ಹಣ ಕೊಡುವುದನ್ನು ಯೂಟ್ಯೂಬ್​ ನಿಲ್ಲಿಸಿತೇ? ಭಾರಿ ಚರ್ಚೆ ಹುಟ್ಟುಹಾಕಿದ ಯೂಟ್ಯೂಬರ್ ಹೇಳಿಕೆ!​ YouTube

YouTube
Published on

YouTube : ಯೂಟ್ಯೂಬ್​ ವಿಡಿಯೋ ಮಾಡಿ ತಿಂಗಳಿಗೆ ಲಕ್ಷಗಟ್ಟಲೆ ಹಣ ಸಂಪಾದಿಸಿದವರು ನಮ್ಮ ದೇಶದಲ್ಲಿ ಅನೇಕರಿದ್ದಾರೆ. ಹೆಚ್ಚಿನ ಜನರು ಯೂಟ್ಯೂಬ್​ ಚಾನಲ್‌ನಿಂದ ದೊಡ್ಡ ಮೊತ್ತವನ್ನು ಗಳಿಸಬಹುದು ಎಂದು ನಂಬಿದ್ದಾರೆ. ಆದರೆ, ನಳಿನಿ ಉಂಗಾರ್ ಎಂಬ ಯೂಟ್ಯೂಬರ್‌ ಹೇಳಿರುವ ಕೆಲ ಮಾತುಗಳು ಯೂಟ್ಯೂಬ್​ ಆದಾಯದ ಬಗ್ಗೆ ಸಂಶಯ ಮೂಡಿಸುತ್ತದೆ. ಯೂಟ್ಯೂಬ್​ ಹಣ ಕೊಡುವುದನ್ನು ನಿಲ್ಲಿಸಿದೆಯೇ ಎಂಬ ಅನುಮಾನ ಮೂಡುವಂತಿದೆ.

ನಳಿನಿ ಉಂಗಾರ್ ಅವರು ಕಳೆದ ಮೂರು ವರ್ಷಗಳಿಂದ ಯೂಟ್ಯೂಬ್‌ನಲ್ಲಿ ಅಡುಗೆ ವಿಡಿಯೋಗಳನ್ನು ಅಪ್‌ಲೋಡ್ ಮಾಡುತ್ತಿದ್ದಾರೆ. ಇದಕ್ಕಾಗಿ ಈವರೆಗೂ ಸುಮಾರು ಎಂಟು ಲಕ್ಷಕ್ಕೂ ಹೆಚ್ಚು ಖರ್ಚು ಮಾಡಿದ್ದಾರೆ. ಆದರೆ, ಯೂಟ್ಯೂಬ್​ನಿಂದ ಈವರೆಗೂ ಏನನ್ನೂ ಗಳಿಸಲು ಸಾಧ್ಯವಾಗಿಲ್ಲ ಎಂದು ತಮ್ಮ ಎಕ್ಸ್ ಖಾತೆಯ ಮೂಲಕ ನೋವು ಹಂಚಿಕೊಂಡಿದ್ದಾರೆ. ಅಲ್ಲದೆ, ತನ್ನ ಸ್ಟುಡಿಯೋ ಉಪಕರಣಗಳು ಮತ್ತು ಅಡುಗೆ ಸಾಮಗ್ರಿಗಳನ್ನು ಮಾರಾಟ ಮಾಡುತ್ತಿರುವುದಾಗಿ ಮತ್ತು ಆ ವಸ್ತುಗಳನ್ನು ಖರೀದಿಸಲು ಆಸಕ್ತಿ ಹೊಂದಿರುವ ಅವರನ್ನು ಸಂಪರ್ಕಿಸುವಂತೆ ತಿಳಿಸಿದ್ದಾರೆ.

