ರಾಮನಗರ: ಸಿಎಂ ಸಿದ್ದರಾಮಯ್ಯ ಅವರ ತವರು ಜಿಲ್ಲೆ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದಲ್ಲಿ ನಡೆದಿದೆ ಎನ್ನಲಾದ ಅಕ್ರಮಕ್ಕೆ ಸಂಬಂಧಿಸಿದಂತೆ ವಿಪಕ್ಷಗಳಾದ ಬಿಜಪಿ ಹಾಗೂ ಜೆಡಿಎಸ್ ಪಾದಯಾತ್ರೆ ಎರಡನೇ ದಿನಕ್ಕೆ ಕಾಲಿಟ್ಟಿದ್ದು, ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಡಿಸಿಎಂ ಡಿ.ಕೆ. ಶಿವಕುಮಾರ್ ವಿರುದ್ಧ ತಮ್ಮ ವಾಗ್ದಾಳಿಯನ್ನು ಮುಂದುವರೆಸಿದ್ದಾರೆ.
ಬಿಡಿದಿಯಲ್ಲಿ ಇಂದು ಎರಡನೇ ದಿನದ ಪಾದಯಾತ್ರೆಗೆ ಚಾಲನೆ ನೀಡಿ ಮಾತನಾಡಿದ ಮಾಜಿ ಸಿಎಂ ಎಚ್.ಡಿ.ಕೆ ದಲಿತರಿಗೆ ಸೇರಬೇಕಾದ 68 ಎಕರೆ ಜಮೀನನ್ನು ಡಿ.ಕೆ. ಶಿವಕುಮಾರ್ ಅವರು ಲಪಟಾಯಿಸಿದ್ದಾರೆ. ಅಸಲಿ ಸೊಸೈಟಿ ನಕಲಿ ಮಾಡಿ ದಲಿತರ ಭೂಮಿ ಲಪಟಾಯಿಸಿದ್ದಾರೆ. ಇವರ ಬಳಿ ನಾನು ಹೇಳಿಸಿಕೊಳ್ಳುವ ಅಗತ್ಯ ಇಲ್ಲ. ನಾನು ಸಿನಿಮಾ ವಿತರಕ ಆಗಿದ್ದಾಗ ಭೂಮಿ ಖರೀದಿಸಿದ್ದೆ. ಯಾರಿಗೂ ಮೋಸ ಮಾಡಲಿಲ್ಲ. ವಂಚನೆ ಮಾಡಿ ಭೂಮಿ ಖರೀದಿಸಿದ್ದರೆ ರಾಜಕೀಯ ನಿವೃತ್ತಿ ಪಡೆಯುತ್ತೇನೆ ಎಂದು ಸವಾಲೆಸೆದಿದ್ದಾರೆ.
ನಿವೃತ್ತ ಯೋಧನ ಪುತ್ರಿಯನ್ನು ಅಪಹರಿಸಿ, ಆಸ್ತಿ ಕೊಡದಿದ್ದರೆ ಮಗಳನ್ನು ಕತ್ತರಿಸಿ ಹಾಕುತ್ತೇನೆ ಅಂತ ಹೆದರಿಸಿ ಅವರಿಂದ ಅಜ್ಜಯ್ಯನ ದೇವಸ್ಥಾನದ ಪಕ್ಕದಲ್ಲಿನ ಜಾಗವನ್ನು ಬರೆಸಿಕೊಂಡಿದ್ದೀರಿ. ಬಿಡದಿಯಲ್ಲಿ ಐಕಾನ್ ನರ್ಸಿಂಗ್ ಸ್ಕೂಲ್ ಭೂಮಿಯನ್ನು ಸಾಲ ಪಡೆದಿದ್ದವರನ್ನು ಹೆದರಿಸಿ ಬರೆಸಿಕೊಂಡಿದ್ದೀರಿ. ಉಪಮುಖ್ಯಮಂತ್ರಿಯಾಗಿ ಸದಾಶಿವನಗರದಲ್ಲಿ ಮೂವರು ವಿಧವೆಯರಿಗೆ ಬೆದರಿಸಿ ನಿಮ್ಮ ಮಗಳ ಹೆಸರಿಗೆ ಆಸ್ತಿ ಬರೆಸಿಕೊಂಡಿದ್ದೀರಿ ಇವುಗಳನ್ನು ತನಿಖೆ ಮಾಡಲು ಸಿಬಿಐ, ಇಡಿ ಸಾಕಾಗುವುದಿಲ್ಲ ಎಂದು ವಾಗ್ದಾಳಿ ನಡೆಸಿದ್ದಾರೆ.
