ನಟ ದರ್ಶನ್ ಬಗ್ಗೆ ಆಪ್ತ ಸ್ನೇಹಿತ ಜಿಮ್ ರವಿ ಕೊಟ್ಟ ಪ್ರತಿಕ್ರಿಯೆ ಹೀಗಿದೆ

Untitled design - 2024-06-11T185854.474
Published on

ಬೆಂಗಳೂರು: ಸ್ಯಾಂಡಲ್​ವುಡ್​ ಸ್ಟಾರ್​ ನಟ ದರ್ಶನ್​ ಕೊಲೆ ಪ್ರಕರಣವೊಂದರಲ್ಲಿ ಇದೀಗ ಪೊಲೀಸರ ಅತಿಥಿಯಾಗಿದ್ದು, ನಟಿ ಪವಿತ್ರಾ ಗೌಡಗೆ ಅಶ್ಲೀಲ ಸಂದೇಶ ಕಳುಹಿಸಿದ ರೇಣುಕಾಸ್ವಾಮಿಯ ಹತ್ಯೆಯಲ್ಲಿ ದರ್ಶನ್​ ಕೈವಾಡವಿದೆ ಎಂಬ ಆರೋಪ ಕೇಳಿಬಂದಿದೆ. ದರ್ಶನ್​ ಸೂಚನೆ ಕೊಟ್ಟಿದ್ದಕ್ಕೆ ಹಲ್ಲೆ ಮಾಡಿದೆವು ಎಂದು ಬಂಧಿತ ಆರೋಪಿಗಳಲ್ಲಿ ಒಬ್ಬರು ತಪ್ಪೊಪ್ಪಿಕೊಂಡಿರುವ ಹಿನ್ನೆಲೆಯಲ್ಲಿ ದರ್ಶನ್​ರನ್ನು ಪೊಲೀಸರು ಬಂಧಿಸಿದ್ದಾರೆ. ಇದಲ್ಲದೆ, ಒಳಸಂಚು ನಡೆಸಿದ ಆರೋಪದ ಮೇಲೆ ಪವಿತ್ರಾ ಗೌಡಳನ್ನು ಕೂಡ ವಶಕ್ಕೆ ಪಡೆದಿರುವ ಪೊಲೀಸರು, ಇಬ್ಬರನ್ನು ಬೆಂಗಳೂರಿನ ಮ್ಯಾಜಿಸ್ಟ್ರೇಟ್​ ಕೋರ್ಟ್​ ಮುಂದೆ ಹಾಜರುಪಡಿಸಿದ್ದಾರೆ.

ಇನ್ನು ಈ ಪ್ರಕರಣ ತೀವ್ರಗೊಳ್ಳುತ್ತಿದ್ದಂತೆ ದರ್ಶನ್​ ಬಗ್ಗೆ ಮಾತನಾಡಿದ ಜಿಮ್ ರವಿ, ನಾವು ದರ್ಶನ್​ ಮಾಡಿರುವ ಒಳ್ಳೆಯ ಕೆಲಸಗಳನ್ನು ನೋಡಿದ್ದೀವಿ. ಸಮಾಜಮುಖಿ ಕಾರ್ಯಗಳನ್ನು ಸಹ ಮಾಡಿದ್ದಾರೆ. ಮೊದಲಿಗೆ ನಾವು ಕೊಲೆಯಾಗಿರುವ ರೇಣುಕಾಸ್ವಾಮಿ ಅವರ ಕುಟುಂಬಕ್ಕೆ ಸಾಂತ್ವನ ಹೇಳಬೇಕು. ನಾನು ದರ್ಶನ್​ರನ್ನು ಸ್ನೇಹಿತನಾಗಿ ಭೇಟಿ ಮಾಡಲು ಬಂದಿದ್ದೀನಿ. ವಿಚಾರಣೆ ಮಾಡ್ತಿರುವ ಕಾರಣ ಭೇಟಿಗೆ ಅವಕಾಶ ಸಿಗಲಿಲ್ಲ ಎಂದರು.

ಈ ತನಿಖೆಯಿಂದ ಸತ್ಯಾಸತ್ಯತೆ ಹೊರಬರಬೇಕಿದೆ. ಸಾಧ್ಯವಾದರೆ ನಾನು ಮೃತ ರೇಣುಕಾಸ್ವಾಮಿ ನಿವಾಸಕ್ಕೆ ಭೇಟಿ ನೀಡಿ, ಕುಟುಂಬಸ್ಥರಿಗೆ ಸಾಂತ್ವನ ಹೇಳುವ ಪ್ರಯತ್ನ ಮಾಡುತ್ತೀನಿ. ತನಿಖೆ ಮುಖಾಂತರ ಎಲ್ಲವೂ ಸ್ಪಷ್ಟವಾಗಿ ತಿಳಿಯಲಿದೆ. ಅಲ್ಲಿಯವರೆಗೆ ಕಾದು ನೋಡೋಣ. ಸುಖಾಸುಮ್ಮನೆ ಊಹಾಪೋಹ ಹಬ್ಬಿಸಬೇಡಿ ಎಂದು ಜಿಮ್ ರವಿ ಹೇಳಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net