

ಚಿತ್ರದುರ್ಗ: ಕೋಟೆನಾಡಿನಲ್ಲಿ ಮತಾಂತರ ಪ್ರಕರಣ ಭಾರಿ ಸದ್ದು ಮಾಡುತ್ತಿದ್ದು, ಇದೀಗ ಇದರ ಸದ್ದು ಮತ್ತಷ್ಟು ಹೆಚ್ಚಾಗಿದೆ. ವಿಚಿತ್ರವೆಂದರೆ, ಮತಾಂತರ ಆಗಿಲ್ಲ ಎಂದಿದ್ದ ತಹಶೀಲ್ದಾರ್ಗೆ ಮಾತ್ರವಲ್ಲ, ಮತಾಂತರ ನಡೆದಿದೆ ಎನ್ನುತ್ತಿರುವ ಶಾಸಕರಿಗೂ ಶಾಕ್ ತಟ್ಟಿದೆ.
ತಮ್ಮ ತಾಯಿಯನ್ನೇ ಮತಾಂತರಗೊಳಿಸಿದ್ದಾರೆ ಎಂದು ಶಾಸಕ ಗೂಳಿಹಟ್ಟಿ ಶೇಖರ್ ಈ ಹಿಂದೆ ದನಿ ಎತ್ತಿದ್ದು, ಬಳಿಕ ಒಂದಷ್ಟು ಜನರನ್ನು ಹಿಂದೂ ಧರ್ಮಕ್ಕೆ ಮರಳಿ ಕರೆ ತಂದಿದ್ದರು. ಅಂದಿನಿಂದ ಜಿಲ್ಲೆಯಲ್ಲಿ ಬಲವಂತದ ಮತಾಂತರ ಪ್ರಕರಣ ಮುನ್ನೆಲೆಗೆ ಬಂದಿದ್ದು, ಚರ್ಚೆಗೆ ಇಂಬು ಕೊಟ್ಟಿದೆ.
ಈ ಮಧ್ಯೆ 'ಬಲವಂತದ ಮತಾಂತರ ನಡೆದಿಲ್ಲ' ಎಂದು ಇಲ್ಲಿನ ತಹಶೀಲ್ದಾರ್ ಹೇಳಿಕೆ ಕೊಟ್ಟ ಬೆನ್ನಿಗೇ ಅವರ ವರ್ಗಾವಣೆ ಆಗಿದೆ. ಆ ಮೂಲಕ ಅವರಿಗೆ ಮತಾಂತರದ ಪ್ರಕರಣದ ಚುರುಕು ಮುಟ್ಟಿತ್ತು. ಮತಾಂತರ ನಡೆದಿದೆ, ನಡೆಯುತ್ತಿದೆ ಎಂದು ಹೇಳುತ್ತಲೇ ಬಂದಿರುವ ಶಾಸಕ ಗೂಳಿಹಟ್ಟಿ ಶೇಖರ್ ಅವರು ತಹಶೀಲ್ದಾರ್ ವರ್ಗಾವಣೆ ಬಳಿಕ ಮತಾಂತರ ನಡೆಯುತ್ತಿರುವುದನ್ನು ಸಾಬೀತುಪಡಿಸಲು ಕುಟುಕು ಕಾರ್ಯಾಚರಣೆಗೆ ಇಳಿದಿದ್ದಾರೆ.
ಚರ್ಚ್ವೊಂದರ ಮುಂದೆ ಕಾರಿನಲ್ಲಿ ಕುಳಿತು ಚರ್ಚ್ನಿಂದ ಹೊರಬರುತ್ತಿರುವವರ ಜತೆ ಶಾಸಕರು ಮಾತುಕತೆ ನಡೆಸಿದ್ದಾರೆ. ಕ್ರೈಸ್ತ ಧರ್ಮಕ್ಕೆ ಮತಾಂತರಗೊಂಡಿರುವ ದಲಿತರನ್ನು ಮಾತಿಗೆಳೆದ ಶಾಸಕರು, ಅವರಿಂದಲೇ ಸತ್ಯ ಹೊರಗೆಡಹುವ ಪ್ರಯತ್ನ ನಡೆಸಿದ್ದಾರೆ. ಈ ವೇಳೆ ಕೆಲವರು "ಹೌದು.. ನಾವು ಮತಾಂತರ ಆಗಿದ್ದೇವೆ, ಏನೀಗ..?" ಎಂದು ಶಾಸಕರೇ ಒಮ್ಮೆ ಶಾಕ್ಗೆ ಒಳಗಾಗುವಂತೆ ಉತ್ತರ ನೀಡಿರುವುದು ಬೆಳಕಿಗೆ ಬಂದಿದೆ. ಅದಾಗ್ಯೂ ಚಿತ್ರದುರ್ಗದಲ್ಲಿ ಮತಾಂತರ ನಡೆದಿದೆ ಎಂದು ಈ ಮೂಲಕ ಸಾಬೀತುಪಡಿಸುವ ಯತ್ನದಲ್ಲಿ ಶಾಸಕ ಗೂಳಿಹಟ್ಟಿ ತಕ್ಕಮಟ್ಟಿಗೆ ಯಶಸ್ವಿಯಾಗಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿವೆ.