

ಇಂದೋರ್: ಹೊಸ ರುಚಿ ಸವಿಯಲೆಂದು ಹೊಟೇಲ್ಗೆ ಹೋದ ಗ್ರಾಹಕ ತೃಪ್ತಿಯಾಗಿ ಹೊರಬರಬೇಕು. ಗ್ರಾಹಕನಾದವನು ಹೊಟೇಲ್ನ ಆಹಾರದಲ್ಲಿ ಶುಚಿಗೆ ಹೆಚ್ಚು ಮಹತ್ವ ಕೊಡುತ್ತೇನೆ. ಹೀಗಿರುವಾಗ ಗ್ರಾಹಕ ಏನು ಆರ್ಡರ್ ಮಾಡಿರುತ್ತಾನೋ ಅದನ್ನೇ ಕೊಡಬೇಕು. ಇಲ್ಲಿ ಎಡವಟ್ಟಾದರೂ ಗ್ರಾಹಕ ಅಸಮಾಧಾನವಾಗುವುದ ಸಹಜ. ಆರ್ಡರ್ ಮಾಡಿದ ಆಹಾರ ತಡವಾಗಿ ಬಂತು, ರುಚಿ ಚೆನ್ನಾಗಿರಲಿಲ್ಲ, ಸಪ್ಲಯರ್ ಸರಿಯಾಗಿ ಸ್ಪಂದಿಸಲಿಲ್ಲ ಎಂಬೆಲ್ಲಾ ದೂರುಗಳನ್ನು ಹೊಟೇಲ್ ಮಾಲಿಕರು ವಿವಿಧ ಸಂದರ್ಭಗಳಲ್ಲಿ ಸ್ವೀಕರಿಸಬೇಕಾಗಿ ಬರುತ್ತವೆ.
ಇದೀಗ ಇಂದೋರ್ನ ವಿಜಯನಗರ ಹೊಟೇಲ್ ಮಾಲೀಕನಿಗೆ ಇಲ್ಲಿನ ಪೊಲೀಸರು ನೋಟೀಸ್ ಒಂದನ್ನು ಕಳುಹಿಸಿದ್ದಾರೆ. ಗ್ರಾಹಕ ಆಕಾಶ್ ದುಬೆ ಎಂಬಾತ ನೀಡಿದ ದೂರಿನ ಮೇರೆಗೆ ಹೊಟೇಲ್ ಮಾಲೀಕನ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಆಕಾಶ್ ದುಬೆ ವಿಜಯನಗರದ ರೆಸ್ಟೋರೆಂಟ್ ಒಂದಕ್ಕೆ ತೆರಳಿ ವೆಬ್ ಬಿರಿಯಾನಿ ಆರ್ಡರ್ ಮಾಡಿದ್ದ. ಅದರಂತೆ ಸಪ್ಲಯರ್ ಬಿರಿಯಾನಿ ತಂದಿಟ್ಟಿದ್ದಾನೆ. ಆದರೆ ಎಡವಟ್ಟಾಗಿರುವುದು ಇಲ್ಲೇ... ಆರ್ಡರ್ ಮಾಡಿದ್ದ ವೆಜ್ ಬಿರಿಯಾನಿಯಲ್ಲಿ ಮೂಳೆಯೊಂದು ಸೇರಿಕೊಂಡಿತ್ತು. ವೆಜ್ ಬಿರಿಯಾನಿಯಲ್ಲಿ ಮೂಳೆ ಸಿಗಲು ಹೇಗೆ ಸಾಧ್ಯ? ಇದು ಆಕಾಶ್ ದುಬೆ ಕೋಪಕ್ಕೆ ಕಾರಣವಾಗಿದೆ.
ವೆಜ್ ಬಿರಿಯಾನಿಯಲ್ಲಿ ಮೂಳೆ ಸಿಕ್ಕಿದ ಕಾರಣದಿಂದ ಕೋಪಗೊಂಡ ಆಕಾಶ ದುಬೆ ನೇರ ಪೊಲೀಸ್ ಠಾಣೆಗೆ ತೆರಳಿ ದೂರು ನೀಡಿದ್ದಾನೆ. ಸೆಕ್ಷನ್ 298ರ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಹೊಟೇಲ್ ಮಾಲೀಕನಿಗೆ ನೋಟೀಸ್ ಕಳುಹಿಸಿದ್ದಾರೆ.
ಕೊನೆಗೆ ಹೊಟೇಲ್ನ ಮ್ಯಾನೇಜರ್ ಹಾಗೂ ಸಿಬ್ಬಂದಿಗಳು ಮಾಡಿದ ಎಡವಟ್ಟಿನ ಬಗ್ಗೆ ಒಪ್ಪಿಕೊಂಡು ಕ್ಷಮೆ ಕೇಳಿದ್ದಾರೆ. ದೂರ ದಾಖಲಾದ ಹಿನ್ನೆಲೆಯಲ್ಲಿ ಹೊಟೇಲ್ ಮ್ಯಾನೇಜರ್ನ್ನು ವಿಚಾರಣೆಗೆ ಒಳಪಡಿಸಿದ್ದೇವೆ. ಇದಾದ ಬಳಿಕ ರೆಸ್ಟೋರೆಂಟ್ ಮೇಲೆ ಸೂಕ್ತ ಕ್ರಮ ವಹಿಸಲಾಗುವುದು ಎಂದು ಉಪ ಪೊಲೀಸ್ ಆಯುಕ್ತ ಸಂಪತ್ ಉಪಾಧ್ಯಾಯ ಹೇಳಿರುವುದು ವರದಿಯಾಗಿದೆ. (ಏಜೆನ್ಸೀಸ್)