ಚಂಡೀಗಢ: ಆಘಾತಕಾರಿ ಘಟನೆಯೊಂದರಲ್ಲಿ ಅಮಾನತುಗೊಂಡಿರುವ ಪೊಲೋಸ್ ಅಧಿಕಾರಿಯೊಬ್ಬರು ತಮ್ಮ ಅಳಿಯನಿಗೆ ನ್ಯಾಯಾಲಯದಲ್ಲೇ ಗುಂಡಿಕ್ಕಿ ಕೊಲೆ ಮಾಡಿರುವ ಘಟನೆ ಚಂಡೀಗಢದ 43ನೇ ಸೆಕ್ಟರ್ ನ್ಯಾಯಾಲಯದಲ್ಲಿ ನಡೆದಿದೆ. ಘಟನೆ ಸಂಬಂಧ ಆರೋಪಿ ಪೊಲೀಸ್ ಅಧಿಕಾರಿಯನ್ನು ಬಂಧಿಸಿದ್ದು, ನ್ಯಾಯಾಲಯದಲ್ಲೇ ನಡೆದಿರುವ ಈ ಘಟನೆ ಎಲ್ಲರನ್ನು ಬೆಚ್ಚಿಬೀಳಿಸಿದೆ.
ಮೃತರನ್ನು ಭಾರತೀಯ ಸಿವಿಲ್ ಅಕೌಂಟ್ ಸರ್ವಿಸಸ್ ಅಧಿಕಾರಿ ಹರ್‌ಪ್ರೀತ್ ಸಿಂಗ್ ಎಂದು ಗುರುತಿಸಲಾಗಿದ್ದು, ಪೊಲೀಸರು ಆರೋಪಿ ಮಲ್ವಿಂದರ್ ಸಿಂಗ್ನನ್ನು ವಶಕ್ಕೆ ಪಡೆದಿದ್ದಾರೆ. ಕೃತ್ಯಕ್ಕೆ ಬಳಸಿದ ಆಯುಧವನ್ನೂ ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಘಟನೆ ಕುರಿತು ಮಾಹಿತಿ ನೀಡಿರುವ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು, ಮಲ್ವಿಂದರ್ ಸಿಂಗ್ ಅವರ ಪುತ್ರಿ ಡಾ.ಅಮಿತೋಜ್ ಕೌರ್ ಮತ್ತು ಹರ್‌ಪ್ರೀತ್ ಸಿಂಗ್ ನಡುವಿನ ವೈವಾಹಿಕ ಜೀವನದಲ್ಲಿ ತೊಂದರೆಗಳಿದ್ದ ಕಾರಣ ದಂಪತಿಗಳು ದೂರಾಗಿದ್ದರು. ಕೌಟುಂಬಿಕ ಕಲಹ ಸಂಬಂಧ ನ್ಯಾಯಾಲಯದ ಮೊರೆ ಹೋಗಿದ್ದ ಉಭಯ ಕುಟುಂಬಸ್ಥರ ನಡುವಿನ ನಾಲ್ಕನೇ ಮಧ್ಯಸ್ಥಿಕೆ ಮಾತುಕತೆಯಾಗಿತ್ತು. ಅದರಂತೆ ಎರಡು ಕುಟುಂಬದವರು ನ್ಯಾಯಾಲಯ್ಕಕೆ ಹಾಜರಾಗಿದ್ದರು.
ಇದನ್ನೂ ಓದಿ: ಭಾರತ-ಶ್ರೀಲಂಕಾ ಏಕದಿನ ಪಂದ್ಯಕ್ಕೆ ಮಳೆ ಭೀತಿ; ಪಿಚ್ ಯಾರಿಗೆ ಸಹಕಾರಿ, ಇಲ್ಲಿದೆ ಕಂಪ್ಲೀಟ್ ಡೀಟೇಲ್ಸ್
ವಿಚಾರಣೆ ನಡೆಯುತ್ತಿದ್ದ ವೇಳೆ ಮಲ್ವಿಂದರ್ ಸಿಂಗ್ ಹರ್‌ಪ್ರೀತ್ ಅವರಿಗೆ ಟಾಯ್ಲೆಟ್ನ ದಾರಿ ತೋರಿಸುವಂತೆ ಹೇಳಿದ್ದಾರೆ. ಅದರಂತೆ ವಾಶ್ರೂಮ್ ದಾರಿ ತೋರಿಸಲು ಹೋದಾಗ ಮಲ್ವಿಂದರ್ ಹರ್‌ಪ್ರೀತ್ ಮೇಲೆ ಗುಂಡು ಹಾರಿಸಿ ಹತ್ಯೆ ಮಾಡಿದ್ದಾರೆ. ಮಲ್ವಿಂದರ್ ಸಿಂಗ್ ಪಾಯಿಂಟ್-ಬ್ಲಾಂಕ್ ರೇಂಜ್‌ನಿಂದ ಮೂರು ಗುಂಡುಗಳನ್ನು ಹಾರಿಸಿದ್ದು ಅವರನ್ನು ತಕ್ಷಣವೇ ಬಂಧಿಸಲಾಯಿತು ಎಂದು ತಿಳಿಸಿದ್ದಾರೆ.
ಕಳೆದ ವರ್ಷ ನವೆಂಬರ್‌ನಲ್ಲಿ, ಪಂಜಾಬ್ ವಿಜಿಲೆನ್ಸ್ ಬ್ಯೂರೋ ಪಂಜಾಬ್ ಪೊಲೀಸರ ಮಾನವ ಹಕ್ಕುಗಳ ಸೆಲ್‌ನಲ್ಲಿ ಎಐಜಿಯಾಗಿ ನೇಮಕಗೊಂಡಿದ್ದ ಮಲ್ವಿಂದರ್ ಸಿಂಗ್ ಅವರ ವಿರುದ್ಧ ವಂಚನೆ ಮತ್ತು ಸುಲಿಗೆ ಆರೋಪದ ಮೇಲೆ ಪ್ರಕರಣ ದಾಖಲಿಸಿತ್ತು ನಂತರ ಅವರನ್ನು ಅಮಾನತುಗೊಳಿಸಲಾಗಿತ್ತು. ಅಂದಿನಿಂದ ಅವರನ್ನು ಸೇವೆಯಿಂದ ಅಮಾನತು ಮಾಡಲಾಗಿದೆ.