

ನವದೆಹಲಿ: ಟ್ವಿಟರ್, ಫೇಸ್ಬುಕ್, ವಾಟ್ಸ್ಆ್ಯಪ್ ಸೇರಿ ಹಲವು ಸೋಷಿಯಲ್ ಮೀಡಿಯಾ ಹಾಗೂ ಮೆಸೇಜಿಂಗ್ ಆ್ಯಪ್ಗಳ ಭವಿಷ್ಯ ಭಾರತದ ಮಟ್ಟಿಗೆ ಸದ್ಯ ಆತಂಕದಲ್ಲಿದ್ದು, ಇವು ನಿಷೇಧಗೊಳ್ಳಲಿದೆಯೇ ಎಂಬ ಕುತೂಹಲ ಎರಡು ದಿನಗಳಿಂದ ವ್ಯಾಪಕವಾಗಿ ಚರ್ಚೆ ಆಗುತ್ತಿದೆ. ಈ ನಡುವೆ ಇವೆಲ್ಲವುಗಳಿಗೆ ಸರ್ಕಾರ ಮತ್ತೊಂದು ಸೂಚನೆ ಕೊಟ್ಟಿದ್ದು, ಇವತ್ತೇ ತಮ್ಮ ಅಭಿಪ್ರಾಯ ತಿಳಿಸಬೇಕು ಎಂದು ಸರ್ಕಾರ ಸೂಚಿಸಿದೆ.
ಕೇಂದ್ರ ಸರ್ಕಾರ ತಂದಿರುವ ಹೊಸ ಇನ್ಫಾರ್ಮೇಷನ್ ಟೆಕ್ನಾಲಜಿ ರೂಲ್ಸ್ಗೆ ಸಂಬಂಧಿಸಿದಂತೆ ಸೋಷಿಯಲ್ ಮೀಡಿಯಾ ಇಂಟರ್ಮೀಡಿಯರಿ ಕಂಪನಿಗಳಿಗೆ ಅರ್ಥಾತ್ ಫೇಸ್ಬುಕ್, ಟ್ವಿಟರ್ ಮುಂತಾದ ಕಂಪನಿಗಳಿಗೆ ಫೆಬ್ರವರಿಯಲ್ಲೇ ಸೂಚನೆ ನೀಡಿ ಮೂರು ತಿಂಗಳ ಕಾಲಾವಕಾಶ ನೀಡಿತ್ತು. ಆ ಗಡುವು ನಿನ್ನೆಗೇ ಮುಗಿದಿದೆ.
ಈ ಹಿನ್ನೆಲೆಯಲ್ಲಿ ಸೋಷಿಯಲ್ ಮೀಡಿಯಾ ಇಂಟರ್ಮೀಡಿಯರಿ ಕಂಪನಿಗಳಿಂದ ಸರಿಯಾದ ಸ್ಪಷ್ಟನೆಗಳು ಸಿಗದ ಕಾರಣ ಸರ್ಕಾರ ಇಂದು ಮತ್ತೊಂದು ಸೂಚನೆ ಹೊರಡಿಸಿದೆ. ಕಾನೂನುಪಾಲನೆ ಕುರಿತು ಸಂಸ್ಥೆಗಳ ನಿಲುವು, ಕಂಪನಿಗಳ ವಿವರ, ಸಂಪರ್ಕಿಸಬೇಕಾದ ಅಧಿಕಾರಿಗಳ ಮಾಹಿತಿ ಎಲ್ಲವನ್ನೂ ಒದಗಿಸುವಂತೆ ಮಿನಿಸ್ಟ್ರಿ ಆಫ್ ಎಲೆಕ್ಟ್ರಾನಿಕ್ಸ್ ಆ್ಯಂಡ್ ಇನ್ಫಾರ್ಮೇಷನ್ ಟೆಕ್ನಾಲಜಿ ನೋಟಿಸ್ ರವಾನಿಸಿದೆ. ಮಾತ್ರವಲ್ಲ ಈ ಬಗ್ಗೆ ಆದಷ್ಟು ಬೇಗ, ಅದರಲ್ಲೂ ಇಂದೇ ಮಾಹಿತಿ ನೀಡಲು ಆದ್ಯತೆ ನೀಡುವಂತೆ ಆಗ್ರಹಿಸಿ ಸೂಚನೆ ನೀಡಿದೆ.