

ಕಲಬುರಗಿ: ಎಲೆಕ್ಟ್ರಿಕ್ ಬೈಕ್ ಸರಿಯಾಗಿ ರಿಪೇರಿ ಮಾಡಿಲ್ಲ ಎಂಬ ಕಾರಣಕ್ಕೆ ವ್ಯಕ್ತಿಯೋರ್ವ ಶೋರೂಮ್ಗೆ ಬೆಂಕಿ ಹಚ್ಚಿರುವ ಘಟನೆ ಕಲಬುರಗಿ ಜಿಲ್ಲೆಯಲ್ಲಿ ನಡೆದಿದೆ. ಘಟನೆ ಸಂಬಂಧ ಪೊಲೀಸರು ಆರೋಪಿ ಮೊಹಮ್ಮದ್ ನದೀಮ್ನನ್ನು ವಶಕ್ಕೆ ಪಡೆದಿದ್ದಾರೆ.
ಆರಂಭದಲ್ಲಿ ಇದು ಶಾರ್ಟ್ ಸರ್ಕ್ಯೂಟ್ ಎಂದು ಹೇಳಲಾಗಿತ್ತು. ಆದರೆ, ಪೊಲೀಸರು ಆಳವಾಗಿ ತನಿಖೆ ನಡೆಸಿದಾಗ ಇದು ಶಾರ್ಟ್ ಸರ್ಕ್ಯೂಟ್ನಿಂದಲ್ಲ ಸಂಭವಿಸಿದ ಅವಘಡವಲ್ಲ ಎಂದು ವರದಿಯಾಗಿತ್ತು. ಸಿಸಿಟಿನವಿ ದೃಶ್ಯಾವಳಿಗಳನ್ನು ಪರಿಶೀಲಿಸಿದಾಗ ಆರೋಪಿಯ ಕೃತ್ಯ ಬಯಲಾಗಿದ್ದು, ಕೂಡಲೇ ಪೊಲೀಸರು ಆತನನ್ನು ವಶಕ್ಕೆ ಪಡೆದಿದ್ದಾರೆ.
ಆರೋಪಿ ಮೊಹಮ್ಮದ್ ನದೀಮ್ 20 ದಿನಗಳ ಹಿಂದಷ್ಟೇ ಹೊಸ ಓಲಾ ಎಲೆಕ್ಟ್ರಿಕ್ ಸ್ಕೂಟರ್ಅನ್ನು ಖರೀದಿಸಿದ್ದನು. ತೆಗೆದುಕೊಂಡ ಕೆಲ ದಿನಗಳಲ್ಲೇ ಪದೇ ಪದೇ ರಿಪೇರಿಗೆ ಬಂದ ಕಾರಣ ಆರೋಪಿ ಬೇರೊಂದು ಗಾಡಿ ಕೊಡುವಂತೆ ಕಂಪನಿಯವರಿಗೆ ಆಗ್ರಹಿಸಿದ್ದ. ಈ ವಿಚಾರವಾಗಿ ಶೋರೂಮ್ ಅವರೊಂದಿಗೆ ಕಗಳವಾಡಿದ್ದ. ಆ ಬಳಿಕ ಪೆಟ್ರೋಲ್ ತಂದು ಶೋ ರೂಂ ಒಳಗೆ ಬೆಂಕಿ ಹಚ್ಚಿದ್ದಾನೆ.
ಘಟನೆಯಲ್ಲಿ 6 ಹೊಸ ಎಲೆಕ್ಟ್ರಿಕ್ ಬೈಕ್ಗಳು ಸುಟ್ಟು ಭಸ್ಮವಾಗಿವೆ. ಲಕ್ಷಾಂತರ ರೂಪಾಯಿ ಮೌಲ್ಯದ ವಸ್ತುಗಳು ಸುಟ್ಟು ಕರಕಲಾಗಿವೆ. ಘಟನೆ ಸಂಬಂಧ ಕಲಬುರಗಿಯ ಚೌಕ್ ಠಾಣೆಯ ಪೊಲೀಸರು ಆರೋಪಿಯನ್ನು ವಶಕ್ಕೆ ಪಡೆದಿದ್ದು, ತನಿಖೆ ನಡೆಸುತ್ತಿದ್ದಾರೆ.