

Vaibhav Suryavanshi: ನಿನ್ನೆ (ಏ.28) ರಾಜಸ್ಥಾನದ ಸವಾಯಿ ಮಾನ್ಸಿಂಗ್ ಕ್ರೀಡಾಂಗಣದಲ್ಲಿ ಐಪಿಎಲ್ ಇತಿಹಾಸದಲ್ಲೇ ಹೊಸ ದಾಖಲೆ ನಿರ್ಮಾಣವಾಯಿತು. ಗುಜರಾತ್ ಟೈಟಾನ್ಸ್ ವಿರುದ್ಧ ನಡೆದ ಐಪಿಎಲ್ ಪಂದ್ಯದಲ್ಲಿ ಆರ್ಆರ್ ಪರ ಸ್ಫೋಟಕ ಇನ್ನಿಂಗ್ಸ್ ಆಡಿದ 14 ವರ್ಷದ ವೈಭವ್ ಸೂರ್ಯವಂಶಿ, ಕೇವಲ 35 ಎಸೆತಗಳಲ್ಲಿ 7 ಬೌಂಡರಿ ಮತ್ತು 11 ಸಿಕ್ಸರ್ಗಳ ನೆರವಿನಿಂದ ಶತಕ ಗಳಿಸಿದರು. ಈ ಮೂಲಕ ರಾಜಸ್ಥಾನ ರಾಯಲ್ಸ್ ತಂಡವನ್ನು ಸೋಲಿನಿಂದ ಗೆಲುವಿನ ಹಳಿಗೆ ತಂದರು. ಸೂರ್ಯವಂಶಿಯ ಸಿಡಿಲಬ್ಬರದ ಬ್ಯಾಟಿಂಗ್ ನೋಡಿ ಇದೀಗ ವಿಶ್ವ ಕ್ರಿಕೆಟ್ ಬೆರಗಾಗಿದೆ.
ಯಶಸ್ವಿ ಜೈಸ್ವಾಲ್ ಮತ್ತು ವೈಭವ್ ಸೂರ್ಯವಂಶಿ ಮೊದಲ ಬಾಲ್ನಿಂದಲೇ ಗುಜರಾತ್ ಬೌಲರ್ಗಳ ಬೆವರಿಳಿಸಿದರು. ಇವರಿಬ್ಬರ ಪೈಕಿ ಸ್ಫೋಟಕ ಇನ್ನಿಂಗ್ಸ್ ನೀಡಿದ ವೈಭವ್, ಕೇವಲ 36 ಎಸೆತದಲ್ಲಿ ಭರ್ಜರಿ ಶತಕ (101 ರನ್) ಬಾರಿಸುವ ಮೂಲಕ ಹೊಸ ದಾಖಲೆಗೆ ಸಾಕ್ಷಿಯಾದರು. ಪ್ರಸಿದ್ಧ್ ಕೃಷ್ಣ ಅವರ ಬೌಲಿಂಗ್ನಲ್ಲಿ ವಿಕೆಟ್ ಕಳೆದುಕೊಂಡ ಸೂರ್ಯವಂಶಿ, ತಂಡಕ್ಕೆ ಗೆಲುವಿನ ಸೂಚನೆಯನ್ನು ಅದಾಗಲೇ ನೀಡಿದ್ದರು.
