

ಬನ್ನೂರು: ಪಟ್ಟಣದ ಬಸ್ ನಿಲ್ದಾಣದ ಸಮೀಪದಲ್ಲಿರುವ ಪುರಾಣ ಪ್ರಸಿದ್ಧ ಕೋದಂಡರಾಮಸ್ವಾಮಿ ದೇವರ ಬ್ರಹ್ಮ ರಥೋತ್ಸವ ಸೋಮವಾರ ವಿಜೃಂಭಣೆಯಿಂದ ಜರುಗಿತು.
ರಥೋತ್ಸವದ ಹಿನ್ನೆಲೆಯಲ್ಲಿ ರಥಕ್ಕೆ ವಿವಿಧ ರೀತಿಯಲ್ಲಿ ಅಲಂಕರಿಸಲಾಗಿತ್ತು. ರಥದ ಮೇಲ್ಭಾಗ ಕಳಶವನ್ನು ಪ್ರತಿಷ್ಟಾಪಿಸಿ, ರಥ ಸಾಗುವ ಮಾರ್ಗವನ್ನು ಶುದ್ಧಿ ಮಾಡಲಾಯಿತು. ವಿಶ್ವ ವಸುನಾಮ ಸಂವತ್ಸರದ ಚೈತ್ರ ಬಹುಳ ದ್ವಿತೀಯೆ ಸ್ವಾತಿ ನಕ್ಷತ್ರದ ಬೆಳಗ್ಗೆ 9.20 ರಿಂದ 9.50ರೊಳಗೆ ಸಲ್ಲುವ ಶುಭ ವೃಷಭ ಲಗ್ನದಲ್ಲಿ ಕೋದಂಡರಾಮಸ್ವಾಮಿ ದೇವರಿಗೆ ವಿಶೇಷ ಪೂಜೆಗಳು, ಹವನಗಳು ನಡೆದು ರಥೋತ್ಸವಕ್ಕೆ ಚಾಲನೆ ನೀಡಲಾಯಿತು.
ರಥವು ತೇರಿನ ಬೀದಿಯ ಮೂಲಕ ಸಾಗುವ ಪ್ರತೀತಿ ಇರುವುದರಿಂದ ರಸ್ತೆಯುದ್ದಕ್ಕೂ ರಂಗೋಲಿಯಿಂದ ಅಲಂಕಾರ ಮಾಡಲಾಗಿತ್ತು. ಶ್ರೀರಾಮ, ಹನುಮನ ಸ್ಮರಣೆ ಹೆಚ್ಚಾಗಿದ್ದವು. ಮಾರ್ಗದ ನಡುವೆ ಅಲ್ಲಲ್ಲಿ ಪೂಜೆ ಸಲ್ಲಿಸಲು ಅವಕಾಶ ಕಲ್ಪಿಸಲಾಗಿತ್ತು. ರಥವು ತೇರಿನ ಬೀದಿಯ ಮೂಲಕ ಸಾಗಿ ದೊಡ್ಡಂಗಡಿ ಬೀದಿಯ ಮೂಲಕ ಮಧ್ಯಾಹ್ನ 1 ಗಂಟೆಯ ವೇಳೆಗೆ ಸ್ವಸ್ಥಾನ ಸೇರಿತು.
ನಂತರ ದೇವಾಲಯದ ಆವರಣದಲ್ಲಿ ಭಕ್ತರಿಗೆ ಪ್ರಸಾದ ವಿತರಿಸಲಾಯಿತು. ಬ್ರಾಹ್ಮಣ ಸಮುದಾಯದ ವತಿಯಿಂದ ಅನ್ನಸಂತರ್ಪಣೆ ಏರ್ಪಡಿಸಲಾಗಿತ್ತು.