ ತೀರಿಸಿಕೊಳ್ಳುತ್ತದೆ ಎಂಬ ಭಯವೇ ಪಾಕಿಸ್ತಾನ ಗಡಿಯಲ್ಲಿ ಭದ್ರತೆಯನ್ನು ಬಿಗಿಗೊಳಿಸಲು ಕಾರಣವಾಗಿರಬಹುದು ಎಂಬ ಚರ್ಚೆ ನಡೆಯುತ್ತಿದೆ.

40 ಸಿಆರ್‌ಪಿಎಫ್ ಯೋಧರ ಹತ್ಯಾಕಾಂಡಕ್ಕೆ ಪ್ರತೀಕಾರವಾಗಿ, 12 ದಿನಗಳ ನಂತರ, 2019, ಫೆಬ್ರವರಿ 26ರಂದು, ಭಾರತೀಯ ಯುದ್ಧ ವಿಮಾನಗಳು ಪಾಕಿಸ್ತಾನದ ವಾಯುಪ್ರದೇಶವನ್ನು ಉಲ್ಲಂಘಿಸಿ, ಜೈಶ್-ಎ-ಮೊಹಮ್ಮದ್ ಭಯೋತ್ಪಾದಕರ ಮೂರು ಶಿಬಿರಗಳ ಮೇಲೆ ಬಾಂಬ್ ದಾಳಿ ನಡೆಸಿದವು. ಜೈಶ್ ಮುಖ್ಯಸ್ಥ ಮಸೂದ್ ಅಜರ್‌ನ ಬಲಗೈ ಬಂಟ ಮತ್ತು ಸೋದರ ಮಾವ ಯೂಸುಫ್ ಅಜರ್ ಮತ್ತು ಭಾರತ ಗುರಿಯಾಗಿಸಿಕೊಂಡ ಇತರ ಕೆಲವು ಪ್ರಮುಖ ಭಯೋತ್ಪಾದಕರು ಸೇರಿದಂತೆ 325 ಜನರು ಮೃತಪಟ್ಟರು.

ಬೆಳಗಿನ ಜಾವ 3.45 ರಿಂದ 4.06 ರವರೆಗೆ ನಡೆದ 21 ನಿಮಿಷಗಳ ಕಾರ್ಯಾಚರಣೆಯಲ್ಲಿ, ಹನ್ನೆರಡು ಮಿರಾಜ್ 2000 ಫೈಟರ್ ಜೆಟ್‌ಗಳು 1000 ಕೆಜಿ ತೂಕದ ನಿಖರ-ನಿರ್ದೇಶಿತ ಬಾಂಬ್‌ಗಳನ್ನು ಬೀಳಿಸಿದವು. ದಾಳಿಗಳು ಆಕ್ರಮಿತ ಕಾಶ್ಮೀರದ ಬಾಲಕೋಟ್, ಮುಜಫರಾಬಾದ್ ಮತ್ತು ಚಕೋಟಿಯಲ್ಲಿರುವ ಜೈಶ್-ಎ-ಮೊಹಮ್ಮದ್‌ನ ಅತಿದೊಡ್ಡ ಭಯೋತ್ಪಾದಕ ತರಬೇತಿ ಶಿಬಿರಗಳನ್ನು ಗುರಿಯಾಗಿಸಿಕೊಂಡವು. ಹೀಗಾಗಿ, ಪಹಲ್ಗಾಮ್​ ದಾಳಿಗೂ ಪ್ರತೀಕಾರ ತೀರಿಸಿಕೊಳ್ಳುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ಹೀಗಾಗಿ ಪಾಕಿಸ್ತಾನದಲ್ಲೂ ಸೇನಾ ಚಟುವಟಿಕೆ ಜೋರಾಗಿದೆ ಎನ್ನಲಾಗಿದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net