ರೈಲ್ವೆ ನಿಲ್ದಾಣದಲ್ಲಿ ತಂದೆ ಜತೆ ಕುಳಿತಿದ್ದ ಯುವತಿಯನ್ನು ಎಳೆದೊಯ್ದು ಅತ್ಯಾಚಾರ; ಕಾಮುಕ ಬಂಧನ |Railway Station

Railway Station
Published on

Railway Station: ರೈಲ್ವೆ ನಿಲ್ದಾಣದಲ್ಲಿ ತಂದೆ ಜತೆ ಕುಳಿತಿದ್ದ ಯುವತಿಯನ್ನು ಎಳೆದೊಯ್ದು ಸಾಮೂಹಿಕ ಅತ್ಯಾಚಾರ ಮಾಡಿದ ಘಟನೆ ಭಾನುವಾರ(ಏ.27) ಉತ್ತರ ಪ್ರದೇಶದಲ್ಲಿ ನಡೆದಿದೆ.

ತಂದೆಗೆ ವೈದ್ಯಕೀಯ ಚಿಕಿತ್ಸೆ ಕೊಡಿಸಲೆಂದು ಯುವತಿಯೊಬ್ಬಳು ಇಲ್ಲಿನ ಗೋಪಾಲ್‌ಗಂಜ್​​ಗೆ ಬಂದಿದ್ದಳು. ವೈದ್ಯರಿಂದ ಚಿಕಿತ್ಸೆ ಪಡೆದ ನಂತರ ತಂದೆ ಮಗಳಿಬ್ಬರು ಭಾನುವಾರ (ಏ.27) ರಾತ್ರಿ ಸಸಮುಸಾ ರೈಲ್ವೆ ನಿಲ್ದಾಣದಲ್ಲಿ ತಂಗಿದ್ದರು. ಆದರೆ, ತಮ್ಮ ಊರಿಗೆ ಹೋಗುವ ರೈಲನ್ನು ತಪ್ಪಿಸಿಕೊಂಡಿದ್ದರು. ಹೀಗಾಗಿ ರಾತ್ರಿಯಿಡೀ ನಿಲ್ದಾಣದಲ್ಲಿ ಉಳಿಯಬೇಕಾಯಿತು. ಬೆಳಗಿನ ಜಾವ 4 ಗಂಟೆ ಸುಮಾರಿಗೆ ಯುವತಿ ನೀರು ತರಲು ಹೋದಾಗ, ಮೂವರು ಯುವಕರು ಆಕೆಯ ಬಾಯಿ ಮುಚ್ಚಿ ಬಲವಂತವಾಗಿ ನಿರ್ಜನ ಪ್ರದೇಶಕ್ಕೆ ಕರೆದೊಯ್ದು ಸಾಮೂಹಿಕ ಅತ್ಯಾಚಾರ ಎಸಗಿದ್ದಾರೆ. ಹಲ್ಲೆಯ ನಂತರ ದಾಳಿಕೋರರು ಪರಾರಿಯಾಗಿದ್ದು, ಯುವತಿ ತೀವ್ರವಾಗಿ ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಘಟನೆ ಬಳಿಕ ಸಂತ್ರಸ್ತ ಮಹಿಳೆ ತನ್ನ ಪಾರ್ಶ್ವವಾಯು ಪೀಡಿತ ತಂದೆಗೆ ನಡೆದ ಘಟನೆಯನ್ನು ಸ್ಥಳೀಯರಿಗೆ ವಿವರಿಸಿದ್ದಾಳೆ. ಈ ಕುರಿತು ತಕ್ಷಣ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಕೂಡಲೇ ಸ್ಥಳಕ್ಕೆ ಧಾವಿಸಿದ ಪೊಲೀಸರು, ಸಂತ್ರಸ್ತೆಯ ವೈದ್ಯಕೀಯ ಪರೀಕ್ಷೆ ನಡೆಸಿದಾಗ ಸಾಮೂಹಿಕ ಅತ್ಯಾಚಾರ ದೃಢಪಟ್ಟಿದ್ದು, ಆಕೆಯ ಹೇಳಿಕೆಯ ಆಧಾರದ ಮೇಲೆ ಕುಚಾಯ್‌ಕೋಟ್ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.

ಇದೀಗ ಒಬ್ಬ ಆರೋಪಿಯನ್ನು ಬಂಧಿಸಲಾಗಿದ್ದು, ಕುಚಾಯ್ಕೋಟ್ ನಿವಾಸಿ ಅಭಿಷೇಕ್ ಬಿಂದ್ ಎಂದು ಗುರುತಿಸಲಾಗಿದೆ. ಬಂಧಿತ ಯುವಕನನ್ನು ವಿಚಾರಣೆ ನಡೆಸಲಾಗುತ್ತಿದ್ದು, ಉಳಿದ ಇಬ್ಬರು ಶಂಕಿತರನ್ನು ಶೀಘ್ರದಲ್ಲಿಯೇ ಪತ್ತೆ ಹಚ್ಚುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.( ಏಜೆನ್ಸೀಸ್ ​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net