ಇದನ್ನೂ ಓದಿ: ನಿಮ್ಮ ಕಣ್ಣುಗಳೇನಾದರು… ಪಾಕ್ ಅಭಿಮಾನಿಯ ಪೋಸ್ಟ್ಗೆ ಖಡಕ್ ರಿಪ್ಲೈ ಕೊಟ್ಟ ಭಜ್ಜಿ
ಅದೇನೋ ಬಿಚ್ತೀನಿ ಅಂದ್ಯಲ್ಲಪ್ಪ, ಬಿಚ್ಚು ನೋಡೋಣ, ನಂದು, ವಿಜಯೇಂದ್ರದು ಏನಿದೆ ನಿಮ್ಮ ಬಳಿ ಬಿಚ್ಚಿ? ನಾನಿರೋದು ಬೀದಿಯಲ್ಲಿ, ನೀನಿರೋದು ಗಾಜಿನ ಮನೆಯಲ್ಲಿ. ನಾನು ಬಿಚ್ಚೋಕೆ ಹೋದ್ರೆ ನಿಮ್ಮದು ಪುಟಗಟ್ಟಲೆ ಇದೆ. ಅದನ್ನ ತನಿಖೆ ಮಾಡೋದಕ್ಕೆ ಹತ್ತತ್ತು ಸಿಬಿಐ, ಇಡಿ ಸಂಸ್ಥೆಗಳನ್ನ ಸ್ಥಾಪನೆ ಮಾಡ್ಬೇಕು. ಅಜ್ಜಯ್ಯನ ಬಗ್ಗೆ ಶಿವಕುಮಾರ್‌ಗೆ ಭಕ್ತಿ ಗೌರವ ಇದ್ದರೆ ಪ್ರಮಾಣ ಮಾಡಲಿ. ನೀವು ಪ್ರಾಮಾಣಿಕವಾಗಿ ಬೆಳೆದು ಬಂದ್ರಾ ಅಂತ ಪ್ರಮಾಣ ಮಾಡಲಿ. ನಾನೂ ಪ್ರಮಾಣ ಮಾಡ್ತೇನೆ. ಡಿಕೆಶಿಗೆ ಅಜ್ಜಯ್ಯನ ಶಾಪವೂ ಆರಂಭವಾಗಿದೆ. ಎಷ್ಟು ಮನೆಗಳನ್ನು ಒಡೆದು ನೀವು ಬೆಳೆದಿರಿ ಅಂತ ಗೊತ್ತಿದೆ ಎಂದು ಹರಿಹಾಯ್ದಿದ್ದಾರೆ.
ಏಕವಚನದಲ್ಲಿ ಮಾತನಾಡಬೇಕು ಅಂದರೆ ನಿಮಗಿಂತ ಹೆಚ್ಚಿನ ರೀತಿಯಲ್ಲಿ ನಮಗೆ ಮಾತನಾಡಲು ಬರುತ್ತೆ. ಆದರೆ ಅದು ನಮ್ಮ ಸಂಸ್ಕೃತಿಯಲ್ಲ. ಆದರೆ ನಿಮ್ಮಷ್ಟು ಸಣ್ಣತನಕ್ಕೆ ನಾನು ಇಳಿಯಲ್ಲ. ಡಾ. ಮಂಜುನಾಥ್ ಬೆಂಗಳೂರು ಗ್ರಾಮಾಂತರ ಕ್ಷೇತ್ರವನ್ನು ಅರ್ಥ ಮಾಡಿಕೊಳ್ಳುವಷ್ಟರಲ್ಲಿ ಆಯಸ್ಸು ಮುಗಿದು ಹೋಗುತ್ತದೆ ಎಂದು ನಮ್ಮ ಸ್ನೇಹಿತರು ಹೇಳಿದ್ದಾರೆ. ಆದರೆ ಮಂಜುನಾಥ್ ಮೈಯಲ್ಲಿ ರಾಜಕೀಯ ರಕ್ತ ಹರಿಯುತ್ತಿದೆ. ರಾಮನಗರ ಜಿಲ್ಲಾಧಿಕಾರಿಯವರೇ ಸೋತ ಅಭ್ಯರ್ಥಿಯನ್ನು ಕೂರಿಸಿಕೊಂಡು ಏನೇನು ಮಾಡಿದ್ದೀರಿ, ಏನೇನು ಸೂಚನೆ ಕೊಟ್ಟಿದ್ದೀರಿ. ಅಧಿಕಾರಿಗಳಿಗೆ ಎಚ್ಚರಿಕೆ ನೀಡುತ್ತಿದ್ದೇನೆ, ಬಹಳ ಸಮಯ ಇಲ್ಲ, ಇದಕ್ಕೆಲ್ಲ ಬೆಲೆ ತೆರಬೇಕಾಗುತ್ತದೆ. ಕಾನೂನುಬಾಹಿರ ಚಟುವಟಿಕೆ ನಡೆದರೆ ತಕ್ಕ ಪಾಠ ಎದುರಿಸಬೇಕಾಗುತ್ತೆ ಎಂದು ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಎಚ್ಚರಿಸಿದ್ದಾರೆ.