ವಿಶ್ವ ಹಿಂದು ಪರಿಷತ್ ಮುಖಂಡರ ಮೇಲೆ ಬಿಜೆಪಿ ನಾಯಕರಿಂದಲೇ ಹಲ್ಲೆಯತ್ನ; ಮೆರವಣಿಗೆ ವಿಚಾರ ಬಿಗಡಾಯಿಸಿ ಉಂಟಾಯ್ತು ಘರ್ಷಣೆ

1205220
Published on

ತುಮಕೂರು: ಮೆರವಣಿಗೆ ನಡೆಸುವ ಕುರಿತಂತೆ ಪರ-ವಿರೋಧ ಅಭಿಪ್ರಾಯಗಳ ಚರ್ಚೆಯ ವಿಷಯ ಬಿಗಡಾಯಿಸಿ ಬಿಜೆಪಿಯವರೇ ಆದ ಮಾಜಿ ಸಚಿವರೊಬ್ಬರು ವಿಶ್ವ ಹಿಂದು ಪರಿಷತ್ ಮುಖಂಡರೊಬ್ಬರ ಮೇಲೆ ಹಲ್ಲೆಗೆ ಯತ್ನಿಸಿದ್ದಾರೆ. ತುಮಕೂರಿನ ಪುರಭವನ ವೃತ್ತದಲ್ಲಿ ಇಂಥದ್ದೊಂದು ಪ್ರಕರಣ ವರದಿಯಾಗಿದೆ.

ಅಂದಹಾಗೆ ಹಲ್ಲೆಗೆ ಯತ್ನಿಸಿದ್ದ ಮಾಜಿ ಸಚಿವ ಬೇರಾರೂ ಅಲ್ಲ, ಬಿಜೆಪಿಯ ಸೊಗಡು ಶಿವಣ್ಣ. ಇವರು ವಿಶ್ವ ಹಿಂದು ಪರಿಷತ್ ಮುಖಂಡ ಜಿ.ಕೆ. ಶ್ರೀನಿವಾಸ್ ಅವರ ಮೈಮೇಲೆರಗಿ ಹಲ್ಲೆಗೆ ಯತ್ನಿಸಿದ್ದರು. ಅಷ್ಟಕ್ಕೂ ಇಂಥದ್ದೊಂದು ಘರ್ಷಣೆಗೆ ಮೆರವಣಿಗೆ ಕುರಿತ ಪರ-ವಿರೋಧ ಚರ್ಚೆ ಬಿಗಡಾಯಿಸಿದ್ದೇ ಕಾರಣ.

ತುಮಕೂರಿನ ಪುರಭವನ ವೃತ್ತದಿಂದ ವಿಶ್ವ ಹಿಂದು ಪರಿಷತ್ ಕಾರ್ಯಕರ್ತರು ಚಿಕ್ಕಮಗಳೂರಿನ ದತ್ತಪೀಠಕ್ಕೆ ಹೊರಟಿದ್ದಾಗ ಈ ಸಂಘರ್ಷ ಉಂಟಾಗಿದೆ. ಏಳೆಂಟು ಬಸ್​​ಗಳಲ್ಲಿ ದತ್ತಪೀಠಕ್ಕೆ ಹೊರಟಿದ್ದವರು ಪುರಭವನ ಬಳಿ ನೆರೆದಿದ್ದರು. ಕಾರ್ಯಕರ್ತರು ನೇರವಾಗಿ ಯಾತ್ರೆ ಹೊರಡಲು ಯೋಜನೆ ಹಾಕಿಕೊಂಡಿದ್ದರು.

ಆದರೆ ಕಾರ್ಯಕರ್ತರ ಯೋಜನೆಯ ರೂಪುರೇಷೆ ಬದಲಿಸಲು ಮುಂದಾದ ಸೊಗಡು ಶಿವಣ್ಣ, ಪುರಭವನ ವೃತ್ತದಿಂದ ಗುಬ್ಬಿ ಗೇಟ್​ವರೆಗೂ ಮೆರವಣಿಗೆ ನಡೆಸಬೇಕು ಎಂದು ಪಟ್ಟು ಹಿಡಿದರು. ಮೆರವಣಿಗೆಗೆ ಪೊಲೀಸರ ಅನುಮತಿ ಪಡೆದಿಲ್ಲ, ಅದು ನಮ್ಮ ಯೋಜನೆಯಲ್ಲೂ ಇಲ್ಲ, ಹೀಗಾಗಿ ಬರೀ ಯಾತ್ರೆ ಮಾಡುತ್ತೇವೆ ಎಂದು ಕಾರ್ಯಕರ್ತರು ಮೆರವಣಿಗೆ ತೆರಳಲು ನಿರಾಕರಿಸಿದರು. ಆಗ ವಾಗ್ವಾದ ನಡೆದು, ಶ್ರೀನಿವಾಸ್​ ಮೇಲೆ ಮಾಜಿ ಸಚಿವ ಸೊಗಡು ಶಿವಣ್ಣ ಹಲ್ಲೆಗೆ ಯತ್ನಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net