'ನಾಟಿಕೋಳಿ ಸಾಂಬಾರ್​, ಮಟನ್​ ಫ್ರೈ ಅಂದ್ರೆ ಪಂಚಪ್ರಾಣ'; ಗಾಜನೂರಿನಲ್ಲಿ ಅಪ್ಪು ನೆನಪು

puneet
Published on

ಚಾಮರಾಜನಗರ: ಪವರ್​ ಸ್ಟಾರ್ ಪುನೀತ್​ ರಾಜ್​ಕುಮಾರ್​ ಅವರು ತಮ್ಮ ತಂದೆ ದಿವಂಗತ ಡಾ.ರಾಜ್​ಕುಮಾರ್​ ಹುಟ್ಟಿದೂರಾದ ಗಾಜನೂರಿನೊಂದಿಗೆ ಅನ್ಯೋನ್ಯವಾದ ನಂಟು ಇಟ್ಟುಕೊಂಡಿದ್ದರು. ಗಾಜನೂರಿಗೆ ಬಂದರೆ ತಮಗಿಷ್ಟವಾದ ಅಡುಗೆ ಮಾಡಿಸಿಕೊಂಡು ಊಟ‌ ಮಾಡುತ್ತಿದ್ದರು ಎಂದು ಗಾಜನೂರಿನ ಡಾ.ರಾಜ್​ ಮನೆಯ ಅಡುಗೆ ಕೆಲಸದವರು ಅವರನ್ನು ಸ್ಮರಿಸಿದ್ದಾರೆ.

ಪುನೀತ್​​ಗೆ ಗಾಜನೂರಿನ ಮನೆಯ ನಾಟಿ ಕೋಳಿ ಸಾಂಬಾರ್ ಮತ್ತು ಮಟನ್ ಫ್ರೈ ಎಂದರೆ ಪಂಚಪ್ರಾಣ ಆಗಿತ್ತು. ಬಂದಾಗಲೆಲ್ಲ ತಮಗಿಷ್ಟದ ಈ ಅಡುಗೆಗಳನ್ನು ಮಾಡಿಸಿಕೊಂಡು ಊಟ‌ ಮಾಡುತ್ತಿದ್ದರು. ಅಡುಗೆಯವರೊಂದಿಗೆ, ಮನೆಕೆಲಸದವರೊಂದಿಗೆ ತಮಾಷೆ ಮಾಡುತ್ತಾ ಆತ್ಮೀಯವಾಗಿ ಬೆರೆಯುತ್ತಿದ್ದರು ಎಂದು ಮನೆಯವರು ನೆನೆದಿದ್ದಾರೆ.

ಇತ್ತೀಚೆಗೆ ಗಾಜನೂರಿಗೆ ಬಂದಿದ್ದ ಪುನೀತ್​​ ಅಪ್ಪಾಜಿಯ ನೆಚ್ಚಿನ ತಾಣಗಳಾದ ರಾಜ್ ಹುಟ್ಟಿದ ಮನೆ, ದೊಡ್ಡ ಆಲದಮರ, ಬೀರಪ್ಪ ದೇವಸ್ಥಾನ, ಜಮೀನು ಮೊದಲಾದ ಸ್ಥಳಗಳಿಗೆ ಭೇಟಿ ನೀಡಿ ಕಾಲಕಳೆದಿದ್ದರು. ಅಭಿಮಾನಿಗಳೊಂದಿಗೆ, ಗ್ರಾಮದ ಹಿರಿಯರೊಂದಿಗೆ ಸೆಲ್ಫಿ ತೆಗೆದುಕೊಂಡು ಖುಷಿಪಟ್ಟಿದ್ದರು ಎಂದು ತಿಳಿಸಿದ್ದಾರೆ.

ಗ್ರಾಮಸ್ಥರಿಂದ ಶ್ರದ್ದಾಂಜಲಿ: ಚಾಮರಾಜನಗರ ಜಿಲ್ಲೆ ಗಡಿಭಾಗದ ದೊಡ್ಡ ಗಾಜನೂರು ಗ್ರಾಮದಲ್ಲಿ ಮೇರುನಟ ರಾಜ್​ಕುಮಾರ್​ ಪುತ್ರ ಪುನೀತ್​​ರಿಗೆ ಗ್ರಾಮಸ್ಥರು ಭಾವಪೂರ್ಣ ಶ್ರದ್ಧಾಂಜಲಿ ಸಲ್ಲಿಸಿದರು. ಅಲ್ಲಲ್ಲಿ ಪುನೀತ್​ರ ಚಿತ್ರಗಳಿಗೆ ಪುಷ್ಪಹಾರ ಹಾಕಿ ನಮನ ಸಲ್ಲಿಸಲಾಯಿತು. ಡಾ.ರಾಜ್ ಹುಟ್ಟಿದ ಮನೆಯ ಮುಂಭಾಗ ಪುನೀತ್ ಭಾವ ಚಿತ್ರ ಇಟ್ಟು ಪೂಜೆ ಮಾಡಿ ದೀಪ ಹಚ್ಚಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net