

ಮುಂಬೈ: ಬಾಂಗ್ಲಾದೇಶ ವಿರುದ್ಧದ ಟೆಸ್ಟ್ ಸರಣಿಯ ಮೊದಲ ಪಂದ್ಯಕ್ಕೆ ಈಗಾಗಲೇ ಟೀಮ್ ಇಂಡಿಯಾನ್ನು ಪ್ರಕಟಿಸಲಾಗಿದ್ದು, ಕೆ.ಎಲ್. ರಾಹುಲ್, ರಿಷಭ್ ಪಂತ್, ಶುಭಮನ್ ಗಿಲ್ ಸೇರಿದಂತೆ ಹಲವರು ಆಯ್ಕೆಯಾಗಿದ್ದಾರೆ. ಆಕಾಶ್ ದೀಪ್, ಕುಲದೀಪ್ ಯಾದವ್, ಅಕ್ಷರ್ ಪಟೇಲ್, ಯಶಸ್ವಿ ಜೈಸ್ವಾಲ್, ಧ್ರುವ್ ಜುರೆಲ್ ಮತ್ತು ಸರ್ಫರಾಜ್ ಖಾನ್ನಂತಹ ಆಟಗಾರರಿಗೂ ಕೂಡ ಬಿಸಿಸಿಐ ಮಣೆ ಹಾಕಿದ್ದು, ಐಪಿಎಲ್ನಲ್ಲಿ ಆರ್ಸಿಬಿ ಪರ ಮಿಂಚಿದ್ದ ಸ್ಟಾರ್ ವೇಗಿ ಯಶ್ ದಯಾಳ್ಗೆ ಇದೇ ಮೊದಲ ಬಾರಿಗೆ ರಾಷ್ಟ್ರೀಯ ತಂಡದಿಂದ ಕರೆ ಬಂದಿದೆ. ಆದರೆ, ಅವರು ಸರ್ಫರಾಜ್ ಮತ್ತು ಯಶ್ ದಯಾಳ್ ಬಾಂಗ್ಲಾ ವಿರುದ್ಧದ ಸರಣಿಗೆ ರಾಷ್ಟ್ರೀಯ ತಂಡವನ್ನು ಕೂಡಿಕೊಳ್ಳುವುದಿಲ್ಲ ಎಂದು ವರದಿಯಾಗಿದೆ.
ಹಾಲಿ ನಡೆಯುತ್ತಿರುವ ದುಲೀಪ್ ಟ್ರೋಫಿಯ ಎರಡನೇ ಸುತ್ತಿನ ಪಂದ್ಯಗಳಿಗೆ ಬಿಸಿಸಿಐ ಮಂಗಳವಾರ (ಸೆಪ್ಟೆಂಬರ್ 10) ತಂಡವನ್ನು ಪ್ರಕಟಿಸಿದ್ದು, ಆಕಾಶ್ ದೀಪ್, ಕುಲದೀಪ್ ಯಾದವ್, ಅಕ್ಷರ್ ಪಟೇಲ್, ಯಶಸ್ವಿ ಜೈಸ್ವಾಲ್ ಮತ್ತು ಧ್ರುವ್ ಜುರೆಲ್ ಮುಂತಾದವರಿಗೆ ಎರಡನೇ ಸುತ್ತಿನಿಂದ ವಿನಾಯ್ತಿ ನೀಡಲಾಗಿದೆ. ಆದರೆ, ಯಶ್ ದಯಾಳ್ ಮತ್ತು ಸರ್ಫರಾಜ್ಗೆ ಭಿನ್ನವಾಗಿದ್ದು, ರಾಷ್ಟ್ರೀಯ ತಂಡದಲ್ಲಿ ಸ್ಥಾನ ಪಡೆದಿದ್ದರು ಅವರಿಗೆ ತಂಡ ಕೂಡಿಕೊಳ್ಳುವ ಅವಕಾಶ ಇಲ್ಲ ಎಂದು ಹೇಳಲಾಗಿದೆ.
ಬಾಂಗ್ಲಾದೇಶ ವಿರುದ್ಧದ ಮೊದಲ ಟೆಸ್ಟ್ ಸರಣಿಯ ಮೊದಲ ಪಂದ್ಯಕ್ಕೆ ಭಾರತ ತಂಡದ ಭಾಗವಾಗಿರುವ ಯಶ್ ದಯಾಳ್ ಹಾಗೂ ಸರ್ಫರಾಜ್ರನ್ನು ದುಲೀಪ್ ಟ್ರೋಫಿಯ ಎರಡನೇ ಸುತ್ತಿನ ಪಂದ್ಯಗಳಿಗೆ ಆಯ್ಕೆ ಮಾಡಲಾಗಿದೆ. ಈ ವಿಚಾರವು ಅವರು ಬಾಂಗ್ಲಾ ವಿರುದ್ಧದ ಟೆಸ್ಟ್ ಪಂದ್ಯದಲ್ಲಿ ಆಡುವ 11ರ ಬಳಗದಲ್ಲಿ ಕಾಣಿಸಿಕೊಳ್ಳುವುದಿಲ್ಲ ಎಂದು ಸ್ಪಷ್ಟವಾಗಿ ಸೂಚಿಸಿದ್ದು, ಈ ಕಾರಣಕ್ಕಾಗಿ ಅವರನ್ನು ದುಲೀಪ್ ಟ್ರೋಫಿ ಆಡುವಂತೆ ಸೂಚಿಸಿದೆ. ಟೀಮ್ ಇಂಡಿಯಾದ ಭಾಗವಾಗಿರುವ ಯಶಸ್ವಿ ಜೈಸ್ವಾಲ್, ರಿಷಬ್ ಪಂತ್ಗೆ ಬದಲಿ ಆಟಗಾರರಾಗಿ ಸುಯಶ್ ಪ್ರಭುದೇಸಾಯಿ ಮತ್ತು ರಿಂಕು ಸಿಂಗ್ರನ್ನು ಹೆಸರಿಸಲಾಗಿದೆ.
ಸದ್ಯ ಕೇಳಿ ಬಂದಿರುವ ಮಾಹಿತಿ ಪ್ರಕಾರ ದುಲೀಪ್ ಟ್ರೋಫಿಯ ಎರಡನೇ ಸುತ್ತಿನ ಪಂದ್ಯಗಳಿಗೆ ಸರ್ಫರಾಜ್ರನ್ನು ಆಯ್ಕೆ ಮಾಡಿರುವುದರಿಂದ ಕೆ.ಎಲ್. ರಾಹುಲ್ ಆಡುವ ಹನ್ನೊಂದರ ಬಳಗದಲ್ಲಿ ಕಾಣಿಸಿಕೊಳ್ಳುವ ಸಾಧ್ಯತೆ ಹೆಚ್ಚಿದೆ. 2022ರ ಡಿಸೆಂಬರ್ ಬಳಿಕ ಪಂತ್ ರೆಡ್ಬಾಲ್ ಕ್ರಿಕೆಟ್ಗೆ ಮರಳುತ್ತಿದ್ದು, ಈ ಕಾರಣಕ್ಕಾಗಿ ಸರ್ಫರಾಜ್ ಹಾಗೂ ಯಶ್ ದಯಾಳ್ರನ್ನು ದುಲೀಪ್ ಟ್ರೋಫಿ ಆಡುವಂತೆ ಸೂಚಿಸಲಾಗಿದೆ ಎಂದು ವರದಿಯಾಗಿದೆ.