ಮೂಕ ಜೀವಿಯ ಪ್ರಾಣಕ್ಕೆ ಬೆಲೆ ಇಲ್ಲವೇ? ಗಾಳಿಪಟ ದಾರ ಸಿಲುಕಿ ವಿಲವಿಲ ಒದ್ದಾಡಿ ಜೀವಬಿಟ್ಟ ಪಾರಿವಾಳ! Kite Thread

ವಿಜಯವಾಣಿ - 2025-04-29T162515.460
Published on

Kite Thread: ಮನುಷ್ಯನ ಬದುಕಿಗೆ ಒಂದಲ್ಲ ಒಂದು ದಾರಿ, ಉಪಾಯವಿದೆ. ಆದರೆ, ಪ್ರಾಣಿಗಳಿಗೆ ಹಾಗಲ್ಲ. ಮಾತನಾಡಲು ಬಾರದ ಜೀವಿಗಳ ಬದುಕು ಕಷ್ಟಕರ. ಯಾವುದು ಉಪಾಯ, ಅಪಾಯ ಎಂಬುದರ ಸ್ಪಷ್ಟ ಅರಿವಿಲ್ಲದ ಈ ಮೂಕ ಜೀವಿಗಳು, ಮನುಷ್ಯನ ಮೋಜಿಗೆ, ಬೇಜವಾಬ್ದಾರಿ ತನಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಬಲಿಯಾಗುತ್ತವೆ. ಅಂತಹ ಒಂದು ದಾರುಣ ಘಟನೆ ಬೆಂಗಳೂರಿನಲ್ಲಿ ವರದಿಯಾಗಿದೆ.

ಶ್ರೀನಗರ ವಾರ್ಡ್ ನ ಕಾಳಪ್ಪ ಬ್ಲಾಕ್ 1 ಎ ಕ್ರಾಸ್ ನ ಮರವೊಂದರಲ್ಲಿ ಗಾಳಿಪಟದ ದಾರ‌ ಸಿಲುಕಿದ್ದು, ಇದ್ಯಾವುದರ ಪರಿವೇ ಇಲ್ಲದ ಅಮಾಯಕ ಪಾರಿವಾಳದ ಜೀವ ಹೋಗಿದೆ. ಇಂದು ಮಧ್ಯಾಹ್ನ 1 ಗಂಟೆ ಸುಮಾರಿನಲ್ಲಿ ಇಲ್ಲಿನ ಮನೆಯೊಂದರ ಎರಡನೇ ಮಹಡಿಯಲ್ಲಿ ವಾಸವಿರುವ ಪತ್ರಕರ್ತೆ ಸುನೀತಾ ಅನಂತರಾಜು ಅವರ ಕಣ್ಣಿಗೆ ಈ ಪಾರಿವಾಳ ಮರದ ಮೇಲೆ ನೇತಾಡುತ್ತಾ ವಿಲವಿಲ ಒದ್ದಾಡುತ್ತಿರುವುದು ಕಂಡಿದೆ. ಕೂಡಲೇ ಅವರು ಅದರ ರಕ್ಷಣೆಗಾಗಿ ಅಕ್ಕಪಕ್ಕದವರನ್ನ ಕರೆದಿದ್ದು, 1ನೇ ಮಹಡಿಯಲ್ಲಿ ವಾಸವಿರುವ ಸಾಫ್ಟ್‌ವೇರ್ ಇಂಜಿನಿಯರ್ ಶ್ರೀನಿವಾಸನ್ ಎಂಬುವವರು ಪಕ್ಕದ ಮನೆಯ ಛಾವಣಿ ಮೇಲೆ ಹತ್ತಿ ಗಾಳಿಪಟದ ದಾರ‌ ಕತ್ತರಿಸಿ ಪಾರಿವಾಳದ ಜೀವ ಉಳಿಸಲು ಯತ್ನಿಸಿದ್ದರಾದರೂ ಫಲಿಸಲಿಲ್ಲ.

ಮರಕ್ಕೆ ಸಿಲುಕಿದ್ದ ವೈರ್​ನಂತೆ ಇದ್ದ ಗಟ್ಟಿದಾರವು ಪಾರಿವಾಳದ ರೆಕ್ಕೆ ತುಂಬೆಲ್ಲಾ ಸುತ್ತಿಕೊಂಡಿದ್ದು, ಮರ ಹತ್ತಿ ಬಿಡಿಸೋಕು ಅದು ಸುರಕ್ಷಿತ ಅಲ್ಲ. ಪಾರಿವಾಳ ಇದ್ದ ಸ್ಥಳಕ್ಕೆ ಮರ ಹತ್ತಿ ಹೋಗೋಕೆ ಆಗುತ್ತಿರಲಿಲ್ಲ. ಹಾಗಾಗಿ ತಕ್ಷಣಕ್ಕೆ ಸಿಕ್ಕ ನೀರಿನ ಪೈಪ್ ಗೆ ಚಾಕುವನ್ನ ಕಟ್ಟಿಕೊಂಡ ಶ್ರೀನಿವಾಸನ್, ಗಾಳಿಪಟದ ದಾರ ಕುಯ್ಯುವಷ್ಟರಲ್ಲೇ

ನೋಡನೋಡುತ್ತಿದ್ದಂತೆ ಪಾರಿವಾಳ ವಿಲವಿಲ ಒದ್ದಾಡುತ್ತಾ ಕೆಳಗಿಳಿಸುವ ಮುನ್ನವೇ ಪ್ರಾಣಬಿಟ್ಟಿತು.

