

ನವದೆಹಲಿ: ಇಂಡಿಯನ್ ಪ್ರೀಮಿಯರ್ ಲೀಗ್ 2024ರ ಆವೃತ್ತಿಗೆ ಈಗಾಗಲೇ ದಿನಗಣನೆ ಆರಂಭಗೊಂಡಿದ್ದು, ಗ್ರ್ಯಾಂಡ್ ಓಪನಿಂಗ್ ಇದೇ ಮಾರ್ಚ್ 22ರಂದು ಚೆನ್ನೈನ ಚೇಪಾಕ್ ಸ್ಟೇಡಿಯಂನಲ್ಲಿ ಅದ್ದೂರಿಯಾಗಿ ನೆರವೇರಲಿದೆ. ಇದರ ಬೆನ್ನಲ್ಲೇ ಮೊದಲ 21 ದಿನಗಳು ನಡೆಯಲಿರುವ ಪಂದ್ಯಗಳ ವೇಳಾಪಟ್ಟಿಯನ್ನು ಬಿಡುಗಡೆಗೊಳಿಸಿರುವ ಬಿಸಿಸಿಐ, ಕಿಕ್ಸ್ಟಾರ್ಟ್ ಪಂದ್ಯವನ್ನು ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಚೆನ್ನೈ ಸೂಪರ್ ಕಿಂಗ್ಸ್ ನಡುವೆ ಆಯೋಜಿಸುವ ಮೂಲಕ ಕ್ರಿಕೆಟ್ ಅಭಿಮಾನಿಗಳಲ್ಲಿ ಮತ್ತಷ್ಟು ಕಿಚ್ಚು ಹೆಚ್ಚಿಸಿದೆ.
ಒಂದೆಡೆ ಐಪಿಎಲ್ನ 10 ತಂಡಗಳ 10 ಕ್ಯಾಪ್ಟನ್ಗಳ ಮೇಲೆ ಭಾರೀ ಭರವಸೆ ಮತ್ತು ನಿರೀಕ್ಷೆಗಳ ಹೆಚ್ಚಾದರೂ ಸಹ ಮುಂಬೈ ಇಂಡಿಯನ್ಸ್ ಕ್ಯಾಪ್ಟನ್ ಹಾರ್ದಿಕ್ ಪಾಂಡ್ಯ ವಿರುದ್ಧ ಕೇಳಿಬರುತ್ತಿರುವ ವಿಚಾರಗಳು ಮಾತ್ರ ಕಿಂಚಿತ್ತು ಕಡಿಮೆಯಾಗಿಲ್ಲ ಎಂಬಂತೆ ಕಾಣುತ್ತಿದೆ. ಎರಡು ವರ್ಷ ಗುಜರಾತ್ ಟೈಟನ್ಸ್ ನಾಯಕನಾಗಿ ತಂಡವನ್ನು ಯಶಸ್ವಿಯಾಗಿ ಮುನ್ನಡೆಸಿಕೊಂಡು ಫೈನಲ್ ಹಣಾಹಣಿಯವರೆಗೂ ತಂದಿದ್ದ ಪಾಂಡ್ಯ ಕಳೆದ ವರ್ಷ ದಿಢೀರ್ ಟೈಟನ್ಗೆ ಕೈಕೊಟ್ಟು ಎಂಐ ತಂಡಕ್ಕೆ ಮತ್ತೆ ಹಿಂತಿರುಗಿದರು.
ಈ ಸಂಗತಿ ಮುಂಬೈ ಇಂಡಿಯನ್ಸ್ ಅಭಿಮಾನಿಗಳಿಗೆ ಮೊದಲೇನೋ ಖುಷಿ ತಂದಿತು. ಆದ್ರೆ, ತದನಂತರ ಐದು ಬಾರಿ ಐಪಿಎಲ್ ಟ್ರೋಫಿ ತಂದುಕೊಟ್ಟ ಯಶಸ್ವಿ ಕ್ಯಾಪ್ಟನ್ ರೋಹಿತ್ ಶರ್ಮಾ ಅವರ ಸ್ಥಾನವನ್ನು ಪಾಂಡ್ಯ ಅಲಂಕರಿಸಿದರು ಎಂಬ ಸುದ್ದಿ ಕೇಳಿ ಭಾರೀ ಆಘಾತ ತಂದೊಡ್ಡಿತು. ಇಂದಿಗೂ ಈ ಶಾಕ್ನಿಂದ ಫ್ಯಾನ್ಸ್ ಹೊರಬಂದಿಲ್ಲ ಎಂಬುದು ಕಳೆದ ಕೆಲವು ತಿಂಗಳಿನಿಂದ ಸಾಮಾಜಿಕ ಜಾಲತಾಣದಲ್ಲಿ ನಡೆಯುತ್ತಿರುವ ಟ್ರೋಲ್ಗಳು ಸ್ಪಷ್ಟಪಡಿಸುತ್ತಿವೆ.
