2021ಕ್ಕೆ ಬಿಡುಗಡೆ ಭಾಗ್ಯ! ಸಾಲು ಸಾಲು ಸಿನಿಮಾಗಳು ಪೋಸ್ಟ್​ಪೋನ್

page 10 2
Published on

ಬೆಂಗಳೂರು: ಲಾಕ್​ಡೌನ್​ನಿಂದಾಗಿ ಈಗ ಬಿಡುಗಡೆಯಾಗಬೇಕಿದ್ದ ಚಿತ್ರಗಳೆಲ್ಲಾ ಮುಂದಕ್ಕೆ ಹೋಗಿವೆ. ಎಷ್ಟು ಮುಂದಕ್ಕೆ ಹೋಗಿದೆ ಅಥವಾ ಹೋಗಬಹುದು ಎಂಬುದು ಈಗಲೇ ಸ್ಪಷ್ಟವಾಗುತ್ತಿಲ್ಲ. ಎರಡು ತಿಂಗಳಾದರೂ ಆಗಬಹುದು ಅಥವಾ ನಾಲ್ಕು ತಿಂಗಳಾದರೂ ಆಶ್ಚರ್ಯವಿಲ್ಲ. ಒಟ್ಟಿನಲ್ಲಿ ಏಪ್ರಿಲ್- ಮೇನಲ್ಲಿ ಬಿಡುಗಡೆಯಾಗಬೇಕಿದ್ದ ಚಿತ್ರಗಳೆಲ್ಲಾ ಆಗಸ್ಟ್- ಸೆಪ್ಟೆಂಬರ್​ನಲ್ಲಿ ಬಿಡುಗಡೆ ಯಾಗುವ ಸಾಧ್ಯತೆ ಇದೆ.

ಇದು ಈಗ ಬಿಡುಗಡೆಯಾಗಬೇಕಿದ್ದ ಚಿತ್ರಗಳ ಕಥೆಯಾದರೆ, ವರ್ಷದ ಕೊನೆಯಲ್ಲಿ ಬಿಡುಗಡೆಯಾಗಬೇಕಿದ್ದ ಒಂದಿಷ್ಟು ಚಿತ್ರಗಳಿದ್ದವು. ಉಪೇಂದ್ರ ಅಭಿನಯದ ‘ಕಬ್ಜ’, ಸುದೀಪ್ ಅಭಿನಯದ ‘ಫ್ಯಾಂಟಮ್, ಪುನೀತ್ ಅಭಿನಯದ ‘ಜೇಮ್್ಸ’, ದರ್ಶನ್ ‘ರಾಜವೀರ ಮದಕರಿನಾಯಕ’, ಮುರಳಿ ‘ಮದಗಜ’, ಗಣೇಶ್ ‘ಸಖತ್’ ... ಹೀಗೆ ಕೆಲವು ದೊಡ್ಡ ಚಿತ್ರಗಳು ವರ್ಷದ ಕೊನೆಯಲ್ಲಿ ಬಿಡುಗಡೆಯಾಗುತ್ತದೆ ಎಂದು ಹೇಳಲಾಗಿತ್ತು. ಅವೆಲ್ಲಾ ಈಗ ಮುಂದಿನ ವರ್ಷಕ್ಕೆ ಹೋಗುವ ಸಾಧ್ಯತೆ ಇದೆ.

