ಹ್ಯಾಪಿ ಶಾಪಿಂಗ್ : ಕರೊನಾ ಲಸಿಕೆ ಪಡೆದವರಿಗೆ ಡಿಸ್ಕೌಂಟ್ ಕೂಪನ್​ !

china
Published on

ಬೀಜಿಂಗ್ : ಕರೊನಾ ಲಸಿಕೆ ಪಡೆದ ಮೇಲೆ ಆರಾಮವಾಗಿ ಸುತ್ತಾಡಬಹುದೆಂಬ ಆಶಯ ಹಲವರದ್ದು. ಹೀಗಿರುವಾಗ ಲಸಿಕೆ ಪಡೆದ ಮೇಲೆ ಶಾಪಿಂಗ್ ಹೋದಾಗ ಒಳ್ಳೇ ರಿಯಾಯತಿಗಳೂ ಸಿಕ್ಕರೆ ಬಂಪರ್ ಬಹುಮಾನ ಸಿಕ್ಕಂತೆ. ಇಂಥದ್ದೊಂದು ಯೋಜನೆಯನ್ನು ಬೀಜಿಂಗ್​ನ ಡಾಕ್ಸಿಂಗ್ ಜಿಲ್ಲಾ ಆಡಳಿತ ಜಾರಿಗೆ ತಂದಿದೆ.

ಹೌದು, ಚೀನಾದ ಈ ಊರಿನಲ್ಲಿ ಕರೊನಾ ಲಸಿಕೆಯ ಎರಡೂ ಡೋಸ್​ಗಳನ್ನು ಪಡೆದ ಜನರಿಗೆ ವಿಶೇಷ ಡಿಸ್ಕೌಂಟ್​ ಒದಗಿಸುವ ಶಾಪಿಂಗ್ ಕೂಪನ್​ಗಳನ್ನು ನೀಡಲಾಗುತ್ತಿದೆ! ಈ ಮೂಲಕ ಹೆಚ್ಚು ಹೆಚ್ಚು ಜನರು ಕರೊನಾ ಲಸಿಕೆಯನ್ನು ಶೀಘ್ರವಾಗಿ ಪಡೆಯಲು ಪ್ರೇರೇಪಿಸಲಾಗುತ್ತಿದೆ.

ಸುಮಾರು 1.8 ಮಿಲಿಯನ್ ಜನಸಂಖ್ಯೆ ಹೊಂದಿರುವ ಡಾಕ್ಸಿಂಗ್ ಜಿಲ್ಲೆಯಲ್ಲಿ ನೀಡಲಾಗುತ್ತಿರುವ ಈ ಕೂಪನ್​ಗಳನ್ನು ಸೂಪರ್​ಮಾರ್ಕೆಟ್​ಗಳಲ್ಲಿ ಬಳಸಬಹುದಂತೆ. ಈವರೆಗೆ ಡಾಕ್ಸಿಂಗ್​ನ ಶೇ. 73 ರಷ್ಟು 18 ವರ್ಷ ಮೇಲ್ಪಟ್ಟ ಜನರು ಕರೊನಾ ಲಸಿಕೆಯ ಪ್ರಥಮ ಡೋಸ್ ಪಡೆದಿದ್ದು, ಈ ಪ್ರಮಾಣವನ್ನು ಮತ್ತೂ ಹೆಚ್ಚಿಸಬೇಕೆಂಬುದು ಆಡಳಿತದ ಅಪೇಕ್ಷೆಯಾಗಿದೆ.

ಲಸಿಕೆ ಪಡೆದವರಿಗೆ 8 ಯುವಾನ್(90 ರೂ.)​ನಿಂದ ಹಿಡಿದು 30 ಯುವಾನ್​ (330 ರೂ.) ಮೌಲ್ಯದವರೆಗೆ ವಿವಿಧ ಷರತ್ತುಗಳ ಮೇಲೆ ಕೂಪನ್ ನೀಡಲಾಗುವುದು. ಒಟ್ಟು 200 ಮಿಲಿಯನ್ ಯುವಾನ್​ (ಸುಮಾರು 222 ಕೋಟಿ ರೂ.) ಮೌಲ್ಯದ ರಿಯಾಯಿತಿ ಕೂಪನ್​ಗಳನ್ನು ತಯಾರಿಸಲಾಗಿದೆ ಎಂದು ಜಿಲ್ಲಾಡಳಿತ ಸಾಮಾಜಿಕ ಜಾಲತಾಣದಲ್ಲಿ ಮಾಹಿತಿ ನೀಡಿದೆ. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net