

ನವದೆಹಲಿ: ಚಂದ್ರಯಾನ-3 ನಿನ್ನೆ ಭರ್ಜರಿ ಯಶಸ್ಸು ಗಳಿಸುತ್ತಿದ್ದಂತೆ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಕುರಿತು ಮೆಚ್ಚುಗೆಯ ಮಹಾಪೂರವೇ ಹರಿದುಬರುತ್ತಿದೆ. ಇನ್ನೊಂದೆಡೆ ಈ ಕುರಿತ ಕ್ರೆಡಿಟ್ ವಿಚಾರವಾಗಿ ಕಾಂಗ್ರೆಸ್-ಬಿಜೆಪಿ ಪರ-ವಿರೋಧ ಚರ್ಚೆ ಸೋಷಿಯಲ್ ಮೀಡಿಯಾದಲ್ಲಿ ನಡೆದಿದ್ದೂ ಆಗಿದೆ.
ಅಸಲಿಗೆ ಇಸ್ರೋ ವಿಜ್ಞಾನಿ ವಿಕ್ರಂ ಸಾರಾಭಾಯ್ ಅವರ ಕನಸಿನ ಕೂಸು. 1962ರಲ್ಲೇ ಇಂಥದ್ದೊಂದು ಕಲ್ಪನೆ ಮೂಡಿದ್ದು, ಅದು ಇಂಡಿಯನ್ ನ್ಯಾಷನಲ್ ಕಮಿಟಿ ಫಾರ್ ಸ್ಪೇಸ್ ರಿಸರ್ಚ್ (INCOSPAR) ಎಂಬ ಹೆಸರಿನಲ್ಲಿ ಆರಂಭವಾಯಿತು. ಬಳಿಕ 1969ರ ಆಗಸ್ಟ್ 15ರಲ್ಲಿ ಇಸ್ರೋ ಎಂದಾಯ್ತು, ನಂತರ 1972ರಲ್ಲಿ ಅದು ಬಾಹ್ಯಾಕಾಶ ಇಲಾಖೆ ವ್ಯಾಪ್ತಿಗೆ ಒಳಪಟ್ಟಿತು. ಸಂಸ್ಥಾಪಕ ಅಧ್ಯಕ್ಷರಾಗಿ ವಿಕ್ರಂ ಸಾರಾಭಾಯ್ ಮಹತ್ವದ ಜವಾಬ್ದಾರಿ ನಿಭಾಯಿಸಿದ್ದರು. ಆದರೆ ಅವರು ತಮ್ಮ 52ನೇ ವಯಸ್ಸಿನಲ್ಲಿ ಅಂದರೆ 1971ರ ಡಿ. 30ರಂದು ಹೃದಯಾಘಾತಕ್ಕೆ ಒಳಗಾಗಿ ನಿಧನರಾದರು.
ಇಸ್ರೋದ ಮತ್ತೊಬ್ಬ ವಿಜ್ಞಾನಿ ಸತೀಶ್ ಧವನ್ ಅವರು ಮೂಲತಃ ಶ್ರೀನಗರದವರಾಗಿದ್ದು, ಲಾಹೋರ್ನಲ್ಲಿ ಬೆಳೆದಿದ್ದರು. 1951ರಲ್ಲಿ ಭಾರತಕ್ಕೆ ಮರಳಿದ್ದ ಇವರು ನಂತರ ಬೆಂಗಳೂರಿಗೆ ಬಂದು ಐಐಎಸ್ಸಿಯಲ್ಲಿ ಸೀನಿಯರ್ ಸೈಂಟಿಫಿಕ್ ಆಫೀಸರ್ ಆಗಿ ಸೇರಿಕೊಳ್ಳುತ್ತಾರೆ. ಅದಾಗಿ ಹತ್ತು ವರ್ಷಗಳ ಬಳಿಕ ಅಂದರೆ ಅವರ 42ನೇ ವಯಸ್ಸಿನಲ್ಲಿ ಐಐಎಸ್ಸಿ ನಿರ್ದೇಶಕರಾಗಿ ಜವಾಬ್ದಾರಿ ವಹಿಸಿಕೊಂಡು, ಐಐಎಸ್ಸಿಯ ಅತ್ಯಂತ ಕಿರಿಯ ನಿರ್ದೇಶಕ ಎಂಬ ಖ್ಯಾತಿಗೂ ಪಾತ್ರರಾದರು. ಹದಿನೇಳು ವರ್ಷಗಳಿಗೂ ಅಧಿಕ ಕಾಲ ಅವರು ಅದೇ ಜವಾಬ್ದಾರಿಯಲ್ಲಿದ್ದರು.
ವಿಕ್ರಂ ಸಾರಾಭಾಯ್ ಅವರ ನಿಧನದ ಬಳಿಕ ಅಂದಿನ ಪ್ರಧಾನಿ ಇಂದಿರಾ ಗಾಂಧಿ ಅವರು ಇಸ್ರೋ ಅಧ್ಯಕ್ಷರಾಗುವಂತೆ ಸತೀಶ್ ಧವನ್ ಅವರಿಗೆ ಕೇಳಿಕೊಳ್ಳುತ್ತಾರೆ. ಆಗ ಅವರು ಇಸ್ರೋ ಪ್ರಧಾನ ಕಚೇರಿ ಬೆಂಗಳೂರಿನಲ್ಲಿಯೇ ಇರಬೇಕು ಹಾಗೂ ಐಐಎಸ್ಸಿ ನಿರ್ದೇಶಕನಾಗಿ ನನ್ನನ್ನು ಮುಂದುವರಿಸಬೇಕು ಎಂಬ ಎರಡು ಷರತ್ತುಗಳನ್ನು ಹಾಕುತ್ತಾರೆ. ಅದಕ್ಕೆ ಇಂದಿರಾ ಗಾಂಧಿ ಒಪ್ಪುತ್ತಾರೆ, ಆ ಮೂಲಕ ಬೆಂಗಳೂರಿನಲ್ಲಿ ಇಸ್ರೋ ಪ್ರಧಾನ ಕಚೇರಿ ಆಯಿತು ಎನ್ನಲಾಗಿದೆ.
ಅದಾಗಲೇ ಹಿಂದೂಸ್ತಾನ್ ಏರ್ಕ್ರಾಫ್ಟ್ (ಈಗ ಅದು ಹಿಂದೂಸ್ತಾನ್ ಏರೋನಾಟಿಕ್ಸ್) ಮತ್ತು ಐಐಎಸ್ಸಿ ಬೆಂಗಳೂರಿನಲ್ಲಿ ಇದ್ದಿದ್ದರಿಂದ ಇಸ್ರೋ ಪ್ರಧಾನ ಕಚೇರಿಗೆ ಬೆಂಗಳೂರು ಸೂಕ್ತ ಎಂದು ಸತೀಶ್ ಧವನ್ ಬಲವಾಗಿ ಪ್ರತಿಪಾದಿಸಿದ್ದರು. ನಂತರ 1981ರಲ್ಲಿ ಐಐಎಸ್ಸಿಯಿಂದ, 1984ರಲ್ಲಿ ಇಸ್ರೋದಿಂದ ಅವರು ನಿವೃತ್ತರಾಗುತ್ತಾರೆ. ಇಂಡಿಯನ್ ಸ್ಪೇಸ್ ಕಮಿಷನ್ ಅಧ್ಯಕ್ಷರಾಗಿ ಮುಂದುವರಿದ ಅವರು 2002ರಲ್ಲಿ ನಿಧನರಾದರು. -ಏಜೆನ್ಸೀಸ್