‘ಎಲ್ಲಾ ಅಂದುಕೊಂಡಂತೆ ಆಗಿದ್ದರೆ, ಈ ವರ್ಷದ ಕೊನೆಗೆ ಚಿತ್ರ ಬಿಡುಗಡೆ ಮಾಡುವ ಪ್ಲಾನ್ ಇತ್ತು’ ಎನ್ನುತ್ತಾರೆ ‘ಕಬ್ಜ’ ನಿರ್ದೇಶಕ ಆರ್. ಚಂದ್ರು. ಆದರೆ, ಈ ಲಾಕ್​ಡೌನ್​ನಿಂದ ಬಿಡುಗಡೆ ಮುಂದಕ್ಕೆ ಹೋಗಿದೆಯಂತೆ. ‘ಶೇ.40ರಷ್ಟು ಚಿತ್ರೀಕರಣ ಆಗಿತ್ತು. ಮಧ್ಯೆ ಗ್ಯಾಪ್ ಆಯಿತು. ಹಾಗಂತ ಕೆಲಸ ನಿಲ್ಲಿಸಿಲ್ಲ. ಶೂಟಿಂಗ್ ಮಾಡದಿದ್ದರೂ, ಮನೆಯಲ್ಲೇ ಕೂತು ಸಾಕಷ್ಟು ರೀವರ್ಕ್ ಮಾಡಿದ್ದೇವೆ. ಟೈಮ್ ಸಿಕ್ಕಿದ್ದರಿಂದ ಸಣ್ಣಸಣ್ಣ ಡೀಟೈಲ್​ಗಳ ಬಗ್ಗೆಯೂ ಗಮನಹರಿಸುವಂತಾಗಿದೆ. ಶೂಟಿಂಗ್ ಪ್ರಾರಂಭವಾದ ಮೇಲೆ ಅವೆಲ್ಲಾ ಸಹಾಯಕ್ಕೆ ಬರಲಿದೆ. ಮುಂಚೆ ಡಿಸೆಂಬರ್​ನಲ್ಲಿ ಚಿತ್ರ ಬಿಡುಗಡೆ ಮಾಡುವ ಯೋಚನೆ ಇತ್ತು. ಈಗ ಗ್ಯಾಪ್ ಆಗಿರುವುದರಿಂದ, ಚಿತ್ರದ ಬಿಡುಗಡೆ ಮುಂದಿನ ವರ್ಷಕ್ಕೆ ಹೋಗಲಿದೆ’ ಎನ್ನುತ್ತಾರೆ ಚಂದ್ರು.

‘ಮದಗಜ’ ನಿರ್ದೇಶಕ ಮಹೇಶ್ ಹೇಳುವಂತೆ, ಇಷ್ಟರಲ್ಲಿ ಅವರ ಚಿತ್ರದ ಚಿತ್ರೀಕರಣ ಬಹುತೇಕ ಮುಗಿದು, ಆಗಸ್ಟ್​ನಲ್ಲಿ ಬಿಡುಗಡೆ ಮಾಡುವುದಕ್ಕೆ ಯೋಚಿಸಿದ್ದರಂತೆ. ‘ಈಗಾಗಲೇ ಕಾಶಿಯಲ್ಲಿ ಶೇ 30ರಷ್ಟು ಚಿತ್ರೀಕರಣ ಮಾಡಿದ್ದೆವು. ಇನ್ನು ಮಾರ್ಚ್-ಏಪ್ರಿಲ್ ತಿಂಗಳಲ್ಲಿ 32 ದಿನಗಳ ಚಿತ್ರೀಕರಣ ಪ್ಲಾನ್ ಮಾಡಲಾಗಿತ್ತು. ಅದಾಗಿದ್ದರೆ, ಇಷ್ಟರಲ್ಲಿ ಚಿತ್ರೀಕರಣ ಮುಕ್ತಾಯದ ಹಂತ ತಲುಪಲಿತ್ತು. ಆದರೆ, ಒಂದು ಅಣು ನಮ್ಮ ಯೋಚನೆಗಳನ್ನೇ ಉಲ್ಟಾ ಮಾಡಿಬಿಟ್ಟಿತು. ಲಾಕ್​ಡೌನ್ ಮುಗಿದ ಮೇಲೆ ಬೇಗ ಕೆಲಸ ಮುಗಿಸಿ, ಈ ವರ್ಷದ ಕೊನೆಗೇ ಬಿಡುಗಡೆ ಮಾಡುವ ಯೋಚನೆಯೂ ಇದೆ. ಚಿತ್ರೀಕರಣ ಶುರುವಾಗುವುದು ವಿಳಂಬವಾದರೆ, ಆದು ಬಿಡುಗಡೆಯ ಮೇಲೂ ಪರಿಣಾಮ ಬೀರಲಿದೆ’ ಎನ್ನುತ್ತಾರೆ ಮಹೇಶ್.