ಸದ್ಯ ಈ ವಿಚಾರಗಳ ಬೆನ್ನಲ್ಲೇ ಇದೀಗ ಆಸ್ಟ್ರೇಲಿಯ ಕ್ರಿಕೆಟ್ ತಂಡದ ಮಾಜಿ ಆಟಗಾರ ಬ್ರಾಡ್ ಹಾಗ್ ಐಪಿಎಲ್ನಲ್ಲಿ ಹಾರ್ದಿಕ್ ಪಾತ್ರ ಕುರಿತು ಕೆಲವು ಕುತೂಹಲಕಾರಿ ಸಂಗತಿಗಳನ್ನು ತೆರದಿಟ್ಟಿದ್ದಾರೆ. ತಮ್ಮ ಯೂಟ್ಯೂಬ್ ಚಾನೆಲ್ನಲ್ಲಿ ಮಾತನಾಡಿದ ಬ್ರಾಡ್, ಪಾಂಡ್ಯ ಇಲ್ಲದೇ ಗುಜರಾತ್ ಟೈಟನ್ಸ್ ತಂಡ ಉತ್ತಮವಾಗಿಯೇ ಇದೆ ಎಂದಿದ್ದಾರೆ.
"ನನಗೇನೋ ತಂಡದಿಂದ ಹಾರ್ದಿಕ್ ಹೊರನಡೆದಿರುವುದು ಗುಜರಾತ್ ಟೈಟನ್ಸ್ಗೆ ದೊಡ್ಡ ಲಾಸ್ ಇಲ್ಲ. ಹೌದು, ಹಾರ್ದಿಕ್ ಒಬ್ಬ ಉತ್ತಮ ಆಲ್-ರೌಂಡರ್, ಮಧ್ಯಮ ಕ್ರಮಾಂಕದಲ್ಲಿ ಚೆನ್ನಾಗಿ ಆಡುತ್ತಾರೆ. ಆದರೂ ಸಹ ಜಿಟಿ ಪಾಂದ್ಯ ಅವರ ಅನುಪಸ್ಥಿತಿಯನ್ನು ಕವರ್ ಮಾಡಿಕೊಳ್ಳಬಹುದು. ಟೈಟನ್ಸ್ನಲ್ಲಿ ಉತ್ತಮ ಬೌಲಿಂಗ್ ದಾಳಿಯಿದೆ. ಎಂದಿಗೂ ಬೌಲಿಂಗ್ ವಿಭಾಗವೂ ಪಾಂಡ್ಯ ಮೇಲೆ ಅವಲಂಬಿತರಾಗಿರಲಿಲ್ಲ. ಹಾಗಾಗಿ, ನನ್ನ ಪ್ರಕಾರ ಗುಜರಾತ್ ಹಾರ್ದಿಕ್ ಇಲ್ಲದೆ ಉತ್ತಮವಾಗಿದೆ" ಎಂದರು.
"ಇನ್ನು ಇಂಡಿಯನ್ ಆಲ್-ರೌಂಡರ್ ಕೆಳ ಮಧ್ಯಮ ಕ್ರಮಾಂಕದಲ್ಲಿ ಆಡುವುದು ಮುಂಬೈಗೆ ಬೆಸ್ಟ್ ಆಯ್ಕೆ. ನನ್ನ ಪ್ರಕಾರ ಹಾರ್ದಿಕ್ ಕೂಡ ಅದೇ ಕ್ರಮಾಂಕದಲ್ಲಿ ಬ್ಯಾಟ್ ಮಾಡ್ತಾರೆ. ಮುಂಬೈ ತಂಡದೊಂದಿಗೆ ಹಾರ್ದಿಕ್ ಮತ್ತಷ್ಟು ಬೆಸ್ಟ್ ಆಗಿ ಹೊರಹೊಮ್ಮಲಿದ್ದಾರೆ" ಎಂದು ಹೇಳಿದರು,(ಏಜೆನ್ಸೀಸ್).