

ಇಸ್ಲಾಮಾಬಾದ್: ಹಿಂದು ಸಮುದಾಯದ ವಿಧವೆ ಮಹಿಳೆಯೊಬ್ಬಳನ್ನು ಶಿರಚ್ಛೇದ ಮಾಡಿ ಹತ್ಯೆ ಮಾಡಲಾಗಿರುವ ಘಟನೆ ಪಾಕಿಸ್ತಾನದ ಸಿಂಜೋರೋ ಪಟ್ಟಣದಲ್ಲಿ ನಡೆದಿರುವುದು ವರದಿಯಾಗಿದೆ. ಆರೋಪಿಗಳು ಮಹಿಳೆಯನ್ನು ಹತ್ಯೆ ಮಾಡಿ, ಆಕೆಯ ಎದೆಯನ್ನು ಕತ್ತರಿಸಿದ್ದಾರೆ. ನಂತರ ಮೃತದೇಹದಿಂದ ಚರ್ಮವನ್ನು ಕಿತ್ತೆಸೆದು ಅಮಾನುಷವಾಗಿ ವರ್ತಿಸಿದ್ದಾರೆ ಎಂದು ಹೇಳಲಾಗಿದೆ.
ದಯಾ ಬೆಲ್(40) ಮೃತ ಮಹಿಳೆ ಎಂದು ಗುರುತಿಸಲಾಗಿದೆ. ಇದೀಗ ಈಕೆ ನಾಲ್ವರು ಮಕ್ಕಳನ್ನು ಅಗಲಿದ್ದಾರೆ. ಘಟನೆಯ ಬಗ್ಗೆ ಪಾಕಿಸ್ತಾನ ಮೂಲದ ಹಿಂದು ಸಮುದಾಯದ ಮಹಿಳಾ ಸೆನೆಟರ್ ಕೃಷ್ಣ ಕುಮಾರಿ ಟ್ವಿಟ್ಟರ್‌ನಲ್ಲಿ ತಿಳಿಸಿದ್ದಾರೆ. 40 ವರ್ಷದ ವಿಧವೆಯನ್ನು ಬರ್ಬರವಾಗಿ ಹತ್ಯೆ ಮಾಡಲಾಗಿದ್ದು, ಆಕೆಯ ಮೃತದೇಹ ಅತ್ಯಂತ ಕೆಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದೆ. ಆಕೆಯ ಗ್ರಾಮಕ್ಕೆ ನಾವು ಭೇಟಿ ನೀಡಿದ್ದು, ಸಿಂಜೋರ್ ಹಾಗೂ ಶಹಪುರ್ಚಕರ್ ಪೊಲೀಸ್ ತಂಡಗಳು ಘಟನಾ ಸ್ಥಳಕ್ಕೆ ಬಂದು ತಪಾಸಣೆ ನಡಿಸಿವೆ ಎಂದು ಬರೆದುಕೊಂಡಿದ್ದಾರೆ.
ಹಿಂದು ವಿಧವೆ ಮಹಿಳೆಯನ್ನು ಶಿರಚ್ಛೇದ ಮಾಡಿ ಹತ್ಯೆ ಮಾಡಲಾಗಿದೆ. ನಂತರ ಎದೆಯ ಭಾಗವನ್ನು ಕತ್ತರಿಸಿ, ಮುಖದ ಮೇಲಿನ ಚರ್ಮವನ್ನು ಸುಲಿದಿದ್ದಾರೆ. ಮೃತದೇಹ ಗದ್ದೆಯಲ್ಲಿ ಪತ್ತೆಯಾಗಿದೆ. ಈ ಬಗ್ಗೆ ಪೊಲೀಸರು ಮಹಿಳೆಯ ಕುಟುಂಬ ಸದಸ್ಯರ ವಿವರಗಳನ್ನು ಪಡೆದಿದ್ದಾರೆ. ಪ್ರಕರಣದ ಬಗ್ಗೆ ಹೆಚ್ಚಿನ ತನಿಖೆ ನಡೆಸಲಾಗುವುದು ಎಂದು ಪಾಕಿಸ್ತಾನ್ ಪೀಪಲ್ಸ್ ಪಾರ್ಟಿ ನಾಯಕರು ಹೇಳಿರುವುದು ವರದಿಯಾಗಿದೆ. (ಏಜೆನ್ಸೀಸ್)