ಕರೊನಾ ಪ್ರಕರಣಗಳ ಹೆಚ್ಚಳ!; ಸಭೆ ನಡೆಸಿದ ಮೋದಿ, ಸೂಕ್ತ ಮುನ್ನೆಚ್ಚರಿಕೆ ವಹಿಸಲು ಸೂಚನೆ

PM Modi
Published on

ನವದೆಹಲಿ: ದೇಶದಲ್ಲಿ ಕಳೆದೆರಡು ವಾರಗಳಿಂದ ಕೋವಿಡ್ ಮತ್ತು ಇನ್​ಫ್ಲೂಯೆಂಜಾ ಪ್ರಕರಣಗಳು ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಇಂದು ಉನ್ನತಮಟ್ಟದ ಸಭೆಯೊಂದನ್ನು ನಡೆಸಿದ್ದಾರೆ. ಮಾತ್ರವಲ್ಲ, ಸೂಕ್ತ ಮುನ್ನೆಚ್ಚರಿಕೆ ಕ್ರಮವನ್ನು ಕೈಗೊಳ್ಳುವಂತೆಯೂ ಸೂಚನೆ ನೀಡಿದ್ದಾರೆ.

ಸಭೆ ಬಳಿಕ ಮಾತನಾಡಿದ ಅವರು, ದೇಶದಲ್ಲಿ ಹೊಸ ಕೋವಿಡ್ ಪ್ರಕರಣಗಳಲ್ಲಿ ಹಾಗೂ ಇನ್​ಫ್ಲೂಯೆಂಜಾ ಸೋಂಕಿನ ಪ್ರಕರಣಗಳಲ್ಲೂ ಸ್ವಲ್ಪ ಏರಿಕೆ ಕಂಡುಬಂದಿದೆ. ಹೀಗಾಗಿ ನಾವು ಕೋವಿಡ್ ಸಂಬಂಧಿತ ಮುನ್ನೆಚ್ಚರಿಕೆಗಳನ್ನು ಪಾಲಿಸುವ ಜತೆಗೆ ಶ್ವಾಸಕೋಶ ಸಂಬಂಧಿತ ಸ್ವಚ್ಛತೆಯನ್ನು ಕೂಡ ಕಾಪಾಡಿಕೊಳ್ಳಬೇಕು ಎಂದು ತಿಳಿಸಿದ್ದಾರೆ. ಅಲ್ಲದೆ ಲ್ಯಾಬ್​ಗಳ ಮೇಲೆ ಕಣ್ಗಾವಲು ಇಡುವ ಜತೆಗೆ ಜೀನೋಮ್ ಟೆಸ್ಟಿಂಗ್ ಮತ್ತು ಶ್ವಾಸಕೋಶ ಸಂಬಂಧಿತ ರೋಗಗಳ ಮೇಲೆ ತೀವ್ರ ನಿಗಾ ಇಡುವ ಅಗತ್ಯವಿದೆ ಎಂದೂ ಅವರು ತಿಳಿಸಿದ್ದಾರೆ.

ಹಿರಿಯ ನಾಗರಿಕರು ಹಾಗೂ ಕೋಮಾರ್ಬಿಡಿಟಿ ಇರುವಂಥವರು ಜನಸಂದಣಿ ಇರುವ ಸ್ಥಳಗಳಲ್ಲಿ ಹೋಗಬೇಕಾದಾಗ ಮಾಸ್ಕ್​ ಧರಿಸುವುದು ಉತ್ತಮ ಎಂದಿರುವ ಪ್ರಧಾನಿ ಮೋದಿ, ಕೋವಿಡ್ -19 ಸಾಂಕ್ರಾಮಿಕ ರೋಗ ಇನ್ನೂ ಮುಗಿದಿಲ್ಲ ಮತ್ತು ದೇಶಾದ್ಯಂತ ಕರೊನಾ ಪರಿಸ್ಥಿತಿಯನ್ನು ನಿಯಮಿತವಾಗಿ ಮೇಲ್ವಿಚಾರಣೆ ಮಾಡುವ ಅವಶ್ಯಕತೆ ಇದೆ ಎಂಬುದನ್ನೂ ಒತ್ತಿ ಹೇಳಿದ್ದಾರೆ.

ದೇಶದ ಆರು ರಾಜ್ಯಗಳಲ್ಲಿ ಕೋವಿಡ್ ಪ್ರಕರಣಗಳ ಹೆಚ್ಚಳ ಕಂಡುಬಂದಿದ್ದ ಹಿನ್ನೆಲೆಯಲ್ಲಿ ಕಳೆದ ವಾರ ಕೇಂದ್ರ ಆರೋಗ್ಯ ಸಚಿವಾಲಯವು ಸೂಕ್ತ ಕ್ರಮಕೈಗೊಳ್ಳುವಂತೆ ಆಯಾ ರಾಜ್ಯಗಳಿಗೆ ತಿಳಿಸಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net