More

    ಕೋರೆ ಇಲ್ಲದ ಗಂಡಾನೆಯೇ ‘ಮಖ್ನಾ’!

    ಹಾಸನ ಜಿಲ್ಲೆ ಸಕಲೇಶಪುರ- ಬೇಲೂರು ಭಾಗದಲ್ಲಿ ಹಳ್ಳಿ-ಹಳ್ಳಿಗೆ ನುಗ್ಗಿ ಸಂಘರ್ಷಕ್ಕೆ ಕಾರಣವಾಗುತ್ತಿದ್ದ ‘ಓಲ್ಡ್ ಮಖ್ನಾ’ ಎಂಬ ಆನೆಯನ್ನು ಮೂರು ದಿನಗಳ ಹಿಂದಷ್ಟೇ ಅರಣ್ಯ ಇಲಾಖೆ ಸೆರೆ ಹಿಡಿದು ದುಬಾರೆ ಸಾಕಾನೆ ಶಿಬಿರಕ್ಕೆ ಸ್ಥಳಾಂತರ ಮಾಡಿದೆ. ಈ ಸಂದರ್ಭದಲ್ಲಿ ಮಖ್ನಾ ಆನೆಗಳ ಕುರಿತು ಅನೇಕ ಪ್ರಶ್ನೆಗಳು ಹುಟ್ಟಿಕೊಂಡಿವೆ. ಈ ಹಿನ್ನೆಲೆಯಲ್ಲಿ ಮಖ್ನಾ ಎಂದರೇನು, ಮಖ್ನಾ ಆನೆಗಳು ಏಕೆ ಹೆಚ್ಚು ದಾಂಧಲೆ ಮಾಡುತ್ತವೆ, ಇತರ ಆನೆಗಳಿಗೂ ಮಖ್ನಾಗೂ ಇರುವ ವ್ಯತ್ಯಾಸವೇನು ಎಂಬ ಮಾಹಿತಿ ಇಲ್ಲಿದೆ.

    | ರಮೇಶ್ ಹಂಡ್ರಂಗಿ, ಹಾಸನ

    ಗಂಡು ಆನೆಗಳಲ್ಲಿ ಕೋರೆ ಅಥವಾ ದಂತ ಇರುತ್ತದೆ. ಆದರೆ, ಗಂಡಾಗಿದ್ದರೂ ಕೋರೆ ಇಲ್ಲದ ಆನೆಗಳನ್ನು ಮಖ್ನಾ ಎಂದು ಕರೆಯುತ್ತಾರೆ. ಇತರ ಗಂಡಾನೆಗಳಿಗೂ ಈ ಕೋರೆ ಇಲ್ಲದ ಆನೆಗಳಿಗೂ ಅಂತಹ ವ್ಯತ್ಯಾಸಗಳೇನೂ ಇರುವುದಿಲ್ಲ. ಸಾಮಾನ್ಯವಾಗಿ ಆನೆಗಳು ಗುಂಪಾಗಿ ಜೀವಿಸುವ ಪ್ರಾಣಿ. ಹೆಣ್ಣಾನೆಗಳೇ ಈ ಗುಂಪಿನ ಮುಂದಾಳತ್ವ ವಹಿಸಿರುತ್ತವೆ. 10 ವರ್ಷ ಮೇಲ್ಪಟ್ಟ ಗಂಡಾನೆಗಳನ್ನು ಗುಂಪಿನಿಂದ ಹೊರಕ್ಕೆ ಹಾಕುತ್ತವೆ. ಇದಕ್ಕೆ ಮುಖ್ಯ ಕಾರಣ ಆಹಾರ ಹಂಚಿಕೆಯಲ್ಲಿ ಆಗುವ ತೊಂದರೆ ಮತ್ತು ಸಂತಾನೋತ್ಪತ್ತಿ.

