ನವದೆಹಲಿ: ಜೂನ್ 29ರಂದು ಬಾರ್ಬಡೋಸ್ನಲ್ಲಿ ಮುಕ್ತಾಯಗೊಂಡ ಟಿ20 ವಿಶ್ವಕಪ್ನಲ್ಲಿ ಭಾರತ ತಂಡವು ದಕ್ಷಿಣ ಆಫ್ರಿಕಾವನ್ನು ಮಣಿಸುವ ಮೂಲಕ ಎರಡನೇ ಬಾರಿಗೆ ಚುಟುಕು ಮಾದರಿಯಲ್ಲಿ ಚಾಂಪಿಯನ್ಸ್ ಆಗಿ ಹೊರಹೊಮ್ಮಿದರು. ಟೀಮ್ ಇಂಡಿಯಾವನ್ನು ಎರಡನೇ ಬಾರಿಗೆ ಚಾಂಪಿಯನ್ ಆಗಿಸುವಲ್ಲಿ ತಂಡದ ಮುಖ್ಯ ಕೋಚ್ ರಾಹುಲ್ ದ್ರಾವಿಡ್ ಮುಖ್ಯ ಪಾತ್ರ ವಹಿಸಿದ್ದರು ಎಂದು ಹೇಳಿದರೆ ತಪ್ಪಾಗಲಾರದು. ಏಕೆಂದರೆ ಭಾರತ ತಂಡದ 11 ವರ್ಷಗಳ ಕಪ್ ಬರವನ್ನು ಕೊನೆಗಾಣಿಸುವಲ್ಲಿ ಯಶಸ್ವಿಯಾಗಿದ್ದ ದ್ರಾವಿಡ್ ಅವರ ಅಧಿಕಾರಾವಧಿಯು ಟಿ20 ವಿಶ್ವಕಪ್ ಗೆಲುವಿನೊಂದಿಗೆ ಮುಕ್ತಾಯಗೊಂಡಿತ್ತು.
ಟಿ20 ವಿಶ್ವಕಪ್ ಮುಗಿಯುತ್ತಿದ್ದಂತೆ ರಾಹುಲ್ ಅವರ ಕೋಚ್ ಅವಧಿ ಮುಕ್ತಾಯವಾಗಲಿದೆ ಎಂದು ಹೇಳಲಾಗಿತ್ತು. ಕೋಚ್ ಹುದ್ದೆಯಲ್ಲಿ ಅವರನ್ನು ಮುಂದುವರೆಯುವಂತೆ ಬಿಸಿಸಿಐ ಮನವೊಲಿಸಿತಾದರೂ ರಾಹುಲ್ ಯಾಕೋ ಅಷ್ಟಾಗಿ ಮನಸು ಮಾಡಲಿಲ್ಲ. ರಾಹುಲ್ ದ್ರಾವಿಡ್ ಉತ್ತರಾಧಿಕಾರಿಯಾಗಿ ಗೌತಮ್ ಗಂಭೀರ್ ಟೀಮ್ ಇಂಡಿಯಾದ ಮುಖ್ಯ ಕೋಚ್ ಆಗಿ ಆಯ್ಕೆಯಾಗಿದ್ದು, ರಾಷ್ಟ್ರೀಯ ತಂಡವನ್ನು ತೊರೆದ ಬಳಿಕ ದ್ರಾವಿಡ್ ಐಪಿಎಲ್ನಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂದು ಹೇಳಲಾಗಿದೆಯಾದರೂ ಇದೀಗ ಅವರಿಗೆ ರಾಷ್ಟ್ರೀಯ ತಂಡದ ಮುಖ್ಯ ಕೋಚ್ ಹುದ್ದೆಯ ಆಫರ್ ಬಂದಿದೆ.
