

Pregnant Wife: ಮುಂದಿನ 24 ಗಂಟೆಗಳಲ್ಲಿ ಹೆರಿಗೆ ಆಗಲಿದೆ ಎಂದು ವೈದ್ಯರು ಮುನ್ಸೂಚನೆ ನೀಡಿದ್ದರು. ಈ ವಿಷಯ ತಿಳಿದ ಬೆನ್ನಲ್ಲೇ ಮಗುವಿನ ಜನನಕ್ಕೆ ಕಾಯುತ್ತಿದ್ದ ಗರ್ಭಿಣಿ ಪತ್ನಿಯನ್ನು ನೇರವಾಗಿ ಕೊಂದ ಪಾಪಿ ಪತಿ, ಆಕೆಯೊಂದಿಗೆ ಇನ್ನು ಪ್ರಪಂಚ ಕಾಣದ ಜೀವವನ್ನೂ ಬಲಿಪಡೆದ ಸಂಗತಿ ಪೊಲೀಸರನ್ನೇ ಬೆಚ್ಚಿಬೀಳಿಸಿದೆ.
ಈ ಘಟನೆ ಆಂಧ್ರಪ್ರದೇಶದ ವಿಶಾಖಪಟ್ಟಣದಲ್ಲಿ ವರದಿಯಾಗಿದೆ. ಇನ್ನೇನು ಪತ್ನಿ ಹೆರಿಗೆಗೆ ಹೋಗಬೇಕು ಎನ್ನುವ ಮುನ್ನ ಆಕೆಯ ಕತ್ತು ಹಿಸುಕಿ ಸಾವಿನ ಕೂಪಕ್ಕೆ ದೂಡಿದ್ದಾನೆ. ಗರ್ಭಿಣಿ ಪತ್ನಿಯನ್ನು ಹತ್ಯೆಗೈದ ಬಳಿಕ ಯಾರ ಕಣ್ಣಿಗೂ ಬೀಳದಂತೆ ತಪ್ಪಿಸಿಕೊಳ್ಳಲು ಯತ್ನಿಸಿದ್ದ. ಆದರೆ, ಅಂತಿಮವಾಗಿ ಸಿಕ್ಕಿಬಿದ್ದಿದ್ದು, ಪತ್ನಿ ಅನುಷಾಳನ್ನು ತಾನೇ ಕೊಲೆ ಮಾಡಿರುವುದಾಗಿ ಸತ್ಯ ಬಾಯ್ಬಿಟ್ಟಿದ್ದಾನೆ.
ಪೊಲೀಸರು ನೀಡಿದ ಮಾಹಿತಿ ಪ್ರಕಾರ, ಜ್ಞಾನೇಶ್ವರ್ ಮತ್ತು ಅನುಷಾ ದಂಪತಿ ಪಿಎಂ ಪಾಲೆಮ್ ಉಡಾ ಕಾಲೋನಿಯ ನಿವಾಸಿಗಳು. ಪ್ರೇಮ ವಿವಾಹವಾದ ಈ ಜೋಡಿ, ಸಾಧಾರಣ ಜೀವನ ನಡೆಸುತ್ತಿದ್ದರು. ಜ್ಞಾನೇಶ್ವರ್ ಫಾಸ್ಟ್ ಫುಡ್ ಸೆಂಟರ್ ನಡೆಸುತ್ತ ಜೀವನ ಸಾಗಿಸುತ್ತಿದ್ದ. ಪತ್ನಿ ಅನುಷಾ ಗರ್ಭಿಣಿಯಾಗಿದ್ದಾಳೆ. ಹೆರಿಗೆ ಮಂಗಳವಾರ (ಏ.15) ನಿಗದಿಯಾಗಿತ್ತು. ಆದ್ರೆ, ಇಂದು ಬೆಳಗ್ಗೆ ಆತ ಅನುಷಾಳನ್ನು ಕತ್ತುಹಿಸುಕಿ ಕೊಂದಿದ್ದು, ನಂತರದಲ್ಲಿ ಅವಳು ಮಾತನಾಡುತ್ತಿಲ್ಲ, ಎಚ್ಚರಗೊಳ್ಳುತ್ತಿಲ್ಲ ಎಂದು ಪತ್ನಿ ಹೆತ್ತವರಿಗೆ ತಿಳಿಸಿದ್ದಾನೆ.
ಇದನ್ನೂ ಓದಿ: ವಿಜೃಂಭಣೆಯ ಕೋದಂಡರಾಮಸ್ವಾಮಿ ದೇವರ ಬ್ರಹ್ಮ ರಥೋತ್ಸವ
ತಕ್ಷಣವೇ ಅನುಷಾಳನ್ನು ಆಸ್ಪತ್ರೆಗೆ ದಾಖಲಿಸಿದಾಗ ಆಕೆ ಮೃತಪಟ್ಟಿರುವುದು ದೃಢವಾಗಿದೆ. ಪತಿ ಜ್ಞಾನೇಶ್ವರನ ವರ್ತನೆಯ ಬಗ್ಗೆ ಅನುಮಾನಗೊಂಡ ಪೊಲೀಸರು, ತನಿಖೆಯ ಭಾಗವಾಗಿ ಆತನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಸತ್ಯ ಬಯಲಾಗಿದೆ. "ನನ್ನ ಮತ್ತು ಪತ್ನಿ ನಡುವೆ ಒಂದು ವಿಷಯಕ್ಕೆ ವಿಪರೀತ ಜಗಳವಾಯಿತು. ಈ ವೇಳೆ ಕೋಪದಲ್ಲಿ ಆಕೆಯ ಕತ್ತುಹಿಸುಕಿ ಹತ್ಯೆಗೈದೆ ಎಂದು ತಪ್ಪೊಪ್ಪಿಕೊಂಡ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ" ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ,(ಏಜೆನ್ಸೀಸ್).