    ಜೀನ್ ಪೂಲಿಂಗ್

    ಆನೆಗಳಿಗೆ ಯಾವ ಸಮಯದಲ್ಲಿ ಯಾವ ಭಾಗದಲ್ಲಿ ಇರಬೇಕು ಎಂಬ ಅರಿವು ಚೆನ್ನಾಗಿರುತ್ತದೆ. ಕಾಲಕ್ಕೆ ಅನುಗುಣವಾಗಿ ಆನೆಗಳು ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ವಲಸೆ ಹೋಗುತ್ತಲೇ ಇರುತ್ತವೆ. ಮಾರ್ಚ್-ಏಪ್ರಿಲ್‌ನಲ್ಲಿ ಕಾಡಿನಲ್ಲಿ ನೀರಿನ ಕೊರತೆ ಉಂಟಾಗುವುದರಿಂದ ಜಲಾಶಯಗಳ ಹಿನ್ನೀರಿನ ಪ್ರದೇಶಗಳಿಗೆ ಬರುತ್ತವೆ. ಈ ಸಮಯದಲ್ಲಿ ಎಲ್ಲ ಆನೆ ಗುಂಪುಗಳು ಬಂದು ಸೇರುತ್ತವೆ. ಇಲ್ಲಿಯೇ ಒಂದು ಗುಂಪಿನ ಹೆಣ್ಣಾನೆಗಳು ಬೇರೆ ಭಾಗದ ಸದೃಢ ಗಂಡಾನೆಗಳನ್ನು ಮಿಲನಕ್ಕೆ ಆಯ್ಕೆ ಮಾಡಿಕೊಳ್ಳುತ್ತವೆ. ಇದನ್ನು ‘ಜೀನ್ ಪೂಲಿಂಗ್’ ಎಂದು ಕರೆಯುತ್ತಾರೆ. ಒಂದೇ ಗುಂಪಿನಲ್ಲಿ ಅಥವಾ ಒಂದೇ ಭಾಗದ ಆನೆಗಳೊಂದಿಗೆ ಮಿಲನವಾಗಿ ಹುಟ್ಟುವ ಮರಿಗಳು ಆರೋಗ್ಯಕರವಾಗಿ ಇರುವುದಿಲ್ಲ ಎಂಬ ಕಾರಣಕ್ಕೆ ಬೇರೆ ಭಾಗದ ಸದೃಢ ಆನೆಗಳನ್ನು ಆಯ್ಕೆ ಮಾಡಿಕೊಳ್ಳುತ್ತವೆ.

    ಕಬಿನಿ, ಹಾರಂಗಿ, ಹೇಮಾವತಿ ಹಿನ್ನೀರಿನ ಪ್ರದೇಶಗಳಿಗೆ ಬೇಸಿಗೆ ಸಮಯದಲ್ಲಿ ವಿವಿಧ ಭಾಗಗಳಿಂದ ಆನೆಗಳು ಬಂದು ಸೇರುತ್ತವೆ. ಈ ವೇಳೆ ಹೆಣ್ಣಾನೆಗಳನ್ನು ಆಕರ್ಷಿಸಲು ಗಂಡು ಆನೆಗಳು ಇತರ ಆನೆಗಳೊಂದಿಗೆ ಕಾದಾಡಿ ತಮ್ಮ ಶೌರ್ಯ ಹಾಗೂ ಶಕ್ತಿ ಪ್ರದರ್ಶನ ಮಾಡುತ್ತವೆ. ಹೆಣ್ಣಾನೆಗಳು ಹೆಚ್ಚು ಸದೃಢವಾದ ಗಂಡಾನೆಗಳನ್ನೇ ಮಿಲನಕ್ಕೆ ಆಯ್ಕೆ ಮಾಡಿಕೊಳ್ಳುತ್ತವೆ. ಆದರೆ, ಮಖ್ನಾ ಆನೆಗಳೆಡೆಗೆ ಹೆಣ್ಣಾನೆಗಳು ಆಕರ್ಷಿತವಾಗುವ ಪ್ರಮಾಣ ತೀರಾ ಕಡಿಮೆ. ಏಕೆಂದರೆ, ಗಂಡಾನೆಗೆ ಕೋರೆ ಒಂದು ಪ್ರಬಲ ಹಾಗೂ ಬಲಿಷ್ಠ ಅಸ್ತ್ರವಿದ್ದಂತೆ. ಕೋರೆಯೇ ಇಲ್ಲದ ಆನೆಗಳನ್ನು ಹೆಣ್ಣಾನೆಗಳು ಅಷ್ಟಾಗಿ ಗಮನಿಸುವುದಿಲ್ಲ. ಹೀಗಾಗಿ ಈ ಮಖ್ನಾ ಆನೆಗಳು ಇತರ ಗಂಡು ಆನೆಗಳಿಗಿಂತ ತಾವೇನೂ ಕಡಿಮೆಯಲ್ಲ ಎಂಬುದನ್ನು ತೋರಿಸಲು ಹೆಚ್ಚಾಗಿ ಗಲಾಟೆ ಮಾಡುವ ಮೂಲಕ ಶಕ್ತಿ ಪ್ರದರ್ಶನಕ್ಕೆ ಮುಂದಾಗುತ್ತವೆ.