ರಾಹುಲ್ ದ್ರಾವಿಡ್ ಐಪಿಎಲ್ನಲ್ಲಿ ತಮ್ಮ ಹಿಂದಿನ ಫ್ರಾಂಚೈಸಿಯಾದ ರಾಜಸ್ಥಾನ್ ರಾಯಲ್ಸ್ ತಂಡದ ಮುಖ್ಯ ಕೋಚ್ ಆಗಲಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ. ಇದರ ನಡುವೆಯೇ ಇಂಗ್ಲೆಂಡ್ ತಂಡದ ವಿಶ್ವಕಪ್ ವಿಜೇತ ನಾಯಕ ಇಯಾನ್ ಮಾರ್ಗನ್, ದ್ರಾವಿಡ್ ಇಂಗ್ಲೆಂಡ್‌ನ ಸೀಮಿತ ಓವರ್‌ಗಳ ತಂಡದ ಮುಂದಿನ ಮುಖ್ಯ ಕೋಚ್ ಆಗಬೇಕೆಂದು ಮನವಿ ಮಾಡಿದ್ದಾರೆ. ಖಾಸಗಿ ಸುದ್ದಿ ಸಂಸ್ಥೆಯಲ್ಲಿ ಈ ಕುರಿತು ಮಾತನಾಡಿದ ಮಾರ್ಗನ್ ದ್ರಾವಿಡ್ ಅವರು ಇಂಗ್ಲೆಂಡ್ ತಂಡದ ಕೋಚ್ ಆಗೆಲೆಂದು ಬೇಡಿಕೆ ಇಟ್ಟಿದ್ದಾರೆ.
ಇದನ್ನೂ ಓದಿ: PSI ಅನುಮಾನಸ್ಪದ ಸಾವು ಪ್ರಕರಣ; ಕಾಂಗ್ರೆಸ್ ಶಾಸಕ, ಪುತ್ರನ ವಿರುದ್ಧ ಅಟ್ರಾಸಿಟಿ ಪ್ರಕರಣ ದಾಖಲು
09ನೇ ಆವೃತ್ತಿಯ ಟಿ20 ವಿಶ್ವಕಪ್ನಲ್ಲಿ ಗೆಲ್ಲುವ ಭರವಸೆಯೊಂದಿಗೆ ಕಣಕ್ಕಿಳಿದ ಮಾಜಿ ಚಾಂಪಿಯನ್ಸ್ ಇಂಗ್ಲೆಂಡ್ ಸೆಮಿಫೈನಲ್ನಲ್ಲಿ ಭಾರತದ ಎದುರು ಸೋತಿತ್ತು. ಇದಾದ ಬಳಿಕ ಕೋಚ್ ಹುದ್ದೆಗೆ ಮ್ಯಾಥ್ಯೂ ಮೋಟ್ ತಮ್ಮ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದರು. ಇದೀಗ ಸೀಮಿತ ಓವರ್‌ಗಳ ಮಾದರಿಗೆ ನೂತನ ಕೋಚ್ ಹುಡುಕಾಟದಲ್ಲಿರುವ ಇಂಗ್ಲೆಂಡ್ ಕ್ರಿಕೆಟ್ ಮಂಡಳಿಗೆ ಇಯಾನ್ ಮಾರ್ಗನ್ ರಾಹುಲ್ ದ್ರಾವಿಡ್ ಅವರನ್ನು ನೇಮಿಸುವಂತೆ ಸಲಹೆ ನೀಡಿದ್ದಾರೆ. ಏಕೆಂದರೆ ಇತ್ತೀಚಿನ ವರ್ಷಗಳಲ್ಲಿ ಇಂಗ್ಲೆಂಡ್ ತಂಡವು ಐಸಿಸಿ ನಡೆಸುವ ಟೂರ್ನಮೆಂಟ್ಗಳಲ್ಲಿ ಪ್ರದರ್ಶನ ಸಾಮಾನ್ಯವಾಗಿದ್ದು, ಈ ಅವಧಿಯಲ್ಲಿ ಆಂಗ್ಲರು ಏಕದಿನ ವಿಶ್ವಕಪ್, ಟಿ20 ವಿಶ್ವಕಪ್ ಗೆಲ್ಲಲು ಸಾಧ್ಯವಾಗಿಲ್ಲ. ಈ ಕಾರಣಕ್ಕಾಗಿ, ಮುಖ್ಯ ಕೋಚ್ ತಲೆದಂಡವಾಗಿತ್ತು. ತೆರವಾದ ಸ್ಥಾನಕ್ಕೆ ಅನೇಕ ಅನುಭವಿಗಳ ಹೆಸರುಗಳು ಕೇಳಿಬರುತ್ತಿವೆ. ಇದೀಗ ಇಂಗ್ಲೆಂಡ್ ತಂಡದ ಮಾಜಿ ನಾಯಕ ಇಯಾನ್ ಮಾರ್ಗನ್, ರಾಹುಲ್ ದ್ರಾವಿಡ್ ಹೆಸರನ್ನು ಸೂಚಿಸುವ ಮೂಲಕ ಚರ್ಚೆಯನ್ನು ಇನ್ನಷ್ಟು ಬಿಸಿಯಾಗಿಸಿದ್ದಾರೆ.
