

ಚೆನ್ನೈ: ಬಹುಭಾಷಾ ನಟಿ ಅಮಲಾ ಪೌಲ್ ಬಗ್ಗೆ ಕನ್ನಡಿಗರಿಗೆ ಹೆಚ್ಚೇನು ಹೇಳಬೇಕಿಲ್ಲ. ಏಕೆಂದರೆ, ನಟ ಕಿಚ್ಚ ಸುದೀಪ್ ಅಭಿನಯದ ಸೂಪರ್ ಹಿಟ್ ಹೆಬ್ಬುಲಿ ಸಿನಿಮಾ ನೋಡಿದವರಿಗೆ ಅಮಲಾ ಪೌಲ್ ಪರಿಚಯ ಇದ್ದೇ ಇರುತ್ತದೆ. ಕೇರಳ ಮೂಲದ ಅಮಲಾ, ನೀಲತಾಮರನ್ ಹೆಸರಿನ ಮಲಯಾಳಂ ಸಿನಿಮಾ ಮೂಲಕ ಚಿತ್ರರಂಗ ಪದಾರ್ಪಣೆ ಮಾಡಿದರು. ಆದರೆ, ಕಾಲಿವುಡ್ನ “ಮೈನಾ” ಚಿತ್ರದ ಬಳಿಕ ಅಮಲಾ ಅದೃಷ್ಟವೇ ಬದಲಾಯಿತು. ವಿಜಯ್, ವಿಕ್ರಮ್, ಸೂರ್ಯ, ಆರ್ಯ, ಜಯಂ ರವಿ, ಧನುಷ್ ಸೇರಿದಂತೆ ಕಾಲಿವುಡ್ ಸೂಪರ್ಸ್ಟಾರ್ಗಳ ಜೊತೆ ನಟಿಸಿದ್ದಾರೆ.
ಅಮಲಾ ಕುರಿತ ತಾಜಾ ಸುದ್ದಿಯೇನೆಂದರೆ, ಪ್ರಸ್ತುತ ಅವರು ಮಲಯಾಳಂ ನಟ ಪೃಥ್ವಿರಾಜ್ ಸುಕುಮಾರ್ ಅವರ ಆಡಿಜೀವಿಥಂ ಸಿನಿಮಾದಲ್ಲಿ ನಾಯಕಿಯಾಗಿದ್ದಾರೆ. ಈ ಸಿನಿಮಾವನ್ನು ರಾಷ್ಟ್ರ ಪ್ರಶಸ್ತಿ ವಿಜೇತ ಬ್ಲಸ್ಸಿ ಅವರು ನಿರ್ದೇಶಿಸಿದ್ದಾರೆ. ದಕ್ಷಿಣ ಭಾರತ ಸಿನಿಮಾ ರಂಗದ ಪ್ರತಿಭಾನ್ವಿತ ನಟಿಯರಲ್ಲಿ ಒಬ್ಬರೆನಿಸಿಕೊಂಡಿರುವ ಅಮಲಾ, ಯಾವುದೇ ಪಾತ್ರಗಳಿಗೂ ಜೀವ ತುಂಬ ಬಲ್ಲರು. ಅಗತ್ಯಬಿದ್ದರೆ ಬೆತ್ತಲೆಯಾಗಿಯೂ ನಟಿಸಬಲ್ಲರು. ಈಗಾಗಲೇ ಆದೈ ಸಿನಿಮಾದಲ್ಲಿ ಅದನ್ನು ನಿರೂಪಿಸಿದ್ದಾರೆ. ಈ ಸಿನಿಮಾ ಕೆಲವರ ಕೆಂಗಣ್ಣಿಗೆ ಗುರಿಯಾದರೆ, ಅನೇಕರು ಅಮಲಾ ಅವರ ನಟನೆಯನ್ನು ಮೆಚ್ಚಿಕೊಂಡರು.
