

ಬೆಂಗಳೂರು: ಮಾಜಿ ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿ ಮನೆಯಲ್ಲಿ ಇತ್ತೀಚೆಗಷ್ಟೇ ಪುತ್ರನ ಮದುವೆ ಕಾರ್ಯ ನಡೆದಿತ್ತು. ಇಡೀ ಕುಟುಂಬ ಸಂತಸದಿಂದ ಕಲ್ಯಾಣ ಕಾರ್ಯವನ್ನು ನೆರವೇರಿಸಿತ್ತು. ಇದೀಗ ಇನ್ನೊಂದು ಸಂಭ್ರಮಕ್ಕೆ ತಯಾರಿ ನಡೆದಿದೆ. ಅಂದರೆ, ಮಾಜಿ ಪ್ರಧಾನಿ ಎಚ್.ಡಿ ದೇವೇಗೌಡ ಮತ್ತು ಪತ್ನಿ ಚೆನ್ನಮ್ಮ ಇಂದಿಗೆ (ಮೇ 24) ಮದುವೆಯಾಗಿ 66 ವರ್ಷಗಳಾದವು. ಆ ಖುಷಿಯ ಗಳಿಗೆಯನ್ನು ಮೊಮ್ಮಗ ನಿಖಿಲ್ ಕುಮಾರ್ ನೆನಪು ಮಾಡಿಕೊಂಡಿದ್ದು, ಜಾಳತಾಣದಲ್ಲಿ ತಾತ ಅಜ್ಜಿಗೆ ವಿವಾಹ ವಾರ್ಷಿಕೋತ್ಸದ ಶುಭಾಶಯ ಕೋರಿದ್ದಾರೆ.
ಇದನ್ನೂ ಓದಿ: ಹೇಗಿವೆ ಗೊತ್ತಾ ನಿಖಿಲ್- ರೇವತಿ ಮದುವೆ ಫೋಟೋಸ್?
‘ದಾಂಪತ್ಯ ಜೀವನಕ್ಕೆ ಕಾಲಿಟ್ಟು ಇಂದಿಗೆ 66 ವಸಂತಗಳನ್ನು ಪೂರೈಸಿರುವ ನಾಡಿನ ಆದರ್ಶ ದಂಪತಿಗಳಾಗಿರುವ ಪ್ರೀತಿಯ ತಾತ ಎಚ್.ಡಿ ದೇವೇಗೌಡ ಹಾಗೂ ಅಜ್ಜಿ ಚೆನ್ಮಮ್ಮ ಅವರಿಗೆ ವಿವಾಹ ವಾರ್ಷಿಕೋತ್ಸವದ ಹಾರ್ದಿಕ ಶುಭಾಶಯಗಳು‘ ಎಂದಿದ್ದಾರೆ.
ಈ ಖುಷಿಯ ದಿನವನ್ನು ಸಂಭ್ರಮಿಸಲು ಇಡೀ ಕುಟುಂಬ ಸಜ್ಜಾಗಿದ್ದು, ಮನೆಯಲ್ಲೇ ಸರಳವಾಗಿ ವಿವಾಹ ವಾರ್ಷಿಕೋತ್ಸವವನ್ನು ಆಚರಿಸಿಕೊಳ್ಳಲಿದೆ ಎನ್ನಲಾಗುತ್ತಿದೆ. ಇನ್ನು ಮಾಜಿ ಪ್ರಧಾನಿ ವಿವಾಹ ವಾರ್ಷಿಕೋತ್ಸವಕ್ಕೆ ರಾಜಕೀಯ ಮುಖಂಡರು, ಅಭಿಮಾನಿಗಳು ಮತ್ತು ಪಕ್ಷದ ಕಾರ್ಯಕರ್ತರು ಶುಭಾಶಯಗಳನ್ನು ಕೋರುತ್ತಿದ್ದಾರೆ.