

ಹಾಸನ: ಹಾಸನ ಹೊರವಲಯದ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಭವಿಸಿದ ಭೀಕರ ಅಪಘಾತದಲ್ಲಿ ತಂದೆ-ತಾಯಿ ಜತೆಗಿದ್ದ ಮೂರು ವರ್ಷದ ಅವಳಿ ಮಕ್ಕಳಿಬ್ಬರೂ ಸ್ಥಳದಲ್ಲೇ ಸಾವಿಗೀಡಾಗಿದ್ದಾರೆ. ಹಾಸನದ ಭೂವನಹಳ್ಳಿಯ ಸಮೀಪ ಈ ಅಪಘಾತ ಸಂಭವಿಸಿದೆ.
ಹಾಸನದ ಗವೇನಹಳ್ಳಿಯ ಶಿವಾನಂದ್-ಜ್ಯೋತಿ ದಂಪತಿಯ ಅವಳಿ ಮಕ್ಕಳು ಪ್ರಣತಿ (3), ಪ್ರಣವ್ (3) ಇಬ್ಬರೂ ಸ್ಥಳದಲ್ಲೇ ಸಾವಿಗೀಡಾಗಿದ್ದಾರೆ. ದಂಪತಿಗೂ ಗಂಭೀರ ಗಾಯಗಳಾಗಿದ್ದು ಹಾಸನದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಇಬ್ಬರ ಸ್ಥಿತಿಯೂ ಚಿಂತಾಜನಕವಾಗಿದೆ.
ದಂಪತಿ ಸ್ಕೂಟರ್ನಲ್ಲಿ ಹೋಗುತ್ತಿದ್ದಾಗ ಲಾರಿಯೊಂದು ಹಿಂದಿನಿಂದ ಡಿಕ್ಕಿ ಹೊಡೆದಿದೆ. ಚಾಲಕ ಪಾನಮತ್ತನಾಗಿ ವಾಹನ ಚಲಾಯಿಸುತ್ತಿದ್ದುದೇ ಅಪಘಾತಕ್ಕೆ ಕಾರಣ ಎನ್ನಲಾಗಿದೆ. ಈ ಲಾರಿ ಒಟ್ಟು ನಾಲ್ಕು ಬೈಕ್ಗಳಿಗೆ ಡಿಕ್ಕಿ ಹೊಡೆದಿದೆ.
ಈ ದಂಪತಿಗೆ ಡಿಕ್ಕಿ ಹೊಡೆದ ಮೇಲೂ ಲಾರಿಗೆ ಸಿಕ್ಕ ಬೈಕ್ ಅದರ ಜತೆಗೆ ಎಳೆದೊಯ್ಯಲ್ಪಟ್ಟಿದ್ದು, ಟಯರ್ ಅಡಿಗೆ ಸಿಕ್ಕ ಮಕ್ಕಳ ದೇಹಗಳೂ ಸುಮಾರು ಮೂರು ಕಿಲೋಮೀಟರ್ ದೂರ ಎಳೆದೊಯ್ಯಲ್ಪಟ್ಟಿವೆ. ಸಾರ್ವಜನಿಕರು ಲಾರಿಯನ್ನು ತಡೆದು ಚಾಲಕನನ್ನು ಪೊಲೀಸ್ ವಶಕ್ಕೆ ಒಪ್ಪಿಸಿದ್ದಾರೆ. ಹಾಸನ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.