ಕೊಪ್ಪಳ: ಯಾದಗಿರಿ ನಗರ ಸೈಬರ್ ಠಾಣೆ ಪಿಎಸ್ಐ ಪರಶುರಾಮ್ ಅವರ ಅನುಮಾನಾಸ್ಪದ ಸಾವು ರಾಜ್ಯ ರಾಜಕಾರಣದಲ್ಲಿ ಹೊಸ ಗದ್ದಲವನ್ನು ಎಬ್ಬಿಸಿದ್ದು, ಆಡಳಿತ ಹಾಗೂ ವಿಪಕ್ಷಗಳ ನಡುವಿನ ಕಿತ್ತಾಟಕ್ಕೆ ಕಾರಣವಾಗಿದೆ. ಮೂಲತಃ ಕೊಪ್ಪಳ ಜಿಲ್ಲೆ ಕಾರಟಗಿ ತಾಲ್ಲೂಕಿನ ಸೋಮನಾಳ ಗ್ರಾಮದ ನಿವಾಸಿಯಾಗಿದ್ದ ಪರಶುರಾಮ್ ಅವರು ಯಾದಗಿರಿಯಲ್ಲಿ ಕೆಲಸ ನಿರ್ವಹಿಸುತ್ತಿದ್ದ ವೇಳೆ ಹೃದಯಾಘಾತದಿಂದ ಮೃತಪಟ್ಟಿದ್ದಾರೆ ಎಂದು ಹೇಳಲಾಗಿದೆ. ಆದರೆ, ಅವರ ಸಾವಿಗೆ ಯಾದಗಿರಿ ಕ್ಷೇತ್ರದ ಕಾಂಗ್ರೆಸ್ ಶಾಸಕ ಚೆನ್ನಾರೆಡ್ಡಿ ಪಾಟೀಲ್, ಪುತ್ರ ಪಂಪನಗೌಡ ಕಾರಣ ಎಂದು ಕುಟುಂಬಸ್ಥರು ಆರೋಪಿಸಿದ್ದು, ಈ ಸಂಬಂಧ ರಾಜ್ಯ ಸರ್ಕಾರ ಸಿಐಡಿ ತನಿಖೆಗೆ ಆದೇಶಿಸಿದೆ.
ಕಡು ಬಡತನದ ಹಿನ್ನೆಲೆಯಿಂದ ಬಂದ ಪರಶುರಾಮ್ ಅವರು ಪೊಲೀಸ್ ಸನ್ ಇನ್ಸ್ಪೆಕ್ಟರ್ ಆಗಿದ್ದೆ ಒಂದು ರೋಚಕ ಕಥೆಯಾಗಿದೆ. ಇದಲ್ಲದೆ ಸ್ಪರ್ಧಾತ್ನಕ ಪರೀಕ್ಷೆ ಬರೆದು ಎಂಟು ಇಲಾಖೆಗಳಲ್ಲಿ ನೌಕರಿಗೆ ಆಯ್ಕೆಯಾಗಿದ್ದರು. ಬಡವರ ಸೇವೆಗಾಗಿ ಖಾಕಿ ತೊಟ್ಟಿದ್ದ ಇವರು ಬುದ್ದಿವಂತಿಕೆ ಮತ್ತು ಕಠಿಣ ಪರಿಶ್ರಮದಿಂದ ಸರ್ಕಾರಿ ನೌಕರಿ ಪಡೆಯುವುದು ಎಷ್ಟು ಸರಳ ಎನ್ನುವುದನ್ನು ಸಾಧಿಸಿ ತೋರಿಸುವ ಮೂಲಕ ಅನೇಕರಿಗೆ ಮಾದರಿಯಾಗಿದ್ದರು.
ಮೃತ ಪರಶುರಾಮ್ ಅವರ ತಂದೆ-ತಾಯಿ ಕೃಷಿ ಮತ್ತು ಕೂಲಿ ಕೆಲಸ ಮಾಡುತ್ತಿದ್ದರು. ಎಸ್ಎಸ್ಎಲ್ಸಿಯಲ್ಲಿ ಉತ್ತಮ ಅಂಕ ಪಡೆದು ತೇರ್ಗಡೆಯಾದ ಪರಶುರಾಮ್ ಅವರಿಗೆ ಪಿಯುಸಿಯಲ್ಲಿ ಸೈನ್ಸ್ ವಿಷಯವನ್ನು ಕೊಡಿಸಲಾಗಿತ್ತು. ಆದರೆ, ಅವರು ನಾಲ್ಕು ವಿಷಯಗಳಲ್ಲಿ ಫೇಲಾಗಿದ್ದರು. ಪಿಯುಸಿ ಫೇಲಾದ ನಂತರ ಊರು ತೊರೆದ ಪರಶುರಾಮ್ ಎರಡು ತಿಂಗಳ ಕಾಲ ಬೆಂಗಳೂರಿನಲ್ಲಿ ಕೂಲಿ ಕಾರ್ಮಿಕನಾಗಿ ಕೆಲಸ ಮಾಡಿದ್ದರು. ಆ ಬಳಿಕ ಮನಪರಿವರ್ತನೆಯಿಂದ ಊರಿಗೆ ವಾಪಸ್ ಆದ ಅವರು ಕಲಾ ವಿಭಾಗಕ್ಕೆ ಮರು ಪ್ರವೇಶಾತಿ ಪಡೆದು ಫಸ್ಟ್ ಕ್ಲಾಸ್ನಲ್ಲಿ ಪಾಸ್ಸಾಗಿದ್ದರು. ಆ ಬಳಿಕ ಧಾರವಾಡದ ಕೆಸಿಡಿ ಕಾಲೇಜಿನಲ್ಲಿ ಪದವಿ ವ್ಯಾಸಂಗ ಮಾಡಿದರು.
