ನನ್ನ ಪ್ರಕಾರ ಮೂವರು ದರ್ಶನ್​ ಇದ್ದಾರೆ, ತಪ್ಪು ಎನ್ನುವ ಕಾರಣಕ್ಕೆ ವ್ಯಕ್ತಿಯೇ ಗೊತ್ತಿಲ್ಲ ಅನ್ನೋದಕ್ಕೆ ಆಗಲ್ಲ: ನಟ ರಮೇಶ್​ ಅರವಿಂದ್​

Darshan Ramesh
Published on

ಬೆಂಗಳೂರು: ರೇಣುಕಸ್ವಾಮಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಈಗಾಗಲೇ ನ್ಯಾಯಾಲಯಕ್ಕೆ ಚಾರ್ಜ್​ಶೀಟ್​ ಸಲ್ಲಿಸಿದ್ದು, ದೋಷಾರೋಪ ಪಟ್ಟಿಯ ಒಂದೊಂದು ಪುಟ ತೆರೆದಂತೆ ಡಿ ಗ್ಯಾಂಗ್​ನ ಕರಾಳ ಕೃತ್ಯ ಬಯಲಾಗುತ್ತಿದ್ದು, ನಿಜ ಜೀವನದಲ್ಲಿ ಮಾದರಿಯಾಗಬೇಕಿದ್ದ ಸ್ಟಾರ್​ನಟನೊಬ್ಬನ ಹೇಯ ಕೃತ್ಯ ಪರ-ವಿರೋಧದ ಚರ್ಚೆಗೆ ಆಸ್ಪದ ಮಾಡಿಕೊಟ್ಟಿದೆ. ಇತ್ತ ಪ್ರಕರಣದ ಕುರಿತು ಇದೇ ಮೊದಲ ಬಾರಿಗೆ ಮಾತನಾಡಿರುವ ಹಿರಿಯ ನಟ ರಮೇಶ್​ ಅರವಿಂದ್​ ಇದು ತುಂಬಾನೇ ಇಕ್ಕಟ್ಟಿನ ಸ್ಥಿತಿ ಎಂದು ಹೇಳಿದ್ದಾರೆ.

ನಗರದಲ್ಲಿ ಈ ಕುರಿತು ಮಾತನಾಡಿದ ಅವರು, ಇಸ್ರೇಲ್ ಪ್ರಧಾನಿಯ ಮಾತನ್ನು ಹೇಳುತ್ತೇನೆ. ಗೊತ್ತಿರೋ ವ್ಯಕ್ತಿ ತಪ್ಪು ಮಾಡಿದಾಗ ತಪ್ಪು ತಪ್ಪಾಗಿರುತ್ತದೆ, ಗೊತ್ತಿರೋ ವ್ಯಕ್ತಿ ಗೊತ್ತಿರುವ ವ್ಯಕ್ತಿಯಾಗಿರುತ್ತಾನೆ. ಗೊತ್ತಿರೋ ವ್ಯಕ್ತಿ ಎನ್ನುವ ಕಾರಣಕ್ಕೆ ನಡೆದಿರೋದು ತಪ್ಪಲ್ಲ ಎಂದು ಹೇಳೋಕೆ ಆಗಲ್ಲ, ಅದು ತಪ್ಪು ಎನ್ನುವ ಕಾರಣಕ್ಕೆ ವ್ಯಕ್ತಿಯೇ ಗೊತ್ತಿಲ್ಲ ಅನ್ನೋದಕ್ಕೆ ಆಗಲ್ಲ. ಇದು ತುಂಬಾನೇ ಇಕ್ಕಟ್ಟಿನ ಸ್ಥಿತಿ ಎಂದು ಹೇಳಿದ್ದಾರೆ.

ನಾನು ಸಾಮಾನ್ಯವಾಗಿ ಇಂಥಹಾ ವಿಷಯಗಳ ಬಗ್ಗೆ ಮಾತನಾಡುವುದಿಲ್ಲ. ನನ್ನ ಪ್ರಕಾರ ಮೂವರು ದರ್ಶನ್​ಗಳಿದ್ದಾರೆ. ಒಬ್ಬರು ನಿನ್ನೆಯ ದರ್ಶನ್, ಅವರು ನಮಗೆಲ್ಲ ಚೆನ್ನಾಗಿ ಪರಿಚಯ, ತಮ್ಮ ಸಿನಿಮಾಗಳಿಂದ ನಮ್ಮನ್ನು ಬಹುವಾಗಿ ರಂಜಿಸಿರುವ ದರ್ಶನ್, ವೀಕೆಂಡ್​ ವಿತ್ ರಮೇಶ್​ನಲ್ಲಿ ನಮ್ಮ ಮುಂದೆ ಸಾಧಕರ ಕುರ್ಚಿಯಲ್ಲಿ ಕೂತಿದ್ದ ದರ್ಶನ್. ಆ ದರ್ಶನ್ ನಮಗೆ ಬಹಳ ಆಪ್ತ ಎಂದು ಹೇಳಿದ್ದಾರೆ.