    ದಟ್ಟ ಕಾಡಿನ ರಹಸ್ಯ ಆನೆಗಳ ಮೇಲೆ ನಿಂತಿದೆ!

    ಯಾವುದೇ ಕಾಡು ದಟ್ಟವಾಗಿದೆ ಅಂದರೆ ಅಲ್ಲಿ ಆನೆಗಳ ಸಂಖ್ಯೆ ಹೆಚ್ಚಿದೆ ಎಂದೇ ಅರ್ಥ. ಏಕೆಂದರೆ ಮರದ ಕೊಂಬೆಗಳನ್ನು ಆನೆಗಳು ಮುರಿದು ತಿನ್ನುವುದರಿಂದ ಮರಗಸಿ (ಟ್ರಿಮ್ಮಿಂಗ್) ಮಾಡಿದಂತೆ ಆಗುತ್ತದೆ. ಬಳಿಕ ಆ ಮರ ಇನ್ನೂ ಎತ್ತರವಾಗಿ, ಸದೃಢವಾಗಿ ಬೆಳೆಯುತ್ತದೆ. ದಿನಕ್ಕೆ 18 ರಿಂದ 20 ಬಾರಿ ಆನೆ ಲದ್ದಿ ಹಾಕುವುದರಿಂದ ಕಾಡಿನ ತುಂಬೆಲ್ಲ ವಿವಿಧ ಜಾತಿಯ ಬೀಜಗಳು ಭೂಮಿಗೆ ಬಿದ್ದು ಚಿಗುರೊಡೆದು ಮರವಾಗಿ ಬೆಳೆಯುತ್ತವೆ. ಜತೆಗೆ, ಆನೆಗಳು ಹುಲ್ಲು ತಿನ್ನುವುದರಿಂದ ಮತ್ತೆ ಹೊಸ ಹುಲ್ಲು ಬೆಳೆಯುತ್ತದೆ. ಇದರಿಂದ ಆ ಪ್ರದೇಶದಲ್ಲಿ ಹೆಚ್ಚು ಮಳೆಯಾಗುತ್ತದೆ. ಮಳೆ ನೀರನ್ನು ಮರಗಳು, ಹುಲ್ಲು ಹಿಡಿದಿಟ್ಟುಕೊಳ್ಳುತ್ತವೆ. ಬೇಸಿಗೆ ಸಮಯದಲ್ಲಿ ಇದೇ ನೀರು ನದಿಯಾಗಿ ಹರಿದು ಜನರ ಬಳಕೆಗೆ ಉಪಯೋಗವಾಗುತ್ತದೆ.

    ಕೋರೆ ಮಹತ್ವ?

    ಗಂಡಾನೆಗಳಿಗೆ ಕೋರೆ ಗಾಂಭೀರ್ಯವನ್ನು ತಂದುಕೊಟ್ಟರೆ, ಕೋರೆಗಳ ಸಹಾಯದಿಂದಲೇ ಪೌಷ್ಟಿಕ ಆಹಾರವಿರುವ ಮರಗಳನ್ನು ಕೆಡವುತ್ತವೆ. ಫೈಬರ್ ಅಂಶ ಹೆಚ್ಚಿರುವ ಮರಗಳನ್ನು ಮುರಿದು ದೇಹಕ್ಕೆ ಅಗತ್ಯವಾಗಿರುವ ಫೈಬರ್ ಅಂಶವನ್ನು ಪಡೆದುಕೊಳ್ಳುತ್ತವೆ. ಆದರೆ ಮಖ್ನಾ ಆನೆಗಳಿಗೆ ಕೋರೆ ಇಲ್ಲದಿರುವುದರಿಂದ ಫೈಬರ್ ಅಂಶವಿರುವ ಮರ ಕೆಡವಲು ಆಗುವುದಿಲ್ಲ. ಹೀಗಾಗಿ ಹೆಚ್ಚಾಗಿ ಜನರು ತಿನ್ನುವ ಅಕ್ಕಿ, ಗೋಧಿ, ಹುರುಳಿ ಇತರ ಆಹಾರಗಳ ಮೇಲೆ ಅವಲಂಬಿತವಾಗಿರುತ್ತವೆ. ಹೀಗಾಗಿ ಮಖ್ನಾ ಆನೆಗಳು ಜನವಸತಿ ಪ್ರದೇಶಗಳಿಗೆ ಬಂದು ಆಹಾರ ಸೇವಿಸುತ್ತವೆ.

