ಡೆಬ್ಯೂ ನಿರ್ದೇಶಕರ ಜತೆ ಕೆಲಸ ಮಾಡೋದಿಲ್ಲ! ನಟ ವಿಜಯ ದೇವರಕೊಂಡ ಹೇಳಿಕೆಯ ಹಿಂದಿದೆ ಈ ಕಾರಣ

WhatsApp-Image-2024-03-31-at-9.59.20-PM
Published on

ಆಂಧ್ರಪ್ರದೇಶ: ಟಾಲಿವುಡ್​ ಸೆನ್ಸೇಷನಲ್ ನಟ ವಿಜಯ್ ದೇವರಕೊಂಡ ಸದ್ಯ ಒಂದಲ್ಲ ಒಂದು ವಿಚಾರಗಳಿಂದ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ಚರ್ಚೆಯಲ್ಲಿರುತ್ತಾರೆ. ಅದೇ ರೀತಿ ಇದೀಗ ಮತ್ತೊಂದು ವಿಷಯದಿಂದ ಸುದ್ದಿಯಾಗಿದ್ದು, ತಮ್ಮ ಮುಂಬರುವ ಸಿನಿಮಾ ಪ್ರಚಾರದ ವೇಳೆ ನೀಡಿದ ಹೇಳಿಕೆಯಿಂದ ವ್ಯಾಪಕ ಟೀಕೆಗೆ ಗುರಿಯಾಗಿದ್ದಾರೆ.

ತಮ್ಮ ಮುಂದಿನ ಬಹುನಿರೀಕ್ಷಿತ ಫ್ಯಾಮಿಲಿ ಸ್ಟಾರ್ ಚಿತ್ರದಲ್ಲಿ ಕಾಣಿಸಿಕೊಳ್ಳಲಿರುವ ವಿಜಯ ದೇವರಕೊಂಡ ಸಿನಿಮಾ ಇದೇ ಏಪ್ರಿಲ್ 5ರಂದು ತಮಿಳು ಸೇರಿದಂತೆ ಇತರೆ ಭಾಷೆಗಳಲ್ಲಿ ಏಕಕಾಲಕ್ಕೆ ಬಹುತೇಕ ಚಿತ್ರಮಂದಿರಗಳಲ್ಲಿ ತೆರೆಕಾಣಲಿದೆ. ವಿಜಯ್​ಗೆ ನಾಯಕಿಯಾಗಿ ಸೀತಾ ರಾಮಂ ನಟಿ ಮೃಣಾಲ್ ಠಾಕೂರ್ ಮುಖ್ಯಭೂಮಿಕೆಯಲ್ಲಿದ್ದಾರೆ. ಈ ಚಿತ್ರವನ್ನು ಪರಶುರಾಮ್ ನಿರ್ದೇಶಿಸಿದ್ದಾರೆ.

ಸದ್ಯ ಚಿತ್ರದ ಪ್ರಚಾರ ಕೆಲಸದಲ್ಲಿ ನಿರತರಾಗಿರುವ ದೇವರಕೊಂಡ, ತಮಿಳು ಭಾಷೆಯಲ್ಲಿ ರಿಲೀಸ್​ಗೆ ಸಿದ್ಧವಿರುವ ಸಿನಿಮಾದ ಪ್ರಚಾರಕ್ಕೆ ಆಗಮಿಸಿದ್ದರು. ಈ ವೇಳೆ ಸಂದರ್ಶಕರೊಬ್ಬರು ವಿಜಯ್ ತಮಿಳು ಚಿತ್ರರಂಗದ ಡೆಬ್ಯೂ ನಿರ್ದೇಶಕರಿಗೆ ನಿಮ್ಮ ಸಿನಿಮಾ ಮಾಡಲು ಅವಕಾಶ ಕೊಡ್ತೀರಾ ಎಂದು ಕೇಳಿದರು. ಇದಕ್ಕೆ ಉತ್ತರಿಸಿದ ನಟ, ಇಲ್ಲ ನಾನು ಚೊಚ್ಚಲ ನಿರ್ದೇಶನಕ್ಕೆ ಮುಂದಾಗುವ ಡೈರೆಕ್ಟರ್​ಗಳೊಂದಿಗೆ ಸಿನಿಮಾ ಮಾಡೋದಿಲ್ಲ ಎಂದರು.