ದರ್ಶನ್ ‘ರಾಜವೀರ ಮದಕರಿ ನಾಯಕ’ ಮತ್ತು ಸುದೀಪ್ ‘ಫ್ಯಾಂಟಮ್ ಚಿತ್ರಗಳದ್ದೂ ಇದೇ ಕಥೆ. ಈ ಎರಡೂ ಚಿತ್ರಗಳ ಒಂದೊಂದು ಹಂತದ ಚಿತ್ರೀ ಕರಣವಷ್ಟೇ ಮುಗಿದಿದ್ದು, ಚಿತ್ರೀಕರಣವಾಗಬೇಕಾಗಿದ್ದು ಬಹಳಷ್ಟಿದೆ. ಲಾಕ್​ಡೌನ್ ಮುಗಿದು, ಚಿತ್ರೀಕರಣಕ್ಕೆ ಅನುಮತಿ ಸಿಕ್ಕ ಮೇಲಷ್ಟೇ ಮುಂದಿನ ಮಾತು. ಇದೆಲ್ಲದರಿಂದಾಗಿ, ತಮ್ಮ ಮೆಚ್ಚಿನ ನಟರ ನಿರೀಕ್ಷಿತ ಚಿತ್ರಗಳಿಗೆ ಕಾದು ಕುಳಿತಿದ್ದ ಅಭಿಮಾನಿಗಳು ಮುಂದಿನ ವರ್ಷದವರೆಗೂ ಕಾಯದೇ ಬೇರೆ ದಾರಿಯಿಲ್ಲ.

ಸದ್ಯಕ್ಕಿಲ್ಲ ಜೇಮ್್ಸ: ಇನ್ನು ವರ್ಷದ ಆರಂಭದಲ್ಲಿ ಪ್ರಾರಂಭವಾದ ‘ಜೇಮ್್ಸ’ ಬಿಡುಗಡೆ ಸಹ ಮುಂದಿನ ವರ್ಷವೇ. ‘ನವೆಂಬರ್ ಅಥವಾ ಡಿಸೆಂಬರ್​ನಲ್ಲಿ ಚಿತ್ರ ಬಿಡುಗಡೆ ಮಾಡಬಹುದು ಎಂದುಕೊಂಡಿದ್ದೆವು. ಈಗ ಮೂರ್ನಾಲ್ಕು ತಿಂಗಳ ಗ್ಯಾಪ್ ಆಗಿದೆ. ಹಾಗಂತ ಲಾಕ್​ಡೌನ್ ಮುಗಿಯುತ್ತಿದ್ದಂತೆಯೇ ಎಲ್ಲವೂ ಸರಿ ಹೋಗಬಹುದು ಎಂದು ಹೇಳುವುದು ಕಷ್ಟ. ಫಾರಿನ್​ನಲ್ಲಿ ಶೂಟಿಂಗ್ ಆಗಬೇಕಿದೆ. ಅಲ್ಲಿ ಅನುಮತಿ ಸಿಗುತ್ತದೋ, ಇಲ್ಲವೋ ಹೇಳುವುದು ಕಷ್ಟ. ಸದ್ಯಕ್ಕೆ ಸ್ಟುಡಿಯೋ ಕೆಲಸಗಳನ್ನು ಮಾಡಿಕೊಳ್ಳುತ್ತಿದ್ದೇವೆ’ ಎನ್ನುತ್ತಾರೆ ನಿರ್ದೇಶಕ ಚೇತನ್ ಕುಮಾರ್.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net