ಕುಮಾರಸ್ವಾಮಿ ಕೊರಳಿಗೆ ಸ್ಕೂಲ್ ಬ್ಯಾಗ್ ಹಾರ ಹಾಕಿದ ಅಭಿಮಾನಿಗಳು!

HDK
Published on

ತುಮಕೂರು: ಮಾಜಿ ಮುಖ್ಯಮಂತ್ರಿ ಎಚ್​.ಡಿ.ಕುಮಾರಸ್ವಾಮಿ ಕೈಗೊಂಡಿರುವ ಪಂಚರತ್ನ ರಥಯಾತ್ರೆಗೆ ಅಪಾರ ಸಂಖ್ಯೆಯಲ್ಲಿ ಜೆಡಿಎಸ್ ಕಾರ್ಯಕರ್ತರು ಕೈಜೋಡಿಸುತ್ತಿದ್ದಾರೆ. ಹೋದಲ್ಲೆಲ್ಲಾ ವಿಶೇಷವಾದ ಹಾರ ಹಾಕುವ ಮೂಲಕ ಜೆಡಿಎಸ್ ಕಾರ್ಯಕರ್ತರು ಕುಮಾರಸ್ವಾಮಿ ಅವರನ್ನು ತಮ್ಮ ಗ್ರಾಮಕ್ಕೆ ಬರಮಾಡಿಕೊಳ್ಳುತ್ತಿದ್ದಾರೆ. ಈ ಹಿಂದೆ ಕಬ್ಬಿನ ಹಾರ, ರಾಗಿ ಹಾರ, ದಾಳಿಂಬರ ಹಾರ, ಜೋಳದ ಹಾರ ಸೇರಿದಂತೆ ವಿಭಿನ್ನ ಬಗೆಯ ಹಾರ ಹಾರಿ ಸ್ವಾಗತಿಸಲಾಗುತ್ತಿತ್ತು.

ಇದೀಗ ಕುಮಾರಸ್ವಾಮಿ ಅವರನ್ನು ಚಿಕ್ಕನಾಯಕನಹಳ್ಳಿ ಕ್ಷೇತ್ರದಲ್ಲಿ ಮಕ್ಕಳ ಸ್ಕೂಲ್ ಬ್ಯಾಗ್ ಹಾರ ಹಾಕಿ ಗ್ರಾಮಸ್ಥರು ಅದ್ದೂರಿ ಸ್ವಾಗತ ಕೋರಿದ್ದಾರೆ. ಈ ವೇಳೆ ದಾರಿಯುದ್ದಕ್ಕೂ ಅಪಾರ ಸಂಖ್ಯೆಯಲ್ಲಿ ಜನ ಸೇರಿದ್ದರು. ಗ್ರಾಮಸ್ಥರು ಸ್ಕೂಲ್ ಬ್ಯಾಗ್​ಗಳನ್ನು ಒಟ್ಟು ಮಾಡಿ, ಬೃಹತ್ ಗಾತ್ರದ ಹಾರ ತಯಾರಿಸಿದ್ದಾರೆ. ಈ ಮೂಲಕ ಗ್ರಾಮೀಣ ಭಾಗದ ಮಕ್ಕಳಿಗೂ ಉತ್ತಮ ಶಿಕ್ಷಣ ನೀಡಬೇಕು ಎಂಬ ಸಂದೇಶವನ್ನು ಇಲ್ಲಿನ ಗ್ರಾಮಸ್ಥರು ನೀಡಿದ್ದಾರೆ.

ಚಿಕ್ಕನಾಯಕನ ಹಳ್ಳಿಗ್ರಾಮಸ್ಥರು ವಿಭಿನ್ನ ಕಲ್ಪನೆಯಲ್ಲಿ ಸಿದ್ಧಪಡಿಸಿರುವ ಸ್ಕೂಲ್ ಬ್ಯಾಗ್​ನ ಹಾರವನ್ನು ಎಚ್​.ಡಿ.ಕುಮಾರಸ್ವಾಮಿ ಮೆಚ್ಚಿಕೊಂಡಿದ್ದಾರೆ. ಈ ಬಗ್ಗೆ ಟ್ವಿಟರ್​​ನಲ್ಲಿ, ಪಂಚರತ್ನ ಯೋಜನೆಗಳು ಜನರ ಮನಸ್ಸಿಗೆ ತಟ್ಟಿವೆ ಎನ್ನುವುದಕ್ಕೆ ಇದಕ್ಕಿಂತ ದೊಡ್ಡ ಪುರಾವೆ ಬೇಕಿಲ್ಲ. ದ್ವಿತೀಯ ಪಿಯುಸಿವರೆಗೆ ಉಚಿತ ಶಿಕ್ಷಣ ನೀಡುವ ಕಾರ್ಯಕ್ರಮ ಪಂಚರತ್ನ ಯೋಜನೆಯಲ್ಲಿದೆ ಎಂದು ಬರೆದುಕೊಂಡಿದ್ದಾರೆ.

ಗ್ರಾಮಸ್ಥರು ಕುಮಾರಸ್ವಾಮಿ ಅವರನ್ನು ಬರಮಾಡಿಕೊಳ್ಳಲು ಸಿದ್ಧಪಡಿಸಿದ್ದ ಸ್ಕೂಲ್ ಬ್ಯಾಗ್ ಹಾರದಲ್ಲಿ ''ಸರಕಾರಿ ಶಾಲೆಗಳನ್ನು ಹೈಟೆಕ್ ಮಾಡಿಸಿ, ಬಡವರ ಮಕ್ಕಳಿಗೂ ಕಾನ್ವೆಂಟ್ ಶಿಕ್ಷಣ ಬೇಕ್ರಯ್ಯ..'' ಎಂದು ಬರೆದಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net