ನವದೆಹಲಿ: ಟೀಮ್ ಇಂಡಿಯಾ ಲೆಜೆಂಡರಿ ಆಟಗಾರ ಗೌತಮ್ ಗಂಭೀರ್ ದಿನದಿಂದ ದಿನಕ್ಕೆ ತಮ್ಮ ಕ್ರೇಜ್ ಹೆಚ್ಚಿಸಿಕೊಳ್ಳುತ್ತಿದ್ದಾರೆ. 17ನೇ ಆವೃತ್ತಿಯ ಐಪಿಎಲ್ನಲ್ಲಿ ಕೆಕೆಆರ್ ಮೆಂಟರ್ ಆಗಿ ಅಧಿಕಾರವಹಿಸಿಕೊಂಡ ಗೌತಮ್ ಸಂಯೋಜನೆ ಬದಲಿಸುವ ಮೂಲಕ ತಂಡ ಕಪ್ ಗೆಲ್ಲುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಇದಾದ ಬಳಿಕ ಅವರು ಟೀಮ್ ಇಂಡಿಯಾದ ಕೋಚ್ ಆಗಿ ಅಧಿಕಾರ ವಹಿಸಿಕೊಂಡಿದ್ದು, ಆಟಗಾರರಲ್ಲಿರುವ ಪ್ರತಿಭೆಯನ್ನು ಹೊರತಂದು ಅವರಿಗೆ ಬೇಕಾದ ಬೆಂಬಲ ನೀಡುವ ಮೂಲಕ ಗಂಭೀರ್ ಎಲ್ಲರಿಗೂ ಸಮಾನ ಅವಕಾಶ ನೀಡುತ್ತಿದ್ದಾರೆ.
ಇತ್ತ ಗೌತಮ್ ಗಂಭೀರ್ ಕೋಚ್ ಆಗಿ ಅಧಿಕಾರ ವಹಿಸಿಕೊಂಡ ಬಳಿಕ ಟೀಮ್ ಇಂಡಿಯಾ ಶ್ರೀಲಂಕಾ ವಿರುದ್ಧದ ಟಿ20 ಸರಣಿಯಲ್ಲಿ ಗೆದ್ದು ಬೀಗಿದ್ದು, ತಮ್ಮ ಕೋಚ್ ವೃತ್ತಿಜೀವನ ಗೆಲುವಿನೊಂದಿಗೆ ಆರಂಭಿಸಿದ್ದಾರೆ. ಗಂಭೀರ್ ಎದುರು ಬೆಟ್ಟದಷ್ಟು ಸವಾಲುಗಳು ಇರುವ ನಡುವೆಯೇ 2007ರ ವಿಶ್ವಕಪ್ ವಿಜೇತ ತಂಡದ ಆಟಗಾರ, ಐಎಎಸ್ ಅಧಿಕಾರಿ ಜೋಗಿಂದರ್ ಶರ್ಮ ಗೌತಮ್ ಹೆಚ್ಚು ದಿನ ಕೋಚ್ ಆಗಿ ಹೆಚ್ಚು ಉಳಿಯುವುದಿಲ್ಲ ಎಂದು ಹೇಳುವ ಮೂಲಕ ಹೊಸ ಚರ್ಚೆಯನ್ನು ಹುಟ್ಟುಹಾಕಿದ್ದಾರೆ.
ಇದನ್ನೂ ಓದಿ: ಬಸ್, ಕಾರಿನ ನಡುವೆ ಭೀಕರ ಅಪಘಾತ; 7 ಮಂದಿ ಸಾವು, 40ಕ್ಕೂ ಅಧಿಕ ಮಂದಿ ಗಂಭೀರ
ಖಾಸಗಿ ಸುದ್ದಿ ವಾಹಿನಿಯ ಪಾಡ್ಕಾಸ್ಟ್ನಲ್ಲಿ ಈ ಕುರಿತು ಮಾತನಾಡಿರುವ ಜೋಗಿಂದರ್, ಟೀಮ್ ಇಂಡಿಯಾದ ಕೋಚ್ ಆಗಿ ಗೌತಮ್ ಗಂಭೀರ್ ಹೆಚ್ಚು ದಿನ ಉಳಿಯಲ್ಲ. ನನ್ನ ಬಳಿ ಅದಕ್ಕೆ ಸಂಬಂಧಿಸಿದಂತೆ ಮೂರು ಕಾರಣಗಳಿವೆ.ಗೌತಮ್ ಗಂಭೀರ್ ಯಾರ ಬಳಿಯೂ ಹೋಗುವುದಿಲ್ಲ. ಅವರಿಗೆ ಇತರೊಂದಿಗೆ ಬೆರತು ಹೋಗುವ ಅಭ್ಯಾಸವಿಲ್ಲ. ಹೀಗಾಗಿ ಇದು ಕೂಡ ಸಮಸ್ಯೆಯನ್ನು ಸೃಷ್ಟಿಸಲಿದೆ. ಗೌತಮ್ ಗಂಭೀರ್ ಅವರ ಕೆಲವು ನಿರ್ಧಾರಗಳು ಬಹುತೇಕರಿಗೆ ಇಷ್ಟವಾಗುವುದಿಲ್ಲ. ಏಕೆಂದರೆ ಅವರದ್ದು ನೇರ ನುಡಿ ಹೊಂದಿರುವ ವ್ಯಕ್ತಿತ್ವ. ನೇರವಾಗಿ ಮಾತನಾಡುವುದರಿಂದ ಸಮಸ್ಯೆಯಾಗಲಿದೆ. ಗೌತಮ್ ಗಂಭೀರ್ ತನ್ನ ಕೆಲಸವನ್ನು ನಂಬುತ್ತಾರೆ. ಆದರೆ ಅವರು ಅದರ ಕ್ರೆಡಿಟ್ ಪಡೆಯುವಂತಹ ವ್ಯಕ್ತಿಯಲ್ಲ. ಹೀಗಾಗಿ ಟೀಮ್ ಇಂಡಿಯಾ ಕೋಚ್ ಆಗಿ ಅವರು ಜಾಸ್ತಿ ದಿನ ಉಳಿಯುವುದಿಲ್ಲ ಎಂದು ಜೋಗಿಂದರ್ ಶರ್ಮಾ ಹೇಳಿದ್ದಾರೆ.
007ರ ಟಿ20 ವಿಶ್ವಕಪ್ ಹೀರೋ ಜೋಗಿಂದರ್ ಶರ್ಮಾ. ಅಂದು ಗಂಭೀರ್ ಅವರ ಸಹ ಆಟಗಾರನಾಗಿ ಜೋಗಿಂದರ್ ಇದೀಗ ಅಚ್ಚರಿಕೆಯ ಹೇಳಿಕೆಯೊಂದಿಗೆ ಗಮನ ಸೆಳೆದಿದ್ದಾರೆ. ಇತ್ತ ಜೋಗಿಂದರ್ ಶರ್ಮಾ ಹೇಳಿಕೆ ಕ್ರೀಡಾ ವಲಯದಲ್ಲಿ ಹೊಸ ಚರ್ಚೆಯನ್ನು ಹುಟ್ಟು ಹಾಕಿದ್ದು, ಹಲವರು ಮಾಜಿ ಆಟಗಾರನ ಹೇಳಿಕೆಗೆ ಪರ-ವಿರೋಧದ ಕಮೆಂಟ್ ಹಾಕಿದ್ದಾರೆ.