ಇದನ್ನೂ ಓದಿ: ಇತಿಹಾಸದಲ್ಲೇ ಮೊದಲ ಬಾರಿಗೆ ಭಾರತೀಯನಿಗೆ ಕೋಚ್ ಹುದ್ದೆ ಆಫರ್ ಮಾಡಿದ ಇಂಗ್ಲೆಂಡ್; ಮಾಜಿ ನಾಯಕನಿಗೆ ಸಿಕ್ತು ಬಂಪರ್ ಚಾನ್ಸ್
ಪದವಿ ವ್ಯಾಸಂಗ ಮಾಡುತ್ತಿರುವಾಗಲೇ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸಿದ್ದ ಪರಶುರಾಮ್ ಅವರು ಡಿಗ್ರಿ ಮುಗಿಯುತ್ತಿದ್ದಂತೆ ಜೈಲ್ ವಾರ್ಡನ್ ಆಗಿ ಸರ್ಕಾರಿ ನೌಕರಿ ಪಡೆದಿದ್ದರು. ಐದು ವರ್ಷಗಳ ಕಾಲ ಬೆಂಗಳೂರು ಪರಪ್ಪನ ಅಗ್ರಹಾರ ಜೈಲಿನಲ್ಲಿ ವಾರ್ಡನ್ ಆಗಿ ಕೆಲಸ ನಿರ್ವಹಿಸಿದ್ದರು. ನಂತರ ಬಳ್ಳಾರಿ ಮಹಾನಗರ ಪಾಲಿಕೆಯಲ್ಲಿ ಒಂದು ವರ್ಷ ಎಫ್ಡಿಎ ಆಗಿ ಕೆಲಸ ಮಾಡಿದ್ದರು. ಇದೇ ಸಮಯದಲ್ಲಿ ಟ್ರಾಫಿಕ್ ಪೊಲೀಸ್, ಪಿಡಿಒ ಸೇರಿದಂತೆ ಅನೇಕ ಸರ್ಕಾರಿ ಹುದ್ದೆಗಳಿಗೆ ಆಯ್ಕೆಯಾಗಿದ್ದ ಪರಶುರಾಮ್ ಪಿಎಸ್ಐ ಆಗಬೇಕೆಂಬ ಕನಸನ್ನು ಹೊತ್ತು ಪರೀಕ್ಷೆಗೆ ತಯಾರಿ ಮಾಡಿಕೊಂಡಿದ್ದರು. ಕಠಿಣ ಪರಿಶ್ರಮದ ಫಲವಾಗಿ 2017 ರಲ್ಲಿ ಪಿಎಸ್ಐ ಆಗಿ ಆಯ್ಕೆಯಾಗಿದ್ದರು.
ಪಿಯುಸಿಯಲ್ಲಿ ಸೈನ್ಸ್ ವಿಷಯದಲ್ಲಿ ನಾಲ್ಕು ಸಬ್ಜೆಕ್ಟ್ ಫೇಲಾಗಿದ್ದ ಪರಶುರಾಮ್ ಅವರು, ಆ ಬಳಿಕ ಕಲಾ ವಿಭಾಗದಲ್ಲಿ ವ್ಯಾಸಂಗ ಮಾಡಿ ಎಂಟು ಸರ್ಕಾರಿ ನೌಕರಿಗೆ ಆಯ್ಕೆಯಾಗುವ ಮೂಲಕ ಅನೇಕರಿಗೆ ಮಾದರಿಯಾಗಿದ್ದಾರೆ. ಕೆಲಸ ನಿರ್ವಹಿಸುತ್ತಿದ್ದಾಗಲೇ ಬಾಹ್ಯ ಅಭ್ಯರ್ಥಿಯಾಗಿ ಕರ್ನಾಟಕ ಮುಕ್ತ ವಿಶ್ವವಿದ್ಯಾಲಯದಿಂದ ಇಂಗ್ಲಿಷ್ ವಿಷಯದಲ್ಲಿ ಸ್ನಾತಕೋತ್ತರ ಪದವಿ ಕೂಡ ಪಡೆದಿದ್ದರು. ಶಿಕ್ಷಣ ವ್ಯಕ್ತಿಯ ವ್ಯಕ್ತಿತ್ವವನ್ನು ಹೇಗೆ ಬದಲಾಯಿಸುತ್ತದೆ ಎನ್ನುವುದಕ್ಕೆ ಸಾಕ್ಷಿಯಾಗಿದ್ದ ಪರಶುರಾಮ್ ಅವರು ಇಂದು ನಮ್ಮನ್ನೆಲ್ಲಾ ಅಗಲಿರುವುದು ನೋವಿನ ಸಂಗತಿಯಾಗಿದೆ. ಸಿಐಡಿ ವರದಿ ಬಂದ ನಂತರ ಅವರ ಸಾವಿನ ಬಗ್ಗೆ ಸ್ಪಷ್ಟ ಚಿತ್ರಣ ಸಿಗಲಿದೆ.