ಇದಕ್ಕೆ ಸೂಕ್ತ ಕಾರಣವೂ ನೀಡಿದ ವಿಜಯ್​, “ಇಲ್ಲ, ನಾನು ಈಗ ಡೆಬ್ಯೂ ನಿರ್ದೇಶಕರೊಂದಿಗೆ ಕೆಲಸ ಮಾಡುವುದಿಲ್ಲ. ಕನಿಷ್ಠ ಅವರು ಒಂದು ಚಿತ್ರವಾದ್ರೂ ಮಾಡಿರಬೇಕು. ನೀವು ನೇರವಾಗಿ ಸೆಟ್‌ಗೆ ಬಂದರೆ ಅಲ್ಲಿನ ವಿಷಯಗಳನ್ನು ನಿಭಾಯಿಸುವುದು ಬಹುದೊಡ್ಡ ಸವಾಲಾಗುತ್ತದೆ. ಬಜೆಟ್ ಮತ್ತು ಚಿತ್ರತಂಡವನ್ನು ನಿಭಾಯಿಸಲು ಸಾಕಷ್ಟು ಒತ್ತಡವಿರುತ್ತದೆ. ಕನಿಷ್ಠ ಒಂದು ಫಿಲಂ ಮಾಡಿದ್ರೆ ಅವರಿಗೆ ಹೇಗೆ ನಿರ್ವಹಿಸಬೇಕು ಎಂಬ ಲೆಕ್ಕಾಚಾರ ಇರುತ್ತದೆ. ಇದೊಂದು ರೀತಿ ಅಭ್ಯಾಸ ಪಂದ್ಯ ಮತ್ತು ವಾರ್ಮ್​ ಅಪ್ ಇದ್ದಂತೆ" ಎಂದರು.

ಮಾತು ಮುಂದುವರೆಸಿದ ವಿಜಯ್ ದೇವರಕೊಂಡ, “ನನ್ನ ನಿರ್ದೇಶಕರು ನನ್ನನ್ನು ಬಳಸಿಕೊಳ್ಳಲು ಸಂಪೂರ್ಣವಾಗಿ ಸಿದ್ಧರಾಗಿರಬೇಕು. ನಾನೀಗ ಡೆಬ್ಯೂ ನಿರ್ದೇಶಕರೊಟ್ಟಿಗೆ ಕೆಲಸ ಮಾಡಲು ಬಯಸುವುದಿಲ್ಲ. ನನಗೆ ಅವರ ಸಂಗೀತ ಪ್ರಜ್ಞೆ, ಎಡಿಟಿಂಗ್ ಯೋಚನೆ ಮತ್ತು ಕಥಾಹಂದರ ವಿಶ್ಲೇಷಿಸುವ ವಿಧಾನ ಸೂಕ್ಷ್ಮವಾಗಿ ಗಮನಿಸುತ್ತೇನೆ. ಅವರ ಸಿನಿಮಾ ಯಶಸ್ವಿ ಆಗಲೇ ಬೇಕಂತೇನಿಲ್ಲ. ನನಗೆ ಅವರು ಹಿಡಿಸಿದ್ರೆ, ಯಾರೊಂದಿಗಾದರೂ ಕೆಲಸ ಮಾಡಲು ಸಿದ್ಧ" ಎಂದಿದ್ದಾರೆ. ಸದ್ಯ ನಟನ ಈ ಹೇಳಿಕೆಗೆ ನೆಟ್ಟಿಗರಿಂದ ಮಿಶ್ರ ಪ್ರತಿಕ್ರಿಯೆಗಳು ವ್ಯಕ್ತವಾಗುತ್ತಿವೆ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net