

ನವದೆಹಲಿ : ಕರೊನಾದಿಂದಾಗಿ ಲಕ್ಷಾಂತರ ಜನರ ಜೀವನ ಬದಲಾಗಿದೆ. ಮನೆಯಲ್ಲೇ ಬಂಧಿಯಾಗಿರುವ ವಿವಿಧ ವಯಸ್ಸಿನ ಜನರಿಗೆ ಅವರವರದೇ ಬಿಕ್ಕಟ್ಟುಗಳು. ಶಾಲೆಗೆ ಹೋಗಿ ಸಹಪಾಠಿಗಳೊಂದಿಗೆ ಕಲೆತು ವಿದ್ಯೆ ಕಲಿಯುವ ಅವಕಾಶವಿಲ್ಲದೆ, ಮಕ್ಕಳು ಆನ್ಲೈನ್ ಶಿಕ್ಷಣ ಪಡೆಯುತ್ತಿದ್ದಾರೆ. ಹೀಗಿರುವಾಗ ತನ್ನ ಆನ್ಲೈನ್ ತರಗತಿಗಳು ದೀರ್ಘಕಾಲ ನಡೆಯುವ ಬಗ್ಗೆ 6 ವರ್ಷದ ಬಾಲಕಿಯೊಬ್ಬಳು ಪ್ರಧಾನಿ ಮೋದಿ ಅವರಿಗೆ ದೂರಿಟ್ಟಿದ್ದಾಳೆ !
ಹೌದು! ಕಾಶ್ಮೀರದ ಪುಟ್ಟ ಪೋರಿಯೊಬ್ಬಳು ಚಿಕ್ಕ ಮಕ್ಕಳಿಗೆ ದೀರ್ಘಕಾಲ ಆನ್ಲೈನ್ ತರಗತಿ ನಡೆಸುವ ಅಗತ್ಯ ಏನಿದೆ ಎಂಬ ದೊಡ್ಡ ಪ್ರಶ್ನೆ ಎತ್ತಿದ್ದಾಳೆ. ಈ ಬಗ್ಗೆ ವಿಡಿಯೋ ಮೂಲಕ ಮೋದಿ ಅವರೊಂದಿಗೆ ಅಳಲು ಹಂಚಿಕೊಂಡಿದ್ದಾಳೆ! ಈ ಆರು ವರ್ಷದ ಬಾಲಕಿಯ ಮುದ್ದು ಮಾತಿನ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಔರಂಗ್ಜೇಬ್ ನಖ್ಶ್ಬಂದಿ ಎಂಬ ಪತ್ರಕರ್ತರೊಬ್ಬರು ಎರಡು ದಿನಗಳ ಹಿಂದೆ (ಮೇ 29) ಇದನ್ನು ಟ್ವೀಟ್ ಮಾಡಿದ್ದು, ಈವರೆಗೆ 82,5000 ಕ್ಕೂ ಹೆಚ್ಚು ವೀಕ್ಷಣೆಗಳನ್ನು ಪಡೆದಿದೆ. 8,700 ಲೈಕುಗಳೊಂದಿಗೆ, 2,000 ಕ್ಕೂ ಹೆಚ್ಚು ರೀಟ್ವೀಟ್ಗಳು, ಕಾಮೆಂಟುಗಳನ್ನು ಪಡೆದುಕೊಂಡಿದೆ. 45 ಸೆಕೆಂಡುಗಳ ಈ ವಿಡಿಯೋ ಕ್ಲಿಪ್ನಲ್ಲಿ ಬಾಲಕಿಯು ತನಗೆ ಬೆಳಿಗ್ಗೆ ಎದ್ದಾಗಿಂದ ಎಷ್ಟೊಂದು ಓದುವ 'ಕೆಲಸ' ಎಂದು ಅಸಮಾಧಾನ ಹೊರಹಾಕಿದ್ದಾಳೆ.
"ಬೆಳಿಗ್ಗೆ 10 ರಿಂದ ಮಧ್ಯಾಹ್ನ 2 ಗಂಟೆವರೆಗೆ ಕ್ಲಾಸುಗಳು. ಇಂಗ್ಲೀಷ್, ಮ್ಯಾತ್ಸ್, ಉರ್ದು, ಈವಿಎಸ್ ಆಮೇಲೆ, ಕಂಪ್ಯೂಟರ್ ಸೈನ್ಸ್. ಮಕ್ಕಳಿಗೆ ಎಷ್ಟೊಂದು ಕೆಲಸ" ಎಂದು ಹಾವಭಾವಗಳೊಂದಿಗೆ ತನ್ನ ಮೇಲಿರುವ 'ಒತ್ತಡ'ವನ್ನು ಬಣ್ಣಿಸಿದ್ದಾಳೆ. "ಚಿಕ್ಕ ಮಕ್ಕಳಿಗೆ ಇಷ್ಟೊಂದು ಕೆಲಸ ಯಾಕಿರುತ್ತದೆ, ಮೋದಿ ಸಾಹಬ್?" ಎಂದು ಕೇಳುವ ಬಾಲಕಿ, ಕೊನೆಗೆ ನಿಟ್ಟುಸಿರುಬಿಟ್ಟು, ತಾನೇ "ಏನು ಮಾಡೋಕಾಗುತ್ತೆ?!" ಎಂದು, "ಅಸ್ಸಲಾಮಾಲೈಕುಂ ಮೋದಿ ಸಾಹಬ್, ಬಾಯ್" ಎನ್ನುತ್ತಾಳೆ. (ಏಜೆನ್ಸೀಸ್)