

Pakistani Donkey: ಪಾಕಿಸ್ತಾನ ಜನರ ಅವಿಭಾಜ್ಯ ಅಂಗವಾಗಿರುವ ಕತ್ತೆಗಳ ಮೇಲೆ ಇದೀಗ ಚೀನಿಯರ ಕಣ್ಣು ಬಿದ್ದಿದೆ. ಪಾಕ್ನ ಕತ್ತೆಗಳಿಗಿದ್ದ ಬೇಡಿಕೆ ಈಗ ಇನ್ನೂ ಹೆಚ್ಚಿದ್ದು, ಡ್ರ್ಯಾಗನ್ ರಾಷ್ಟ್ರಕ್ಕೆ ಅಗತ್ಯ ಪೂರೈಕೆಯ ಅವಶ್ಯಕತೆ ಎದುರಾಗಿದೆ. ಅಸಲಿಗೆ ಚೀನಾ-ಪಾಕಿಸ್ತಾನ ನಡುವೆ ಇದೇನಿದು ಕತ್ತೆ ಸಂಬಂಧ ಎಂಬುದರ ಸಂಪೂರ್ಣ ವಿವರ ಹೀಗಿದೆ ನೋಡಿ.
ಕಳೆದ ವರ್ಷಗಳಲ್ಲಿ ಪಾಕಿಸ್ತಾನದಲ್ಲಿ ಕತ್ತೆಗಳ ಬೆಲೆ ತೀವ್ರ ಹೆಚ್ಚಳ ಕಂಡಿದೆ. ಪ್ರಸ್ತುತ ಒಂದು ಕತ್ತೆಯ ಬೆಲೆ ಅಕ್ಷರಶಃ 2 ಲಕ್ಷ ರೂ.ಗೆ ತಲುಪಿದೆ. ಕಾರಣ, ಇಲ್ಲಿನ ಜನರು ಕತ್ತೆಗಳ ಮೇಲೆ ಹೆಚ್ಚು ಅವಲಂಬಿತರಾಗಿದ್ದಾರೆ. ಸಾರಿಗೆ ಕೃಷಿ, ತ್ಯಾಜ್ಯ ವಿಲೇವಾರಿ ಸೇರಿದಂತೆ ಹಲವು ದೈನಂದಿನ ಕೆಲಸಗಳಿಗೆ ಈ ಕತ್ತೆಗಳೇ ಪಾಕ್ನ ಹಲವರ ಜೀವನೋಪಾಯವಾಗಿದೆ. ಹೀಗಿರುವಾಗ ಚೀನಾ ಪಾಕಿಸ್ತಾನದ ಕತ್ತೆಗಳ ಮೇಲೆ ಕಣ್ಣಿಟ್ಟಿರುವುದು ಆಶ್ಚರ್ಯಕರ.
ಎಜಿಯಾವೊ (Ejiao) ಎಂಬ ಸಾಂಪ್ರದಾಯಿಕ ಔಷಧವನ್ನು ತಯಾರಿಸಲು ಚೀನಾ ಕತ್ತೆ ಚರ್ಮವನ್ನು ಬಳಸುತ್ತದೆ. ಕತ್ತೆಯ ಚರ್ಮವನ್ನು ಕುದಿಸಿ ಔಷಧವನ್ನು ತಯಾರಿಸುವ ಚೀನಾಗೆ, ಈಗ ಪಾಕ್ ಕತ್ತೆಗಳ ಅವಶ್ಯಕತೆ ಮತ್ತು ಅನಿವಾರ್ಯತೆ ಎದುರಾಗಿದೆ. ಅಸಲಿಗೆ ಈ ಔಷಧ ರೋಗನಿರೋಧಕ ಶಕ್ತಿಯನ್ನು ಸುಧಾರಿಸಲು, ಆಯಾಸ, ಗೆಡ್ಡೆಗಳನ್ನು ನಿಯಂತ್ರಿಸಲು ಮತ್ತು ರಕ್ತಹೀನತೆಗೆ ಚಿಕಿತ್ಸೆ ನೀಡಲು ಬಳಕೆ ಮಾಡಲಾಗುತ್ತದೆ. ಹೀಗಾಗಿ ತಮ್ಮ ದೇಶದಲ್ಲಿ ಕತ್ತೆಗೆ ಕೊರತೆ ಎದುರಾದ ಹಿನ್ನೆಲೆ ಪಾಕ್ ಕತ್ತೆಗಳ ಮೇಲೆ ಚೀನಾ ಕಣ್ಣಿಟ್ಟಿದೆ.
ಚೀನಾದಲ್ಲಿ ಎಜಿಯಾವೊ ಉದ್ಯಮವು ದೊಡ್ಡ ಮಟ್ಟದ ಬೆಳವಣಿಗೆಯನ್ನು ಕಂಡಿದೆ. ಆದಾಗ್ಯೂ, ಮನೆಯಲ್ಲಿ ಕತ್ತೆಗಳ ಕೊರತೆಯಿಂದಾಗಿ, ಚೀನಾದ ಖರೀದಿದಾರರು ಪಾಕಿಸ್ತಾನದತ್ತ ಮುಖ ಮಾಡುತ್ತಿದ್ದಾರೆ. ಕಾರಣ, ಪಾಕ್ನಲ್ಲಿ ಕತ್ತೆಗಳು ಅಗ್ಗವಾಗಿವೆ ಮತ್ತು ಸುಲಭವಾಗಿ ಲಭ್ಯವಿದೆ. ಈ ಕುರಿತಂತೆ ಕರಾಚಿಯಲ್ಲಿ ವೈದ್ಯಕೀಯ ಕೇಂದ್ರ ನಡೆಸುತ್ತಿರುವ ಡಾ. ಗುವೊ ಜಿಂಗ್ ಫೆಂಗ್ ಮಾತನಾಡಿ, "ಚೀನಾದಲ್ಲಿ ಕತ್ತೆ ಚರ್ಮಗಳ ಬೇಡಿಕೆ ವ್ಯಾಪಕವಾಗಿದೆ. ಇದು ಈಗ ಜಾಗತಿಕ ವ್ಯಾಪಾರವಾಗಿ ಬೆಳೆದು ನಿಂತಿದೆ. ಪಾಕಿಸ್ತಾನದ ಅತಿದೊಡ್ಡ ಕತ್ತೆ ಮಾರುಕಟ್ಟೆಯಾದ ಲಾರಿ ಮಾರುಕಟ್ಟೆಯಲ್ಲಿಯೂ ಬೆಲೆಗಳು ಏರಿವೆ" ಎಂದಿದ್ದಾರೆ,(ಏಜೆನ್ಸೀಸ್).