

Indore Couple: ಮೇ.23ರಂದು ಕಾಣೆಯಾದ ಹನಿಮೂನ್ ಸಲುವಾಗಿ ಮೇಘಾಲಯದ ಚಿರಾಪುಂಜಿಗೆ ಪ್ರಯಾಣಿಸಿದ್ದ ಇಂದೋರ್ನ ದಂಪತಿ ಪ್ರಕರಣ ಸದ್ಯ ಹಲವರ ಅಚ್ಚರಿಗೆ ಕಾರಣವಾಗಿದೆ. ಸ್ವತಃ ಪೊಲೀಸರಿಗೆ ದೊಡ್ಡ ಸವಾಲಾಗಿ ಎದುರಾದ ಈ ಕೇಸ್ನಲ್ಲಿ ಪತ್ನಿಯೇ ಆರೋಪಿ ಎಂಬುದು ಮೃತನ ಕುಟುಂಬಕ್ಕೆ ಆಘಾತ ತಂದೊಡ್ಡಿದೆ. ಯಾವ ನಾಪತ್ತೆ ಪ್ರಕರಣದಲ್ಲಿ ಸೋನಮ್ಗಾಗಿ ಶೋಧ ನಡೆಸಲಾಗುತ್ತಿತ್ತೋ, ಆ ಕೇಸ್ನಲ್ಲಿ ಇದೀಗ ಶಾಕಿಂಗ್ ಟ್ವಿಸ್ಟ್ಗಳು ಎದುರಾಗಿವೆ.
ಪೊಲೀಸರಿಗೆ ದೊಡ್ಡ ತಲೆನೋವಾಗಿ ಕಾಡುತ್ತಿದ್ದ ಮಿಸ್ಸಿಂಗ್ ಕೇಸ್ನಲ್ಲಿ ಪ್ರಮುಖ ಆರೋಪಿ ಪತ್ನಿ ಸೋನಮ್ ಎಂಬುದು ಸದ್ಯ ಪೊಲೀಸರ ತನಿಖೆಯಲ್ಲಿ ಬಟಾಬಯಲಾಗಿದೆ. ಹನಿಮೂನ್ ನೆಪದಲ್ಲಿ ಚಿರಾಪುಂಜಿಗೆ ಟ್ರೆಕ್ಕಿಂಗ್ ಮಾಡಲು ಹೋಗಿದ್ದ ನವಜೋಡಿ ಪೈಕಿ ಪತಿಯ ಮೃತದೇಹ ಸಿಕ್ಕಿದ್ದು, ಅದೊಂದು ಕೊಲೆ ಎಂಬುದು ಮೊದಲ ದಿನವೇ ಪೊಲೀಸರಿಗೆ ಸ್ಪಷ್ಟವಾಗಿತ್ತು. ಅಂತೆಯೇ ಚುರುಕು ತನಿಖೆ ಕೈಗೊಂಡ ಖಾಕಿಗೆ ಕೊಲೆಗೈದ ಪಾಪಿಗಳು ಕಡೆಗೂ ಸಿಕ್ಕಿಬಿದ್ದಿದ್ದಾರೆ.
ಮದುವೆಯಾದ ಕೆಲವೇ ದಿನಗಳಲ್ಲಿ ಮೇಘಾಲಯದ ಚಿರಾಪುಂಜಿಗೆ ಹನಿಮೂನ್ ನೆಪದಲ್ಲಿ ಹೋಗೋಣ ಎಂದು ಹಠ ಹಿಡಿದಿದ್ದ ಸೋನಮ್, ಪತಿ ರಾಜುಗೆ ಯಾವುದೇ ಅವಕಾಶ ನೀಡದೆ ಎಲ್ಲವೂ ತಾನು ಅಂದುಕೊಂಡಂತೆ ನಡೆಸುವ ನಿಟ್ಟಿನಲ್ಲಿ ಸಂಚು ಹೂಡಿದ್ದಳು. ಸ್ವತಃ ಟಿಕೆಟ್ ಬುಕ್ಕಿಂಗ್ನಿಂದ ಹಿಡಿದು ಯಾವ ಹೋಟೆಲ್ನಲ್ಲಿ ಉಳಿಯಬೇಕು, ಎಲ್ಲೆಲ್ಲಿ ಹೋಗಬೇಕು ಎಂಬುದನ್ನು ಮೊದಲೇ ನಿರ್ಧರಿಸಿದ್ದಳು. ಇಲ್ಲಿ ಅಚ್ಚರಿ ಸಂಗತಿ ಏನಂದರೆ, ಆಕೆ ಪ್ರಯಾಣದ ರಿಟರ್ನ್ ಟಿಕೆಟ್ ಬುಕ್ ಮಾಡಿರಲಿಲ್ಲ. ಕಾರಣ, ಹತ್ಯೆಗೈಯುವ ಪ್ಲ್ಯಾನ್ ಯಶಸ್ವಿಯಾಗುತ್ತದೆ ಎಂಬ ಬಲವಾದ ಕಾರಣದಿಂದ ಹೀಗೆ ಮಾಡಿದ್ದಾಳೆ ಎಂದು ಸೋನಮ್ ಅತ್ತೆ ಆರೋಪಿಸಿದ್ದಾರೆ.
ಮೃತ ರಾಜು ಸೂರ್ಯವಂಶಿ ಅವರ ತಾಯಿ ಉಮಾ ಮಾತನಾಡಿ, "ನನ್ನ ಮಗನ ಸಾವಿಗೆ ಕಾರಣರಾದವರನ್ನು ದಯವಿಟ್ಟು ಬಿಡಬೇಡಿ. ಮಗನು ಇಲ್ಲಿಂದ ಹೋಗುವಾಗ ಚಿನ್ನದ ಸರ, ವಜ್ರದ ಉಂಗುರ ಸೇರಿದಂತೆ 10 ಲಕ್ಷ ರೂ. ಮೌಲ್ಯದ ಒಡವೆ ಧರಿಸಿದ್ದ. ಇಷ್ಟೆಲ್ಲ ಚಿನ್ನವೇಕೆ ಹಾಕಿದ್ಯಾ ಎಂದು ಕೇಳಿದಾಗ, ಇಲ್ಲ ಅಮ್ಮ, ಸೋನಮ್ ಹಾಕೊಂಡು ಬರೋದಿಕ್ಕೆ ಹೇಳಿದಳು ಎಂದ. ಈ ಪ್ರಕರಣದಲ್ಲಿ ಸೋನಮ್ ಸಿಕ್ಕ ವಿಷಯ ಪೊಲೀಸರು ನನಗೆ ಮೊದಲು ತಿಳಿಸಲಿಲ್ಲ. ಇಲ್ಲಿ ಸಿಬಿಐ ಮಧ್ಯಸ್ಥಿಕೆ ಅಗತ್ಯವಿದೆ. ಅವರು ಈ ಪ್ರಕರಣವನ್ನು ಕೈಗೆತ್ತಿಕೊಳ್ಳಬೇಕು. ಅವಳು ನನ್ನ ಮಗನನ್ನು ಪ್ರೀತಿಸಿದ್ದೇ ಆಗಿದ್ದರೆ ಸಾಯಲು ಹೇಗೆ ಬಿಡುತ್ತಿದ್ದಳು? ಆಕೆ ಮಾತ್ರ ಏಕೆ ಜೀವಂತವಾಗಿದ್ದಾಳೆ?" ಎಂದು ಅಳಲು ತೋಡಿಕೊಂಡಿದ್ದಾರೆ,(ಏಜೆನ್ಸೀಸ್).