ಹಿಂದೂ ಸಂಘಟನೆ ಕಾರ್ಯಕರ್ತರಿಗೆ ಹಿಂಸೆ; ಪೊಲೀಸರ ಮೇಲೆ ಕ್ರಮಕ್ಕೆ ಆಗ್ರಹ

udp-9-manavi
Published on

ಉಡುಪಿ: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಇತ್ತೀಚೆಗೆ ನಡೆದ ಪೊಲೀಸ್​ ಕ್ರಮಗಳು ನಾಗರಿಕ ಸಮಾಜದಲ್ಲಿ ಭೀತಿಯ ವಾತಾವರಣವನ್ನು ಉಂಟು ಮಾಡಿದ್ದು, ನಾಗರಿಕರ ಖಾಸಗಿ ಜೀವನ ಮತ್ತು ವ್ಯಕ್ತಿತ್ವದ ಗೌರವವನ್ನು ಘನತೆಯನ್ನು ಹಾಳು ಮಾಡುತ್ತಿದೆ. ಪೊಲೀಸರು ಕೋಮುಸೌಹಾರ್ದವನ್ನು ಕಾಪಾಡುವ ನೆಪದಲ್ಲಿ ಹಿಂದೂ ಕಾರ್ಯಕರ್ತರನ್ನು ಗುರಿಯಾಗಿಸಿ ಮಾನವ ಹಕ್ಕುಗಳ ಉಲ್ಲಂಘಿಸುತ್ತಿದ್ದಾರೆ ಎಂದು ಹಿಂದೂ ಜನಜಾಗೃತಿ ಸಮಿತಿ ಸಮನ್ವಯಕಾರ ಚಂದ್ರ ಮೊಗವೀರ ಆರೋಪಿಸಿದರು.

ಸಮಸ್ತ ಹಿಂದೂ ಸಂಘಟನೆಗಳ ಒಕ್ಕೂಟದ ವತಿಯಿಂದ ಉಡುಪಿ ಜಿಲ್ಲಾಧಿಕಾರಿ ಕಚೇರಿ ಮುಂಭಾಗ ನಡೆದ ಪ್ರತಿಭಟನೆಯಲ್ಲಿ ಅವರು ಮಾತನಾಡಿದರು. ಪೊಲೀಸ್​ ವಿಚಾರಣೆಯ ನೆಪದಲ್ಲಿ ಸ್ಥಳಿಯ ಪೊಲೀಸ್​ ಠಾಣೆಯಿಂದ ಮಧ್ಯರಾತ್ರಿ ದೂರವಾಣಿ ಕರೆ ಮಾಡಿ ಠಾಣೆಗೆ ಕರೆಯುವುದು, ಮಧ್ಯರಾತ್ರಿ ಹಿಂದೂ ಕಾರ್ಯಕರ್ತರ ಮನೆಗೆ ಪೊಲೀಸರು ಹೋಗಿ ವಿಚಾರಣೆ ಮಾಡುವುದು, ಬಲವಂತವಾಗಿ ರಾತ್ರಿ ಅವರ ಪೋಟೊ ತೆಗೆಯುವುದು, ಅವರ ಮನೆಯ ಜಿಪಿಎಸ್​ ಲೊಕೇಶನ್​ ಸಂಗ್ರಹ ಮಾಡುವುದು ಮೊದಲಾದ ಕಿರುಕುಳ ನೀಡಲಾಗುತ್ತಿದೆ ಎಂದು ಆರೋಪಿಸಿದರು.

ಹಿಂದೂಗಳು ಸಾಮಾಜಿಕ ಜಾಲತಾಣದಲ್ಲಿ ಏನೇ ಬರೆದರೂ ಸಹ ಅವರ ಮೇಲೆ ಪ್ರಕರಣವನ್ನು ದಾಖಲು ಮಾಡಿ ಬಂಧನ ಮಾಡಿ, ಅವರಿಗೆ ಕಿರುಕುಳ ನೀಡಲಾಗುತ್ತಿದೆ. ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಹತ್ತಿಕ್ಕಿ ಅವರ ಮಾನವ ಹಕ್ಕುಗಳ ಉಲ್ಲಂಘನೆ ಮಾಡಲಾಗುತ್ತದೆ. ಈ ರೀತಿಯಲ್ಲಿ ಪೋಲಿಸರು ಕಾನೂನಿನ ಎಲ್ಲಾ ನಿಯಮಗಳನ್ನು ಮೀರಿ ಹಿಂದೂ ಕಾರ್ಯಕರ್ತರಿಗೆ, ಸಾಮಾಜಿಕ ಕಾರ್ಯಕರ್ತರಿಗೆ ಕಿರುಕುಳ ನೀಡುವುದು ಗಂಭೀರ ಅಪರಾಧವಾಗಿದೆ. ಇದು ಭಾರತದ ಸಂವಿಧಾನವು ನೀಡಿದ ನಾಗರಿಕರ ಖಾಸಗಿ ಹಕ್ಕು ಮತ್ತು ಜೀವನದ ಹಕ್ಕನ್ನು ಕಸಿದು, ನಮ್ಮಲ್ಲಿ ಅಸುರಕ್ಷಿತ ಭಾವನೆ ನಿಮಾರ್ಣ ಮಾಡುವ ಪ್ರಯತ್ನವಾಗಿದೆ ಎಂದರು.

ಇದೇ ಸಂದರ್ಭದಲ್ಲಿ ಸಮಸ್ತ ಹಿಂದೂ ಸಂಘಟನೆಗಳ ಒಕ್ಕೂಟದ ವತಿಯಿಂದ ಉಡುಪಿ ಜಿಲ್ಲಾಧಿಕಾರಿ ಕಚೇರಿಯಲ್ಲಿ ರಾಜ್ಯಪಾಲರಿಗೆ ಮನವಿ ಸಲ್ಲಿಸಲಾಯಿತು. ಅಭಿರಾಮ ಧಾಮ ಸಂಸ್ಥಾಪಕ ಡಾ. ಸುದರ್ಶನ್​ ಭಾರತೀಯ, ಹಿಂದೂ ಜಾಗರಣ ವೇದಿಕೆ ಸಹ ಸಂಚಾಲಕ ಉಮೇಶ್​ ಶೆಟ್ಟಿ, ಹಿಂದೂ ಮಹಾಸಭಾದ ಪ್ರಮೋದ್​ ಉಚ್ಚಿಲ, ಶ್ರೀರಾಮ ಸೇನೆ , ಕಾರ್ಯಾಧ್ಯಕ್ಷ ಜಯರಾಂ ಅಂಬೇಕಲ್ಲೂ, ಸಾಮಾಜಿಕ ಕಾರ್ಯಕರ್ತರಾದ ಗುರುಪ್ರಸಾದ್​ ಶೆಣೈ, ರಾಘವೇಂದ್ರ ಆಚಾರ್ಯ , ಸತ್ಯೇಂದ್ರ ಭಟ್​ ,ವಕೀಲ ನಾಗರಾಜ್​ , ಸಂತೋಷ್​ ಮೂಡುಬೆಳ್ಳೆ, ಜ್ಞಾನೇಶ್​ ಪಲಿಮಾರು ಮೊದಲಾದವರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net