

ಉತ್ತರ ಪ್ರದೇಶ: ವೈದ್ಯಕೀಯ ಕ್ಷೇತ್ರದಲ್ಲಿ ಆಗಾಗ ಅಚ್ಚರಿಯ ವಿದ್ಯಮಾನಗಳು ನಡೆಯುತ್ತಿರುತ್ತವೆ. ಇತ್ತೀಚೆಗಷ್ಟೇ ಮಧ್ಯಪ್ರದೇಶದಲ್ಲಿ ಮಹಿಳೆಯೊಬ್ಬರು ನಾಲ್ಕು ಕಾಲಿನ ಹೆಣ್ಣು ಮಗುವಿಗೆ ಜನ್ಮ ನೀಡಿದ್ದರು. ಇದು ಎಲ್ಲರಿಗೂ ಅಚ್ಚರಿ ತಂದಿತ್ತು. ಇದೀಗ ಇಂತಹದ್ದೇ ಮತ್ತೊಂದು ವಿಚಿತ್ರ ಬೆಳವಣಿಗೆಯೊಂದು ವರದಿಯಾಗಿದೆ. ಮಗು ಜನಿಸುವಾಗ ತಲೆಯಲ್ಲಿ ಸಾಮಾನ್ಯವಾಗಿ ಕೂದಲು ಇದ್ದೇ ಇರುತ್ತದೆ. ಕೆಲವು ಮಕ್ಕಳಲ್ಲಿ ಮಾತ್ರ ಕೂದಲ ಬೆಳವಣಿಗೆ ಹೆಚ್ಚಿರುತ್ತದೆ.
ಆದರೆ ಇದೀಗ ಉತ್ತರ ಪ್ರದೇಶದ ಹರ್ದೋಯಿ ಎಂಬಲ್ಲಿ ಮಹಿಳೆಯೊಬ್ಬರು ಜನ್ಮ ನೀಡಿದ ಮಗು ವೈದ್ಯಕೀಯ ಲೋಕದ ಅಚ್ಚರಿಗೆ ಕಾರಣವಾಗಿದೆ. ಮಗುವಿನ ಸಂಪೂರ್ಣ ದೇಹದಲ್ಲಿ ಕೂದಲು ಹರಡಿಕೊಂಡಿದೆ. ಮಗುವಿನ ಈ ಫೋಟೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.
ಹರ್ದೋಯಿ ಎಂಬಲ್ಲಿ ಜನಿಸಿರುವ ಮಗುವಿನ ದೇಹದ ಶೇ. 60 ಭಾಗ ಕೂದಲಿನಿಂದ ಆವೃತವಾಗಿದೆ. ವೈರಲ್ ಆಗಿರುವ ಫೋಟೋದಲ್ಲಿ ಮಗುವಿನ ಬೆನ್ನಿನ ಭಾಗದಲ್ಲಿ ಸಂಪೂರ್ಣವಾಗಿ ಕೂದಲು ತುಂಬಿಕೊಂಡಿರುವುದನ್ನು ಕಾಣಬಹುದು. ಈ ಬಗ್ಗೆ ಆಸ್ಪತ್ರೆಯ ಡಾ.ಪಂಕಜ್ ಮಿಶ್ರಾ ಮಾತನಾಡಿ, 22 ವರ್ಷಗಳ ನನ್ನ ವೃತ್ತಿ ಜೀವನದಲ್ಲಿ ಇಂತಹ ಪ್ರಕರಣವನ್ನು ಈವರೆಗೆ ನೋಡಿಲ್ಲ ಎಂದು ಹೇಳಿಕೊಂಡಿದ್ದಾರೆ. ಮೆಲನೊಸೈಟಿಕ್ ನೆವಸ್ ಎಂಬ ರೋಗದಿಂದ ಮಗು ಈ ರೀತಿಯಾಗಿ ಜನಿಸಿದೆ ಎಂದು ವೈದ್ಯರು ಅಂದಾಜಿಸಿದ್ದಾರೆ.
ಮಗುವಿನ ಹೆಚ್ಚಿನ ಚಿಕಿತ್ಸೆಗಾಗಿ ಲಕ್ನೋಗೆ ಕಳುಹಿಸಲಾಗಿದ್ದು, ಶೀಘ್ರದಲ್ಲೇ ಮಗು ಚೇತರಿಸಿಕೊಳ್ಳಲಿದೆ. ಸದ್ಯ ನವಜಾತ ಶಿಶು ಹಾಗೂ ತಾಯಿ ಆರೋಗ್ಯವಾಗಿದ್ದಾರೆ ಎಂದು ವೈದ್ಯ ಡಾ.ಇಕ್ರಮ್ ಹುಸೇನ್ ಹೇಳಿದ್ದಾರೆ. ಇದೀಗ ಅಪರೂಪದ ಮಗುವನ್ನು ನೋಡಲು ದೊಡ್ಡ ಸಂಖ್ಯೆಯಲ್ಲಿ ಸ್ಥಳೀಯರು ಆಸ್ಪತ್ರೆಗೆ ಧಾವಿಸುತ್ತಿದ್ದಾರೆ ಎಂದು ವರದಿಯಾಗಿದೆ. (ಏಜೆನ್ಸೀಸ್)