ನವದೆಹಲಿ: ಸೆಪ್ಟೆಂಬರ್ 19ರಿಂದ ಬಾಂಗ್ಲಾದೇಶ ವಿರುದ್ಧ ಆರಂಭವಾಗಲಿರುವ ಎರಡು ಪಂದ್ಯಗಳ ಟೆಸ್ಟ್ ಸರಣಿಗೆ ಈಗಾಗಲೇ ಉಭಯ ತಂಡಗಳು ಭರ್ಜರಿ ಸಿದ್ಧತೆ ನಡೆಸುತ್ತಿದ್ದು, ತಮ್ಮ ಗೆಲುವಿನ ಓಟವನ್ನು ಮುಂದುವರೆಸಲು ಬಾಂಗ್ಲಾ ಸಜ್ಜಾಗಿದ್ದರೆ ಭಾರತಕ್ಕೆ ಆಸ್ಟ್ರೇಲಿಯಾ ವಿರುದ್ಧದ ಬಾರ್ಡರ್-ಗವಾಸ್ಕರ್ ಟ್ರೋಫಿಗೆ ಇದು ಅಭ್ಯಾಸ ಪಂದ್ಯದಂತಾಗಿದೆ. ಆತಿಥೇಯರ ನೆಲದಲ್ಲಿ ಟೆಸ್ಟ್ ಸರಣಿ ಗೆಲ್ಲುವ ಮೂಲಕ ಭಾರೀ ಹುಮ್ಮಸ್ಸಿನಲ್ಲಿರುವ ಬಾಂಗ್ಲಾ ತಂಡವು ಭಾರತದ ವಿರುದ್ಧವೂ ತನ್ನ ಗೆಲುವಿನ ಓಟವನ್ನು ವಿಸ್ತರಿಸಲು ಮುಂದಾಗಿದೆ. ಆದರೆ, ಈ ಒಂದು ವಿಚಾರ ಪ್ರವಾಸಿ ತಂಡವನ್ನು ಇನ್ನಿಲ್ಲದಂತೆ ಕಾಡುತ್ತಿದ್ದು, ಭಾರತದ ಎದುರು ಇದನ್ನು ನಿಭಾಯಿಸುವುದು ಹೇಗೆ ಎಂಬುದರ ಬಗ್ಗೆ ತೆಲೆಕೆಡಿಸಿಕೊಂಡು ಕೂತಿದೆ.
ಸಾಮಾನ್ಯವಾಗಿ ನಾವು ನೋಡಿದಂತೆ ಯಾವುದಾದರೂ ಒಂದು ಅಂತಾರಾಷ್ಟ್ರೀಯ ಸರಣಿ ಆರಂಭವಾಗುವ ಮುನ್ನ ಉಭಯ ತಂಡಗಳ ಮಾಜಿ ಹಾಗೂ ಹಾಲಿ ಆಟಗಾರರು ಹೇಳಿಕೆಗಳನ್ನು ಕೊಡುತ್ತಾರೆ. ಕೆಲವೊಮ್ಮೆ ಇದು ಅತರೇಕದ ಹೇಳಿಕೆ ಕೂಡ ಆಗಿರುತ್ತದೆ. ಆದರೆ, ಬಾಂಗ್ಲಾ ಬ್ಯಾಟರ್ ಲಿಟನ್ ದಾಸ್ಗೆ ವಿರಾಟ್ ಕೊಹ್ಲಿ, ರೋಹಿತ್ ಶರ್ಮ ಕಂಡರೆ ಭಯವಿಲ್ಲವಂತೆ. ಈ ಒಂದು ವಿಚಾರಕ್ಕೆ ಅವರ ತಂಡವು ಹೆದರುತ್ತಿದೆಯಂತೆ.
ಇದನ್ನೂ ಓದಿ: ನನಗೆ ಹೇಳದೆ… ಪಿಟಿ ಉಷಾ ವಿರುದ್ಧ ಗಂಭೀರ ಆರೋಪ ಮಾಡಿದ ವಿನೇಶ್
ಖಾಸಗಿ ಸುದ್ದಿ ವಾಹಿನಿಗೆ ನೀಡಿದ ಸಂದರ್ಶನದಲ್ಲಿ ಈ ಬಗ್ಗೆ ಮಾತನಾಡಿರುವ ಲಿಟನ್, ನಾವು ಸಾಮಾನ್ಯವಾಗಿ ಕೂಕಬುರಾ ಚೆಂಡಿನಲ್ಲಿ ಆಡಿ ಅಭ್ಯಾಸವಾಗಿದೆ. ಆದರೆ, ಭಾರತ ತಂಡವು ಎಸ್ಜಿ ಬಾಲ್ನಲ್ಲಿ ಆಡುವ ಕಾರಣ ನಮಗೆ ಅದು ಸ್ವಲ್ಪ ಕಷ್ಟವಾಗಿದೆ. ಏಕೆಂದರೆ ಕೂಕಬುರಾ ಬಾಲ್ ಹಳೆಯದಾದಂತೆಲ್ಲಾ ಆಡಲು ಸುಲಭವಾಗುತ್ತದೆ. ಆದರೆ, ಎಸ್ಜಿ ಬಾಲ್ನಲ್ಲಿ ಆ ರೀತಿಯಾಗುವುದಿಲ್ಲ. ನಾವು ಕೂಡ ಎಸ್ಜಿ ಬಾಲ್ನಲ್ಲಿ ಅಭ್ಯಾಸ್ ನಡೆಸುತ್ತಿದ್ದು, ಬೇಗನೆ ಹೊಂದಿಕೊಳ್ಳುತ್ತೇವೆ ಎಂಬ ವಿಶ್ವಾಸ ನಮ್ಮಲಿದೆ.
ನಾವು ಪಾಕಿಸ್ತಾನದ ವಿರುದ್ಧ ಉತ್ತಮವಾಗಿ ಆಡಿದ ಪರಿಣಾಮ ಸರಣಿ ಗೆದ್ದುಕೊಂಡೆವು. ಈಗ ಅದು ಹಳೆಯ ವಿಚಾರವಾಗಿದ್ದು, ನಾವು ಮುಂದಿನದ್ದನ್ನು ಎದುರು ನೋಡುತ್ತಿದ್ಧೇವೆ. ಒಬ್ಬ ಆಟಗಾರನಾಗಿ ನಾವು ಪಾಕಿಸ್ತಾನ ವಿರುದ್ಧದ ಸರಣಿ ಬಗ್ಗೆ ಮಾತನಾಡದಿದ್ದರೆ ಅದು ಉತ್ತಮವಾಗುತ್ತದೆ. ಅದಕ್ಕೆ ನಿಮ್ಮ ಸಹಾಯ ಕೂಡ ಬೇಕಾಗುತ್ತದೆ ಎಂದು ಬಾಂಗ್ಲಾದೇಶದ ಬ್ಯಾಟರ್ ಲಿಟನ್ ದಾಸ್ ಹೇಳಿದ್ದಾರೆ.