ಪಾರಿವಾಳದ ರಕ್ಷಣೆಗೆ ಧಾವಿಸಿದ್ದ ಮತ್ತೊಬ್ಬ ಯುವಕ ಪಾರಿವಾಳ ಬದುಕಬಹುದು, ಈಗಷ್ಟೇ ಒದ್ದಾಡುತ್ತಿತ್ತು ಎಂದು ತಕ್ಷಣ ನೀರು ಚಿಮ್ಮಿಸಿ ಕುಡಿಸಲು ಯತ್ನಿಸಿದರೂ ಪಾರಿವಾಳ ಅಲುಗಾಡಲೇ ಇಲ್ಲ‌.

ಹೃದಯಾಘಾತ ಆಗಿರಬಹುದು ಎಂದು ಪಾರಿವಾಳವನ್ನ ಬದುಕಿಸಲು ಅದರ ಎದೆ ಭಾಗದತ್ತ ಶ್ರೀನಿವಾಸನ್, ಕೈಯಾಡಿಸುತ್ತಾ ರೆಕ್ಕೆಗೆ ಸುತ್ತಿಕೊಂಡ ದಾರ‌ ಬಿಡಿಸುತ್ತಿದ್ದರೆ, ಅತ್ತ 'ದೇವ್ರೇ ಆ‌ ಮೂಕ‌ ಜೀವಿ ಬದುಕಿದರೆ ಸಾಕಪ್ಪ, ಯಾರೋ‌ ಮಾಡಿದ ತಪ್ಪಿಗೆ ಇದಕ್ಯಾಕೆ ಶಿಕ್ಷೆ' ಎನ್ನುತ್ತಾ ಅಲ್ಲಿದ್ದ ಹಿರಿಯ ನಾಗರಿಕ ನಾರಾಯಣ್ ಮನದಲ್ಲೇ‌ ದೇವರನ್ನ ಕೇಳಿಕೊಂಡರೂ ಫಲಿಸಲಿಲ್ಲ. ಒಂದೆರಡು ನಿಮಿಷ ಬೇಗ ಕೈಗೆ ಸಿಕ್ಕಿದ್ದರೂ ಪ್ರಾಣ ಉಳಿಯುತ್ತಿತ್ತು. ಕಣ್ಣೆದುರೇ ಅಮಾಯಕ ಮೂಕ ಜೀವಿಯ ದುರಂತ ಅಂತ್ಯ ಕಂಡ ದೃಶ್ಯ ಮನಕಲಕುವಂತಿತ್ತು.

ಇದೇ ವೇಳೆ ಮಾತಾಡಿದ ಸುನೀತಾ, "ಗಾಳಿಪಟ ಹಾರಿಸೋ ಕ್ರೇಜ್ ಗೆ ಪಕ್ಷಿಗಳ ಜೀವವೇ ಹೋಗ್ತಿದೆ. ಎಲ್ಲಿಂದಲೋ ಗಾಳಿಗೆ ತೂರಿಕೊಂಡು ಇಲ್ಲಿಗೆ ಬರ್ತಾವೆ. ನಮ್ಮ ಮನೆಯ ಟೆರೇಸ್ ಬಳಿ ವಾರಕ್ಕೆ ಒಂದೆರಡು ದಾರವನ್ನು ನಾನೇ ಕಿತ್ತು ಕಸದ ಬುಟ್ಟಿಗೆ ಹಾಕ್ತೀನಿ. ಒಂದು ಜೀವ ಉಳಿಸೋಕೆ ಆಗದ ಮೇಲೆ ಯಾಕೆ ಜೀವ ತೆಗೆಯೋ ಅಂತ ದಾರಗಳನ್ನು ಬಳಸಿ ಗಾಳಿಪಟ ಹಾರಿಸಬೇಕು. ಇವತ್ತು ಕಣ್ಣೆದುರೇ ಜೀವ ಹೋಯ್ತು‌. ಸಂಕಟ ಆಗ್ತಿದೆ" ಎಂದು ನೋವಿನಲ್ಲೇ ಅಸಮಾಧಾನ ಹೊರಹಾಕಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net