ಮ್ಮ ದೃಷ್ಟಿಯಲ್ಲಿ ಇಂಗ್ಲೆಂಡ್‌ನ ವೈಟ್ ಬಾಲ್ ಮುಖ್ಯ ಕೋಚ್‌ಗೆ ಅಗ್ರ ಸ್ಪರ್ಧಿಗಳು ರಾಹುಲ್ ದ್ರಾವಿಡ್, ರಿಕಿ ಪಾಂಟಿಂಗ್, ಸ್ಟೀಫನ್ ಫ್ಲೆಮಿಂಗ್ ಮತ್ತು ಬ್ರೆಂಡನ್ ಮೆಕಲಮ್ ಆಗಿದ್ದಾರೆ. ಇವರುಗಳಲ್ಲಿ ಮೆಕಲಮ್ ಪ್ರಸ್ತುತ ವಿಶ್ವದ ಅತ್ಯುತ್ತಮ ತರಬೇತುದಾರರಲ್ಲಿ ಒಬ್ಬರು. ನನ್ನ ದೃಷ್ಟಿಯಲ್ಲಿ ನೀವು ರಾಹುಲ್ ದ್ರಾವಿಡ್, ರಿಕಿ ಪಾಂಟಿಂಗ್, ಸ್ಟೀಫನ್ ಫ್ಲೆಮಿಂಗ್ ಮತ್ತು ಬ್ರೆಂಡನ್ ಮೆಕಲಮ್ ಅವರಲ್ಲಿ ಒಬ್ಬರನ್ನು ಈ ಸ್ಥಾನಕ್ಕೆ ಆಯ್ಕೆ ಮಾಡಬೇಕು. ನನ್ನ ಪ್ರಕಾರ, ಈ ಹುದ್ದೆಗೆ ಮೆಕಲಮ್ ಸೂಕ್ತ. ಏಕೆಂದರೆ ಅವರು ವಿಶ್ವದ ಅತ್ಯುತ್ತಮ ಕೋಚ್‌ಗಳಲ್ಲಿ ಒಬ್ಬರು ಎಂದು ನಾನು ನಂಬುತ್ತೇನೆ. ನೀವು ನೆನಪಿಟ್ಟುಕೊಳ್ಳಬೇಕು, ಇದು ಇಂಗ್ಲೆಂಡ್ ಕ್ರಿಕೆಟ್ ತಂಡ, ಇದು ವಿಶ್ವದ ಅತ್ಯಂತ ಸಂಪನ್ಮೂಲ ಕ್ರಿಕೆಟ್ ತಂಡಗಳಲ್ಲಿ ಒಂದಾಗಿದೆ, ಆದ್ದರಿಂದ ಮುಖ್ಯ ತರಬೇತುದಾರನ ಪಾತ್ರವನ್ನು ನಿರ್ವಹಿಸುವವರ ನುರಿತವರಾಗಿರಬೇಕು ಎಂದು ಮಾರ್ಗನ್ ಹೇಳಿದ್ದಾರೆ.