ಅಂದಹಾಗೆ ಬಸ್ಲಿ ನಿರ್ದೇಶನದ ಆಡುಜೀವಿಥಂ ಸಿನಿಮಾ ಇಂಗ್ಲಿಷ್ನಲ್ಲಿ ದಿ ಗೋಟ್ ಲೈಫ್ ಹೆಸರಿನಲ್ಲಿ ಬಿಡುಗಡೆಯಾಗಲಿದೆ. ಕಳೆದ 10 ವರ್ಷಗಳಿಂದ ಚಿತ್ರತಂಡ ಈ ಸಿನಿಮಾಗಾಗಿ ಹಗಲಿರುಳು ಶ್ರಮಿಸಿದೆ. ಹಸಿವಿನ ಸಂಕಟ ಮತ್ತು ಮರುಭೂಮಿಯಲ್ಲಿ ವಲಸೆ ಜೀವಿಗಳ ಗುಲಾಮ ಜೀವನದ ಆಧಾರದ ಮೇಲೆ ಈ ಸಿನಿಮಾವನ್ನು ತಯಾರಿಸಲಾಗುತ್ತಿದೆ.
ಇತ್ತೀಚೆಗಷ್ಟೇ ಈ ಸಿನಿಮಾದ ಟ್ರೈಲರ್ ಬಿಡುಗಡೆಯಾಗಿದೆ. ಇದರಲ್ಲಿ ಪೃಥ್ವಿರಾಜ್ ಮತ್ತು ಅಮಲಾ ನಡುವೆ ಲಿಪ್ಲಾಕ್ ದೃಶ್ಯವಿದೆ. ನಿಜವಾಗಿಯೂ ಲಿಪ್ಲಾಕ್ ಮಾಡಿರುವಂತೆ ನೈಜವಾಗಿ ಅಭಿನಯಿಸಿದ್ದಾರೆ. ಇದೀಗ ಈ ಲಿಪ್ಲಾಕ್ ದೃಶ್ಯದ ಬಗ್ಗೆ ಅಮಲಾ ಅವರು ಇತ್ತೀಚಿನ ಸಂದರ್ಶನವೊಂದರಲ್ಲಿ ಮಾತನಾಡಿದ್ದು, ತುಂಬಾ ಬೋಲ್ಡ್ ಹೇಳಿಕೆ ನೀಡಿದ್ದಾರೆ.
ಈ ಸಿನಿಮಾಗೂ ನಾನು ಸಹಿ ಮಾಡುವ ಮುನ್ನ ಲಿಪ್ಲಾಕ್ ಇರುತ್ತದೆ ಎಂದು ನಿರ್ದೇಶಕರು ನನಗೆ ಹೇಳಿದರು. ನಾನು ಈ ಮುಂಚೆಯೇ ಓಕೆ ಎಂದಿದ್ದೆ. ಆ ದೃಶ್ಯಕ್ಕೆ ಲಿಪ್ಲಾಕ್ ಅವಶ್ಯಕತೆ ಇತ್ತು. ಹೀಗಾಗಿ ನಾನು ಮಾಡಿದೆ. ಇಷ್ಟೇ ಅಲ್ಲದೆ, ಕತೆ ಪೂರಕವಾಗಿದ್ದರೆ, ನಾನು ಬೆತ್ತಲೆಯಾಗಿ ನಟಿಸಲೂ ಕೂಡ ರೆಡಿ. ನಾನಿದನ್ನು ಈ ಹಿಂದೆಯೂ ಹೇಳಿದ್ದೇನೆ. ಬೆತ್ತಲೆಯಾಗಿಯೇ ನಟಿಸಲು ರೆಡಿಯಾಗಿರುವಾಗ ಈ ಲಿಪ್ಲಾಕ್ ದೃಶ್ಯವಲ್ಲ ಕಷ್ಟವೇ ಅಲ್ಲ ಎಂದು ಅಮಲಾ ಬೋಲ್ಡ್ ಹೇಳಿಕೆ ನೀಡಿದ್ದಾರೆ. (ಏಜೆನ್ಸೀಸ್)