ಪತಿಯನ್ನು ಕಿತ್ತುಕೊಂಡ ದೇವರು ಮಗನನ್ನೂ ಬಿಡಲಿಲ್ಲ…

Pub-crime-1
Published on

ಬೆಂಗಳೂರು: ದೇವರೆ ನಿನಗೆ ಕರುಣೆ ಇಲ್ಲವೆ? ಪತಿಯನ್ನು ಕಿತ್ತುಕೊಂಡ ನೀರು ಮಗನನ್ನೂ ಬಿಡಲಿಲ್ವಾ..? ಅವನು ಓದಿ ವಿದ್ಯಾವಂತನಾಗಬೇಕೆಂದು ನಾನು ಕಂಡಿದ್ದ ಕನಸು ನುಚ್ಚುನೂರಾಗಿ ಹೋಯಿತೇ..?

ದೇವನಹಳ್ಳಿ ತಾಲೂಕು ಸರ್ಕಾರಿ ಆಸ್ಪತ್ರೆ ಶವಾಗಾರದಲ್ಲಿ ಬುಧವಾರ ಮಗನ ಶವದೆದುರು ತಾಯಿ ಹೀಗೆ ರೋದಿಸುತ್ತಿದ್ದ ದೃಶ್ಯ ಕರುಣಾಜನಕವಾಗಿತ್ತು.

ಈಜಲು ಹೋಗಿ ನೀರುಪಾಲು...

ದೇವನಹಳ್ಳಿ ತಾಲೂಕು ಚನ್ನರಾಯಪಟ್ಟಣ ಹೋಬಳಿಯ ಸೋಮತ್ತನಹಳ್ಳಿ ಗ್ರಾಮದ ಕೆರೆಯಲ್ಲಿ ಬುಧವಾರ ಸ್ನೇಹಿತರೊಂದಿಗೆ ಈಜಲು ಹೋಗಿದ್ದ ದೇವನಾಯಕನಹಳ್ಳಿ ಮುರಾರ್ಜಿ ದೇಸಾಯಿ ವಸತಿ ಶಾಲೆ ವಿದ್ಯಾರ್ಥಿ 14 ವರ್ಷದ ಜುನೇದ್ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದ. ವಿಷಯ ತಿಳಿದ ತಾಯಿಯ ಆಕ್ರಂದನ ಮುಗಿಲು ಮುಟ್ಟಿತ್ತು.

ತಂದೆ ಇಲ್ಲದ ಮಗ...
ಕೆಲ ವರ್ಷದ ಹಿಂದೆ ಜುನೇದ್ ತಂದೆ ಮೃತಪಟ್ಟಿದ್ದರು. ಮಗನ ಶಿಕ್ಷಣಕ್ಕೆ ತೊಂದರೆಯಾಗಬಾರದೆಂಬ ಕಾರಣಕ್ಕೆ ತಾಯಿ ವಸತಿ ಶಾಲೆಗೆ ಸೇರಿಸಿದ್ದರು ಎನ್ನಲಾಗಿದೆ.

ಪ್ರವಾಸಕ್ಕೆ ತೆರಳಿದ್ದ ವೇಳೆ ದುರ್ಘಟನೆ: ವಸತಿ ಶಾಲೆಯ ಬಹುತೇಕ ಮಕ್ಕಳು ಶಿಕ್ಷಕರೊಂದಿಗೆ ಬುಧವಾರ ಪ್ರವಾಸಕ್ಕೆ ತೆರಳಿದ್ದರು, ಇನ್ನುಳಿದ ಕೆಲವು ವಿದ್ಯಾರ್ಥಿಗಳು ಹಾಸ್ಟೆಲ್‌ನಲ್ಲಿಯೇ ಇದ್ದರು. ಈ ಪೈಕಿ 8ನೇ ತರಗತಿಯ ಮೂವರು ವಿದ್ಯಾರ್ಥಿಗಳು ಕೆರೆಗೆ ಈಜಲು ಹೋಗಿದ್ದರು. ಈ ವೇಳೆ ಈ ದುರ್ಘಟನೆ ನಡೆದಿದೆ. ಇನ್ನಿಬ್ಬರು ವಿದ್ಯಾರ್ಥಿಗಳು ಅಸ್ಪಸ್ಥಗೊಂಡಿದ್ದು, ದೇವನಹಳ್ಳಿ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದ್ದು ಇಬ್ಬರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net