darshan

ನಿನ್ನೆಯ ದರ್ಶನ್ ಬಳಿಕ ಇಂದಿನ ದರ್ಶನ್ ಒಬ್ಬರಿದ್ದಾರೆ. ಆ ದರ್ಶನ್ ಅನ್ನು ನಾವು ಈಗ ನೋಡುತ್ತಿದ್ದೇವೆ. ಅವರು ಜೈಲಿನಲ್ಲಿದ್ದಾರೆ. ಏನೋ ತಪ್ಪು ಆಗಿಬಿಟ್ಟಿದೆ ಅದಕ್ಕಾಗಿ ಪರಿತಪಿಸುತ್ತಿದ್ದಾರೆ. ಈ ಘಟನೆಯಿಂದ ನಮಗೆಲ್ಲರಿಗೂ ಬೇಜಾರಾಗಿದೆ. ದೊಡ್ಡ ತಪ್ಪು ಆಗಿದೆ. ಆ ತಪ್ಪನ್ನು ಯಾರು ಮಾಡಿದ್ದಾರೋ ಆ ವ್ಯಕ್ತಿಗೆ ಶಿಕ್ಷೆ ಆಗಲೇ ಬೇಕು. ಕಾನೂನು ಆ ಕಾರ್ಯವನ್ನು ಮಾಡಿಯೇ ಮಾಡುತ್ತೆ. ಆದರೆ ಈ ಎರಡೂ ದರ್ಶನ್​ಗಿಂತಲೂ ಮುಖ್ಯವಾಗಿ ಇನ್ನೊಬ್ಬ ದರ್ಶನ್ ಇದ್ದಾರೆ ಅದು ನಾಳೆಯ ದರ್ಶನ್.

ಈ ಸಮಸ್ಯೆಯಿಂದ ಹೊರಬಂದಾಗ ಅಥವಾ ಶಿಕ್ಷೆಯನ್ನು ಅನುಭವಿಸಿ ಹೊರ ಬಂದಾಗ ಅವರು ಏನು ಮಾಡುತ್ತಾರೆ, ಹೇಗೆ ಇರುತ್ತಾರೆ ಎಂಬುದು ಬಹಳ ಮುಖ್ಯ. ಯೂ ಟರ್ನ್ ಇಲ್ಲ ಎಂಬ ಫಲಕ ಕಾಣಿಸಿಕೊಳ್ಳುವುದು ರಸ್ತೆಯಲ್ಲಿ ಮಾತ್ರ. ಆದರೆ ಜೀವನದಲ್ಲಿ ಹಾಗಲ್ಲ. ಜೀವನದಲ್ಲಿ ಒತಿಗಾಗಿ ಯಾವಾಗ ಬೇಕಾದರೂ ಯೂ ಟರ್ನ್ ತೆಗೆದುಕೊಳ್ಳಬಹುದು. ಈಗ ಆಗಿರುವ ತಪ್ಪಿಗೆ ಶಿಕ್ಷೆಆಗಬೇಕು ಎಂಬುದು ನಿಯಮ ಅದು ಆಗಿಯೇ ಆಗುತ್ತೆ. ಆದರೆ ಇದೆಲ್ಲ ಆದ ಬಳಿಕ ಮತ್ತೊಂದು ಅವಕಾಶ ಅವರಿಗೆ ಇದೆ. ಎಲ್ಲವನ್ನು ಸರಿ ಮಾಡಿಕೊಂಡು ನಿನ್ನೆಯ ದರ್ಶನ್ ಮತ್ತೆ ನಾಳೆಯ ದರ್ಶನ್ ಆಗಿ ಕಾಣಿಸಿಕೊಳ್ಳುವ ಅವಕಾಶ ಇದೆ ಎಂದು ಹಿರಿಯ ನಟ ರಮೇಶ್​ ಅರವಿಂದ್​ ರೇಣುಕಸ್ವಾಮಿ ಹತ್ಯೆ ಪ್ರಕರಣದ ಕುರಿತು ಮಾತನಾಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net