

ಚೆನ್ನೈ: ಸಾಮಾಜಿಕ ಜಾಲತಾಣದಲ್ಲಿ ಖಾಸಗಿ ಫೋಟೋಗಳನ್ನು ಹರಿಬಿಟ್ಟ ಮಾಜಿ ಬಾಯ್ಫ್ರೆಂಡ್ ಭವ್ನಿಂದರ್ ಸಿಂಗ್ ವಿರುದ್ಧ ಹೈಕೋರ್ಟ್ ಮೆಟ್ಟಿಲೇರಿರುವ ನಟಿ ಅಮಲಾ ಪೌಲ್, ಮಾನನಷ್ಟ ಮೊಕದಮ್ಮೆ ಹೂಡಿದ್ದಾರೆ.
ಅಮಲಾ ಜತೆಯಲ್ಲಿ ತೆಗೆದ ಫೋಟೋಗಳನ್ನು ಭವ್ನಿಂದರ್ ಕಳೆದ ಮಾರ್ಚ್ನಲ್ಲಿ ತಮ್ಮ ಇನ್ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿದ್ದರು. ತಕ್ಷಣವೇ ಫೋಟೋಗಳು ವೈರಲ್ ಆಗಿತ್ತು. ಇದಾದ ಬೆನ್ನಲ್ಲೇ ಡಿಲೀಟ್ ಸಹ ಮಾಡಿದ್ದರು. ಅಲ್ಲದೆ, ಮಾರ್ಚ್ ತಿಂಗಳಲ್ಲಿ ಅಮಲಾರೊಂದಿಗೆ ಮದುವೆಯಾಗಿರುವುದಾಗಿಯೂ ಹೇಳಿಕೊಂಡಿದ್ದರು. ಆದರೆ, ಮದುವೆ ವಿಚಾರವನ್ನು ಅಮಲಾ ಅಲ್ಲಗೆಳೆದಿದ್ದಾರೆ.
ಭವ್ನಿಂದರ್ ಮತ್ತು ಅಮಲಾ 2018ರಲ್ಲಿ ನಿಶ್ಚಿತಾರ್ಥ ಮಾಡಿಕೊಂಡಿದ್ದರು ಎಂಬ ವಿಚಾರವೂ ಹರಿದಾಡಿತ್ತು. ಈ ಬಗ್ಗೆ ಅಮಲಾ ಸ್ಪಷ್ಟನೆ ನೀಡಿದ್ದು, ಫೋಟೋಗಳನ್ನು ವೃತ್ತಿಪರ ಉದ್ದೇಶಕ್ಕಾಗಿ ತೆಗೆದುಕೊಳ್ಳಲಾಗಿದ್ದು, ಅದನ್ನು ದುರ್ಬಳಕೆ ಮಾಡಿಕೊಳ್ಳಲಾಗಿದೆ ಎಂದು ಆರೋಪಿಸಿದ್ದಾರೆ. ಅಲ್ಲದೆ, ತನ್ನ ಫೋಟೋಗಳನ್ನು ಪ್ರಕಟಿಸುವುದಕ್ಕೆ ಭವ್ನಿಂದರ್ಗೆ ತಡೆಯಾಜ್ಞೆ ನೀಡಬೇಕೆಂದು ಕೋರ್ಟ್ ಮುಂದೆ ಮನವಿ ಮಾಡಿಕೊಂಡಿದ್ದರು.
ಇದೀಗ ಫೋಟೋಗಳನ್ನು ಹರಿಬಿಟ್ಟು ಹೆಸರಿಗೆ ಕಳಂಕ ತರಲು ಯತ್ನಿಸಿದ್ದಾರೆ ಎಂದು ಅಮಲಾ ಆರೋಪಿಸಿದ್ದು, ಭವ್ನಿಂದರ್ ವಿರುದ್ಧ ಮಾನಹಾನಿ ಪ್ರಕರಣ ದಾಖಲಿಸಿದ್ದಾರೆ. ಮಂಗಳವಾರವಷ್ಟೇ (ನ. 03) ಪ್ರಕರಣ ದಾಖಲಿಸಲು ಮದ್ರಾಸ್ ಹೈಕೋರ್ಟ್ ಅಮಲಾರಿಗೆ ಅನುಮತಿ ನೀಡಿತ್ತು.
ಇನ್ನು ಸಿನಿಮಾ ವಿಚಾರಕ್ಕೆ ಬರುವುದಾದರೆ ಆದೈ ಚಿತ್ರಕ್ಕೂ ಮುನ್ನ ಮದುವೆ ಹಾಗೂ ಡಿವೋರ್ಸ್ ವಿಚಾರದಲ್ಲಿ ಹೆಚ್ಚು ಸುದ್ದಿ ಮಾಡಿದ್ದರು. ಇನ್ನು ಕನ್ನಡಿಗರಿಗೆ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ನಟನೆ ಹೆಬ್ಬುಲಿ ಚಿತ್ರದ ಮೂಲಕ ಅಮಲಾ ಪರಿಚಿತರಾಗಿದ್ದಾರೆ. (ಏಜೆನ್ಸೀಸ್)