ಆಗ್ರಾ: ಉತ್ತರ ಪ್ರದೇಶದ ಇಟಾವಾದ ಲಕ್ನೋ-ಆಗ್ರಾ ಎಕ್ಸ್‌ಪ್ರೆಸ್‌ವೇಯಲ್ಲಿ ಸ್ಲೀಪರ್ ಬಸ್ ಮತ್ತು ಕಾರಿನ ನಡುವೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಏಳು ಮಂದಿ ಮೃತಪಟ್ಟು, 40ಕ್ಕೂ ಅಧಿಕ ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ.
ರಾಯ್ಬರೇಲಿಯಿಂದ ದೆಹಲಿಗೆ ಹೋಗುತ್ತಿದ್ದ ಡಬಲ್ ಡೆಕ್ಕರ್ ಬಸ್ ರಾತ್ರಿ 12.30 ರ ಸುಮಾರಿಗೆ ಕಾರಿಗೆ ಡಿಕ್ಕಿ ಹೊಡೆದಿದೆ. ಬಸ್ಸಿನಲ್ಲಿದ್ದ ನಾಲ್ವರು, ಕಾರಿನಲ್ಲಿದ್ದ ಮೂವರು ಸ್ಥಳದಲ್ಲೇ ಮೃತಪಟ್ಟಿದ್ದು, 40ಕ್ಕೂ ಅಧಿಕ ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ.
ಈ ಕುರಿತು ಮಾತನಾಡಿರುವ ಎಸ್‌ಎಸ್‌ಪಿ ಸಂಜಯ್ ಕುಮಾರ್ ಶರ್ಮಾ, ಆಗ್ರಾದಿಂದ ಲಕ್ನೋಗೆ ತೆರಳುತ್ತಿದ್ದ ಕಾರೊಂದು ರಸ್ತೆಯ ಮಧ್ಯಭಾಗದಲ್ಲಿರುವ ನೆಟ್ ಡಿವೈಡರ್ ಅನ್ನು ದಾಟಿ ರಾಂಗ್ ಸೈಡ್‌ನಲ್ಲಿ ಬಂದಿದೆ. ಎದುರು ಬಂದ ಸ್ಲೀಪರ್ ಬಸ್ಗೆ ಕಾರು ಡಿಕ್ಕಿ ಹೊಡೆದಿದ್ದು, ಬಸ್ ಎಕ್ಸ್‌ಪ್ರೆಸ್‌ವೇಯಿಂದ 20 ಅಡಿ ಕೆಳಗೆ ಬಿದ್ದಿದೆ. ಘಟನೆ ಸಂಬಂಧ ಪ್ರಕರಣ ದಾಖಲಿಸಿಕೊಳ್ಳಲಾಗಿದ್ದು, ತನಿಖೆ ನಡೆಯುತ್ತಿದೆ ಎಂದು ತಿಳಿಸಿದ್ದಾರೆ.