    ಆನೆ ಸಂತತಿ ವಿನಾಶದ ಮುನ್ಸೂಚನೆ

    ಆನೆ ಸಂತತಿ ಇನ್ನು ಕೆಲವೇ ದಶಕಗಳಲ್ಲಿ ಅವನತಿ ಹೊಂದಿದರೂ ಅಚ್ಚರಿ ಪಡಬೇಕಾಗಿಲ್ಲ ಎಂಬ ಆತಂಕವನ್ನು ವ್ಯಕ್ತಪಡಿಸುತ್ತಾರೆ ವನ್ಯಜೀವಿ ತಜ್ಞ ಹಾಗೂ ವೈಲ್ಡ್‌ಲೈಫ್ ಕನ್ಸರ್ವೇಷನ್ ಫೌಂಡೇಷನ್ ಸಂಸ್ಥಾಪಕ ರಾಜ್‌ಕುಮಾರ್ ದೇವರಾಜೇ ಅರಸ್. ಇವರ ಪ್ರಕಾರ, ‘ಆನೆಗಳನ್ನು ಮೂರು ಪೀಳಿಗೆಗಳಲ್ಲಿ ವರ್ಗೀಕರಿಸಲಾಗಿದೆ. ಮೊದಲನೇ ಪೀಳಿಗೆಯ ಆನೆಗಳು ಕಾಡಿನಲ್ಲೇ ಇದ್ದು ಕಾಡಿನ ಆಹಾರಗಳನ್ನು ಮಾತ್ರವೇ ತಿಂದು ಬದುಕುತ್ತಿದ್ದವು. ಕಾಡಿನ ನಾಶ, ಗಣಿಗಾರಿಕೆ, ಒತ್ತುವರಿಯಿಂದ ಎರಡನೇ ಪೀಳಿಗೆಯ ಆನೆಗಳು ಕಾಡಿನ ಅರ್ಧ ಆಹಾರ ತಿಂದು, ಇನ್ನರ್ಧ ಆಹಾರವನ್ನು ತಮ್ಮ ಜಾಗದಲ್ಲಿ ರೈತರು ಬೆಳೆದ ಬೆಳೆಗಳನ್ನು ತಿನ್ನಲು ಆರಂಭಿಸಿದವು.

    ಇನ್ನು ಮೂರನೇ ಪೀಳಿಗೆಯ ಆನೆಗಳಿಗೆ ಕಾಡಿನಲ್ಲಿ ಆಹಾರ ಹುಡುಕುವುದೇ ತಿಳಿಯದಂತೆ ಆಗಿದೆ. ಹೀಗಾಗಿ ಇವು ರೈತರು ಬೆಳೆಯುವ ಬೆಳೆಗಳ ಮೇಲೆಯೇ ಹೆಚ್ಚಾಗಿ ಅವಲಂಬಿತವಾಗಿವೆ. ಇನ್ನು ಮುಂದಿನ ಪೀಳಿಗೆಯ ಆನೆಗಳು ಸಂಪೂರ್ಣವಾಗಿ ಕಾಡನ್ನು ಬಿಟ್ಟು ನಾಡಿನತ್ತ ಬಂದು ಸಂಘರ್ಷದಲ್ಲಿ ತೊಡಗುವುದರಿಂದ ಆನೆಗಳು ಉಳಿಯುವುದು ಕಷ್ಟವಾಗಿದೆ. ಈ ಸಮಸ್ಯೆಗೆ ಈಗಲೇ ಪರಿಹಾರ ಕಂಡುಕೊಳ್ಳದಿದ್ದರೆ ಮುಂದಿನ ಕೆಲವೇ ದಶಕಗಳನ್ನು ಆನೆಗಳ ಸಂತತಿಯೇ ನಶಿಸಿ ಹೋದರೂ ಹೋಗಬಹುದು’ ಎನ್ನುತ್ತಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts