ಹರಿಯಾಣ: ಪ್ಯಾರಿಸ್ ಆತಿಥ್ಯದಲ್ಲಿ ನಡೆದ ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಭಾರತ ಈ ಬಾರಿ ನಿರೀಕ್ಷಿತ ಪ್ರದರ್ಶನ ನೀಡಿಲ್ಲವಾದರೂ ಹೆಚ್ಚು ಸದ್ದು ಮಾಡಿದ್ದು, ವಿನೇಶ್ ಪೋಗಟ್ ಅವರ ಚಿನ್ನದ ಪದಕದ ವಿಚಾರವಾಗಿ. ತೂಕ ಹೆಚ್ಚಳ ಕಾರಣದಿಂದಾಗಿ ಕೂದಲೆಳೆ ಅಂತರದಲ್ಲಿ ಪದಕ ವಂಚಿತರಾಗಿದ್ದ ವಿನೇಶ್ಗೆ ಬೆಂಬಲದ ಮಹಾಪೂರವೇ ಹರಿದು ಬಂದಿತ್ತು ಎಂದರೆ ತಪ್ಪಾಗಲಾರದು. ಪದಕ ಕೈತಪ್ಪಿದರಿಂದ ಅನಾರೋಗ್ಯಕ್ಕೀಡಾಗಿ ಆಸ್ಪತ್ರೆಗೆ ದಾಖಲಾಗಿದ್ದ ವಿನೇಶ್ರನ್ನು ಮಾಜಿ ಕ್ರೀಡಾ ತಾರೆ ಪಿಟಿ ಉಷಾ ಭೇಟಿಯಾಗಿ ಸಂತೈಸಿದ್ದರು. ಆದರೆ, ಇದು ಬರೀ ನಾಟಕ ಎಂದು ವಿನೇಶ್ ಪೋಗಟ್ ಆರೋಪಿಸಿದ್ದಾರೆ.
ಕುಸ್ತಿಗೆ ವಿದಾಯ ಘೋಷಿಸಿ ಇತ್ತೀಚಿಗೆ ಕಾಂಗ್ರೆಸ್ ಸೇರ್ಪಡೆಯಾದ ವಿನೇಶ್ಗೆ ಹರಿಯಾಣ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸಲು ಟಿಕೆಟ್ ನೀಡಲಾಗಿದ್ದು, ಈಗಾಗಲೇ ಪ್ರಚಾರ ಕಾರ್ಯವನ್ನು ಆರಂಭಿಸಿದ್ದಾರೆ. ಆದರೆ, ಇದೀಗ ವಿನೇಶ್ ಪಿಟಿ ಉಷಾ ವಿರುದ್ಧ ಆರೋಪ ಮಾಡಲಾಗಿದ್ದು, ಈ ವಿಚಾರ ಹೊಸ ಚರ್ಚೆಗೆ ನಾಂದಿ ಹಾಡಿದೆ.
ಇದನ್ನೂ ಓದಿ: ರಾಷ್ಟ್ರೀಯ ತಂಡಕ್ಕೆ ಆಯ್ಕೆಯಾದರೂ ದುಲೀಪ್ ಟ್ರೋಫಿಯಲ್ಲಿ ಆಡಲಿದ್ದಾರೆ ಸರ್ಫರಾಜ್; ಹೀಗಿದೆ ಕಾರಣ
ಖಾಸಗಿ ಸುದ್ದಿ ವಾಹಿನಿಗೆ ನೀಡಿರುವ ಸಂದರ್ಶನದಲ್ಲಿ ಈ ಕುರಿತು ಮಾತನಾಡಿರುವ ವಿನೇಶ್, ನಾನು ದಾಖಲಾಗಿದ್ದ ಆಸ್ಪತ್ರೆಗೆ ಭೇಟಿ ನೀಡಿದ ಉಷಾ ಅವರು ನನ್ನ ಅನುಮತಿ ಇಲ್ಲದೆಯೇ ಫೋಟೋ ತೆಗೆಸಿಕೊಂಡರು. ನನ್ನ ಜೊತೆ ಏನನ್ನು ಮಾತನಾಡಲಿಲ್ಲ. ರಾಜಕೀಯದಲ್ಲಿ ಮುಚ್ಚಿದ ಬಾಗಿಲುಗಳ ಹಿಂದೆ ಬಹಳಷ್ಟು ನಡೆಯುತ್ತದೆ ಎಂದು ಹೇಗೆ ಹೇಳುತ್ತಾರೋ ಅದೇ ರೀತಿ ಇಲ್ಲೂ ಕೂಡ ನಡೆಯಿತು. ಅನೇಕರು ಕುಸ್ತಿಯನ್ನು ಬಿಡಬೇಡಿ ಎಂದು ಹೇಳುತ್ತಿದ್ದಾರೆ. ಆದರೆ, ನಾನು ರಾಜಕೀಯದಲ್ಲಿ ಮುಂದುವರೆಯಲಿ ನಿರ್ಧರಿಸಿದ್ಧೇನೆ ಎಂದು ವಿನೇಶ್ ಹೇಳಿದ್ದಾರೆ.
ನೀವು ಆಸ್ಪತ್ರೆಯ ಬೆಡ್ನಲ್ಲಿದ್ದೀರಿ ಮತ್ತು ಏನು ನಡೆಯುತ್ತಿದೆ ಎಂಬುದು ತಿಳಿದಿಲ್ಲ. ನಿಮ್ಮ ಜೀವನದ ಅತ್ಯಂತ ಕೆಟ್ಟ ಹಂತಗಳಲ್ಲಿ ಒಂದನ್ನು ನೀವು ಎದುರಿಸುತ್ತಿರುವಿರಿ. ಆ ಸ್ಥಳದಲ್ಲಿ, ನೀವು ನನ್ನೊಂದಿಗೆ ನಿಂತಿರುವ ಎಲ್ಲರಿಗೂ ತೋರಿಸಲು ನನಗೆ ಹೇಳದೆ ಫೋಟೋ ಕ್ಲಿಕ್ ಮಾಡಿ ನಂತರ ಅದನ್ನು ಸಾಮಾಜಿಕ ಮಾಧ್ಯಮದಲ್ಲಿ ಹಾಕಿ ನೀವು ನನ್ನೊಂದಿಗೆ ನಿಂತಿದ್ದೀರಿ ಎಂದು ಹೇಳಲು ಸಾಧ್ಯವಿಲ್ಲ ಎಂದು ಪಿಟಿ ಉಷಾ ವಿರುದ್ಧ ವಿನೇಶ್ ವಾಗ್ದಾಳಿ ನಡೆಸಿದ್ದಾರೆ.