ಟಾಲಿವುಡ್​ ಸಿನಿ ಇಂಡಸ್ಟ್ರಿ ಬಗ್ಗೆ ಗಂಭೀರ ಆರೋಪ ಮಾಡಿದ ಹೆಬ್ಬುಲಿ ಬೆಡಗಿ ಅಮಲಾ ಪೌಲ್​!

Amala
Published on

ಹೈದರಾಬಾದ್​: ಬಹುಭಾಷಾ ನಟಿ ಅಮಲಾ ಪೌಲ್​ ಅವರು ನೀಲತಾಮರನ್​ ಹೆಸರಿನ ಮಲಯಾಳಂ ಸಿನಿಮಾ ಮೂಲಕ ಚಿತ್ರರಂಗ ಪದಾರ್ಪಣೆ ಮಾಡಿದರೂ ಕಾಲಿವುಡ್​ನ “ಮೈನಾ” ಚಿತ್ರ​ದ ಬಳಿಕ ಅವರ ಅದೃಷ್ಟವೇ ಬದಲಾಯಿತು. ವಿಜಯ್​, ವಿಕ್ರಮ್​, ಸೂರ್ಯ, ಆರ್ಯ, ಜಯಂ ರವಿ, ಧನುಷ್, ಕಿಚ್ಚ ಸುದೀಪ್​, ಅಲ್ಲು ಅರ್ಜುನ್​​ ಸೇರಿದಂತೆ ಸೂಪರ್​​ಸ್ಟಾರ್​ಗಳ ಜೊತೆ ನಟಿಸಿದ್ದಾರೆ.

ಬೆಜಾವಾಡ ಸಿನಿಮಾ ಮೂಲಕ ತೆಲುಗು ಸಿನಿಮಾ ಪ್ರಯಾಣವನ್ನು ಆರಂಭಿಸಿದ ಅಮಲಾ, ಇದ್ದರಮ್ಮಾಯಿಲತೋ, ನಾಯಕ್ ಮತ್ತು ಜೆಂದಾ ಪೈ ಕಪಿರಾಜು ಸಿನಿಮಾಗಳಲ್ಲಿ ನಟಿಸಿದ್ದಾರೆ. ಒಳ್ಳೆಯ ಖ್ಯಾತಿಯನ್ನು ಹೊಂದಿದ್ದರೂ ಟಾಲಿವುಡ್​ನಲ್ಲಿ ಮಾತ್ರ ಅಮಲಾ ಅವರು ಹೆಚ್ಚು ಕಾಲ ತಮ್ಮ ಸ್ಥಿರತೆ ಕಾಪಾಡಿಕೊಳ್ಳಲಿಲ್ಲ. ಈ ಬಗ್ಗೆ ಅಮಲಾ ಅವರು ಇತ್ತೀಚಿನ ಸಂದರ್ಶನದಲ್ಲಿ ಮಾತನಾಡಿದ್ದು, ತೆಲುಗು ಚಿತ್ರರಂಗದ ಬಗ್ಗೆ ಅವರು ನೀಡಿರುವ ಹೇಳಿಕೆ ಇದೀಗ ಭಾರೀ ಚರ್ಚೆಗೆ ಗ್ರಾಸವಾಗಿದೆ.

ಅಮಲಾ ಅವರು ಟಾಲಿವುಡ್​ಗೆ ಮೊದಲು ಪ್ರವೇಶ ನೀಡಿದಾಗ, ಇಡೀ ಟಾಲಿವುಡ್​ ಕೆಲ ದೊಡ್ಡ ಕುಟುಂಬಗಳ ನಿಯಂತ್ರಣದಲ್ಲಿದೆ ಎಂಬುದನ್ನು ಅರ್ಥ ಮಾಡಿಕೊಂಡರಂತೆ. ತೆಲುಗಿಗೆ ಪಾದಾರ್ಪಣೆ ಮಾಡಿದಾಗ ಇಲ್ಲಿನ ಬಹುತೇಕ ಚಿತ್ರಗಳಲ್ಲಿ ಇಬ್ಬರು ನಾಯಕಿಯರಿರುತ್ತಿದ್ದರು ಮತ್ತು ಇಬ್ಬರನ್ನು ತುಂಬಾ ಗ್ಲಾಮರಸ್ ಆಗಿ ತೋರಿಸಲಾಗಿತ್ತು ಎಂದಿದ್ದಾರೆ.

ಆ ಸಮಯದಲ್ಲಿ ತೆಲುಗು ಚಿತ್ರರಂಗ ಕೇವಲ ಕಮರ್ಸಿಯಲ್​ ಸಿನಿಮಾಗಳನ್ನು ಮಾತ್ರ ಮಾಡುತ್ತಿತ್ತು. ಕೇವಲ ಹಾಡು ಮತ್ತು ಲವ್​ ಸೀನ್​ಗಳಿಗೆ ಮಾತ್ರ ನಾಯಕಿಯರನ್ನು ಬಳಸಿಕೊಳ್ಳುತ್ತಿದ್ದರು. ಆದರೆ, ನನಗೆ ಅದೇ ರೀತಿಯ ಪಾತ್ರಗಳನ್ನು ಮಾಡಲು ಆಸಕ್ತಿ ಇರಲಿಲ್ಲ. ಹೀಗಾಗಿ ನಾನು ಬಹುಕಾಲದಿಂದ ತೆಲುಗು ಸಿನಿಮಾ ಇಂಡಸ್ಟ್ರಿಯಿಂದ ದೂರ ಉಳಿದಿದ್ದೇನೆ ಎಂದು ಸಂದರ್ಶನದಲ್ಲಿ ಹೇಳಿದ್ದಾರೆ.

ಅಮಲಾ ಅವರು 2021ರಲ್ಲಿ ನೆಟ್‌ಫ್ಲಿಕ್ಸ್​ನಲ್ಲಿ ತೆರೆಕಂಡ ಪಿಟ್ಟಾ ಕತಾಲು ಮೂಲಕ ತೆಲುಗು ಸಿನಿರಂಗಕ್ಕೆ ಪುನರಾಗಮನ ಮಾಡಿದರು. ಮುಂದಿನ ದಿನಗಳಲ್ಲಿ ಅವರು ನೇರ ತೆಲುಗು ಚಿತ್ರದೊಂದಿಗೆ ಬರುತ್ತಾರೆಯೇ ಎಂದು ನೋಡಬೇಕಿದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net