ಅಡುಗೆಮನೆ ಸೆಟಪ್​ ಮಾಡಲು, ಸ್ಟುಡಿಯೋ ಉಪಕರಣಗಳನ್ನು ಖರೀದಿಸಲು ಹಾಗೂ ಯೂಟ್ಯೂಬ್ ಚಾನೆಲ್ ನಡೆಸಲು ನಾನು ಸುಮಾರು ಎಂಟು ಲಕ್ಷ ಖರ್ಚು ಮಾಡಿದ್ದೇನೆ. ಆದರೆ, ಈವರೆಗೂ ಒಂದೇ ಒಂದು ರೂಪಾಯಿ ಪಡೆದಿಲ್ಲ ಎಂದು ಹೇಳಿದ್ದಾರೆ.

ನಳಿನಿ ಅವರ ಪೋಸ್ಟ್ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗುತ್ತಿದ್ದಂತೆ ಭಾರಿ ಚರ್ಚೆಯನ್ನು ಹುಟ್ಟುಹಾಕಿದೆ. ಇಷ್ಟಕ್ಕೆ ಧೃತಿಗೆಡಬೇಡಿ ಯೂಟ್ಯೂಬ್​ನಲ್ಲಿ ಮುಂದುವರಿಯಿರಿ ಶ್ರಮಕ್ಕೆ ಪ್ರತಿಫಲ ಸಿಕ್ಕೇ ಸಿಗುತ್ತದೆ ಎಂದು ಅವರ ಕೆಲ ಫಾಲೋವರ್ಸ್ ಕಾಮೆಂಟ್ ಮಾಡಿದ್ದಾರೆ. ಇದಕ್ಕೆ ಪ್ರತಿಕ್ರಿಯೆ ನೀಡಿರುವ ನಳಿನಿ ಯೂಟ್ಯೂಬ್​ ವಿಡಿಯೋ ನಿಲ್ಲಿಸಲು ಕಾರಣವನ್ನು ತಿಳಿಸಿದ್ದಾರೆ. ನಾನು 250ಕ್ಕೂ ಹೆಚ್ಚು ವಿಡಿಯೋ ಮಾಡಿದ್ದೇನೆ. ಮೂರು ವರ್ಷಗಳ ಕಾಲ ನನ್ನನ್ನು ನಾನು YouTube ಗೆ ನನ್ನನ್ನು ಅರ್ಪಿಸಿಕೊಂಡಿದ್ದೇನೆ. ಆದರೂ ನನಗೆ ಯಾವುದೇ ಆದಾಯ ಬಂದಿಲ್ಲ. ಹಾಗಾಗಿ ನಾನು ವಿಡಿಯೋ ಮಾಡುವುದನ್ನು ನಿಲ್ಲಿಸಲು ನಿರ್ಧರಿಸಿದೆ ಮತ್ತು ಈ ವೇದಿಕೆಯಿಂದ ನನ್ನ ಎಲ್ಲ ವಿಡಿಯೋಗಳನ್ನು ಡಿಲೀಟ್​ ಮಾಡಲು ನಿರ್ಧರಿಸಿದ್ದೇನೆ ಎಂದು ತಿಳಿಸಿದ್ದಾರೆ.

ಅಂದಹಾಗೆ ನಳಿನಿ ಸುದ್ದಿಯಾಗುತ್ತಿರುವುದು ಇದೇ ಮೊದಲಲ್ಲ. ಈ ಹಿಂದೆ ಸಸ್ಯಾಹಾರದ ವಿಚಾರವಾಗಿ ನಟಿ ಸ್ವರಾ ಭಾಸ್ಕರ್ ಜೊತೆ ನಳಿನಿ ಸಾಮಾಜಿಕ ಜಾಲತಾಣದಲ್ಲಿ ವಾಗ್ವಾದ ನಡೆಸಿದ್ದರು. ಅದು ಆ ಸಮಯದಲ್ಲಿ ದೊಡ್ಡ ಸುದ್ದಿಯಾಗಿತ್ತು. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net