

ನವದೆಹಲಿ : ಕರೊನಾ ಲಸಿಕೆಯ ಖರೀದಿಯ ಪ್ರಕ್ರಿಯೆಯನ್ನು ಕೇಂದ್ರ ಸರ್ಕಾರ ಪಾರದರ್ಶಕಗೊಳಿಸಬೇಕು ಎಂದು ವಿರೋಧ ಪಕ್ಷಗಳು ಈ ಹಿಂದೆ ಆಗ್ರಹಿಸಿದ್ದವು. ಇದೀಗ ಸುಪ್ರೀಂ ಕೋರ್ಟ್ ಇದೇ ನಿಟ್ಟಿನಲ್ಲಿ ಆದೇಶ ಹೊರಡಿಸಿದ್ದು, ಈವರೆಗೆ ಕೇಂದ್ರ ಖರೀದಿಸಿರುವ ಲಸಿಕೆಗಳ ಪೂರ್ಣ ವಿವರಗಳನ್ನು ಕೇಳಿದೆ. ಜೊತೆಗೆ, ಕೇಂದ್ರ ಸರ್ಕಾರದ ಲಸಿಕಾ ನೀತಿಗೆ ಸಂಬಂಧಿಸಿದ ಎಲ್ಲಾ ದಾಖಲೆಗಳನ್ನು ತನ್ನ ಮುಂದೆ ಇರಿಸುವಂತೆ ಸುಪ್ರೀಂ ಸೂಚಿಸಿದೆ.
"ಕೋವಿಡ್ 19 ಲಸಿಕಾ ನೀತಿಯ ಕುರಿತಾದ ಎಲ್ಲಾ ಪ್ರಮುಖ ದಾಖಲೆಗಳು ಮತ್ತು ಲಸಿಕಾ ನೀತಿಯನ್ನು ರೂಪಿಸುವುದರಲ್ಲಿ ಪಾತ್ರ ವಹಿಸಿದ ಫೈಲ್ ನೋಟಿಂಗ್ಸ್ನ ಪ್ರತಿಗಳನ್ನು ಕೋರ್ಟ್ಗೆ ಸಲ್ಲಿಸಿ, 2 ವಾರಗಳೊಳಗೆ ಅಫಿಡೆವಿಟ್ ಸಲ್ಲಿಸಬೇಕು" ಎಂದು ಸುಪ್ರೀಂ ಕೋರ್ಟ್ನ ವಿಶೇಷ ನ್ಯಾಯಪೀಠವು ಕೇಂದ್ರ ಸರ್ಕಾರಕ್ಕೆ ಲಿಖಿತ ಆದೇಶ ಹೊರಡಿಸಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಗೆ, ಖಾಸಗಿ ಆಸ್ಪತ್ರೆಗಳಿಗೆ ವಿಭಿನ್ನ ಲಸಿಕೆ ದರಗಳಿರುವ ಬಗ್ಗೆ ಪ್ರಶ್ನೆ ಎತ್ತಿರುವ ರಿಟ್ ಅರ್ಜಿ ಸಂದರ್ಭದಲ್ಲಿ ಈ ನಿರ್ದೇಶನ ನೀಡಿದೆ.
ನ್ಯಾಯಮೂರ್ತಿಗಳಾದ ಡಿ.ವೈ.ಚಂದ್ರಚೂಡ್, ಎಲ್.ಎನ್.ರಾವ್ ಮತ್ತು ಎಸ್.ರವೀಂದ್ರ ಭಟ್ ಜಾರಿಗೊಳಿಸಿರುವ ಈ ಆದೇಶದಲ್ಲಿ ಈವರೆಗಿನ ಲಸಿಕೆ ಖರೀದಿಯ ಪೂರ್ಣ ವಿವರವನ್ನು ಕೇಳಲಾಗಿದೆ. ಭಾರತದಲ್ಲಿ ಲಭ್ಯವಿರುವ ಮೂರು ಲಸಿಕೆಗಳ ಖರೀದಿಗಾಗಿ ಕೇಂದ್ರ ಸರ್ಕಾರ ನೀಡಿದ ಆರ್ಡರ್ಗಳ ದಿನಾಂಕಗಳು, ಪ್ರತಿ ದಿನಾಂಕದಲ್ಲಿ ಆರ್ಡರ್ ಮಾಡಿದ ಲಸಿಕೆಯ ಪ್ರಮಾಣ ಮತ್ತು ಪೂರೈಕೆಗೆ ನಿಗದಿಪಡಿಸಲಾದ ದಿನಾಂಕ - ಇಷ್ಟನ್ನೂ ಒದಗಿಸುವಂತೆ ಕೇಂದ್ರ ಸರ್ಕಾರಕ್ಕೆ ಸೂಚಿಸಿದೆ. ಈ ಅಂಶಗಳನ್ನು ಒಳಗೊಂಡಂತೆ ಈವರೆಗೆ ಪಡೆದುಕೊಂಡಿರುವ ಕೋವಾಕ್ಸಿನ್, ಕೋವಿಶೀಲ್ಡ್ ಮತ್ತು ಸ್ಪುಟ್ನಿಕ್ ವಿ ಲಸಿಕೆಗಳ ಖರೀದಿ ಇತಿಹಾಸ(ಪರ್ಚೇಸ್ ಹಿಸ್ಟರಿ)ವನ್ನು 2 ವಾರಗಳಲ್ಲಿ ಸಲ್ಲಿಸಬೇಕೆಂದು ಸುಪ್ರೀಂ ನಿರ್ದೇಶಿಸಿದೆ. (ಏಜೆನ್ಸೀಸ್)
(ಏಜೆನ್ಸೀಸ್)