ಸಚಿನ್ ತೆಂಡೂಲ್ಕರ್ ಅವರಂತಹ ದಿಗ್ಗಜ ಕ್ರಿಕೆಟಿಗರಿಂದ ಅಪಾರ ಮೆಚ್ಚುಗೆ, ಶ್ಲಾಘನೆ ಸ್ವೀಕರಿಸಿರುವ ವೈಭವ್ ಸೂರ್ಯವಂಶಿ, ಕೇವಲ ಐಪಿಎಲ್ ಪ್ರಿಯರಿಂದ ಮಾತ್ರವಲ್ಲದೇ ವಿದೇಶಿ ಕ್ರಿಕೆಟ್ ದಿಗ್ಗಜರ ಹುಬ್ಬೇರಿಸುವಲ್ಲಿ ಯಶಸ್ವಿಯಾಗಿದ್ದಾರೆ. ರಶೀದ್ ಖಾನ್, ಮೊಹಮ್ಮದ್ ಸಿರಾಜ್ ಮತ್ತು ಇಶಾಂತ್ ಶರ್ಮರಂತಹ ಡೆಂಜರೆಸ್ ಬೌಲರ್ಗಳ ಬೆವರಿಳಿಸಿದ ವೈಭವ್, ಈಗಾಗಲೇ ಎದುರಾಳಿ ತಂಡಗಳಿಗೆ ತಮ್ಮ ಅಬ್ಬರದ ಬ್ಯಾಟಿಂಗ್ ಮೂಲಕ ಸವಾಲಿನ ಸಂದೇಶ ರವಾನಿಸಿದ್ದಾರೆ.
ಕೇವಲ 14 ವರ್ಷದಲ್ಲೇ ಈ ಮೈಲಿಗಲ್ಲು ಸಾಧನೆಗೈದ ವೈಭವ್, ತನ್ನ ಯಶಸ್ಸಿನ ಹಾದಿ ಕುರಿತು ಮನಬಿಚ್ಚಿ ಮಾತನಾಡಿದ್ದಾರೆ. "ಐಪಿಎಲ್ನಲ್ಲಿ ಶತಕ ಬಾರಿಸುವುದು ಒಂದು ದೊಡ್ಡ ಕನಸೇ ಆಗಿತ್ತು. ಇಲ್ಲಿ ನನಗೆ ಯಾವುದೇ ಭಯವಿಲ್ಲ. ಜನ ಏನು ಹೇಳ್ತಾರೆ ಅನ್ನೋದರ ಬಗ್ಗೆ ನಾನು ಹೆಚ್ಚು ತಲೆಕೆಡಿಸಿಕೊಳ್ಳುವುದಿಲ್ಲ. ನನ್ನ ಕೆಲಸ ಉತ್ತಮ ಪ್ರದರ್ಶನ ನೀಡುವುದಷ್ಟೇ. ಆಡಿದ ಮೂರನೇ ಐಪಿಎಲ್ ಪಂದ್ಯದಲ್ಲಿ ಶತಕ ಗಳಿಸಿದ್ದು ಭಾರೀ ಸಂತಸ ನೀಡಿದೆ. ಕಳೆದ ನಾಲ್ಕು ತಿಂಗಳಿಂದ ಹೆಚ್ಚಿನ ಅವಧಿ ಶ್ರಮಿಸಿದ್ದೇನೆ" ಎಂದರು.
"ನಾನು ಬೌಲರ್ಗಳನ್ನು ನೋಡುವುದೇ ಇಲ್ಲ. ನನ್ನ ಸಂಪೂರ್ಣ ಗಮನ ಕೇವಲ ಪಂದ್ಯದ ಸ್ಥಿತಿ-ಗತಿ ಮೇಲೆ ಮಾತ್ರ ನಿಂತಿರುತ್ತದೆ. ಯಶಸ್ವಿ ಜೈಸ್ವಾಲ್ ಜೊತೆಗೆ ಬ್ಯಾಟಿಂಗ್ ಮಾಡುವಾಗ ನನ್ನಲ್ಲಿದ್ದ ವಿಶ್ವಾಸ ಮತ್ತಷ್ಟು ಹೆಚ್ಚಿತು. ಕ್ರೀಸ್ನಲ್ಲಿದ್ದ ಅಷ್ಟು ಸಮಯ ಅವರು ನನ್ನೊಂದಿಗೆ ಆಗಾಗ್ಗೆ ಮಾತನಾಡುತ, ಒಂದಷ್ಟು ಸಲಹೆಗಳನ್ನು ಕೊಡುತ್ತಿದ್ದರು" ಎಂದು ವೈಭವ್ ಹೇಳಿದ್ದಾರೆ,(ಏಜೆನ್ಸೀಸ್).