ಅಂಕಲ್​ನಿಂದಲೇ ನಿರಂತರ ಅತ್ಯಾಚಾರ: ಗರ್ಭಿಣಿ ಬಾಲಕಿಯ ಗರ್ಭಪಾತದ ವೇಳೆ ನಡೆಯಿತು ದುರಂತ!

Abortion
Published on

ಇಸ್ಲಮಾಬಾದ್​: ತನ್ನ ಅಂಕಲ್​ನಿಂದ ನಿರಂತರ ಅತ್ಯಾಚಾರಕ್ಕೆ ಒಳಗಾಗಿ ಆರು ತಿಂಗಳ ಗರ್ಭಿಣಿಯಾಗಿದ್ದ 14 ವರ್ಷದ ಬಾಲಕಿಯೊಬ್ಬಳು ಗರ್ಭಪಾತದ ವೇಳೆ ಮೃತಪಟ್ಟಿರುವ ಘಟನೆ ಪಾಕಿಸ್ತಾನದಲ್ಲಿ ನಡೆದಿರುವುದಾಗಿ ವರದಿಯಾಗಿದೆ.

ಸ್ಥಳೀಯ ಮಾಧ್ಯಮಗಳ ಪ್ರಕಾರ ಸಂತ್ರಸ್ತೆಯನ್ನು ಉಜ್ಮಾ ಎಂದು ಗುರುತಿಸಲಾಗಿದೆ. ತನ್ನ ಪಾಲಕರು ಪ್ರತ್ಯೇಕವಾದಾಗಿನಿಂದ ಬಾಲಕಿಯು ಪಾಕಿಸ್ತಾನದ ಪಂಜಾಬ್​ ಪ್ರಾಂತ್ಯದ ಒಕ್ರಾ ನಗರದಲ್ಲಿರುವ ತಾಯಿಯ ಸಂಬಂಧಿ ಅಂಕಲ್​ ಮತ್ತು ಆಂಟಿಯ ಜತೆ ವಾಸವಿದ್ದಳು. ಆರೋಪಿಯನ್ನು ಗುಲಾಮ್​ ಅನ್ವರ್​​ ಎಂದು ಗುರುತಿಸಲಾಗಿದೆ.

ಬಾಲಕಿಯ ಮೇಲೆ ನಿರಂತರವಾಗಿ ಸುಮಾರು ಆರು ತಿಂಗಳು ಅಂಕಲ್​ನಿಂದಲೇ ಅತ್ಯಾಚಾರ ನಡೆದಿದೆ. ಇದರ ಪರಿಣಾಮ ಆಕೆ ಗರ್ಭಿಣಿಯು ಆಗಿದ್ದಾಳೆ. ಈ ವಿಚಾರ ಅಂಕಲ್​ ಗುಲಾಮ್​ ಮತ್ತು ಆಂಟಿ ಸಾಜಿದಾ ಬಿಬಿ ಗಮನಕ್ಕೆ ಬಂದಾಗ ಬಾಲಕಿಯನ್ನು ಬಲವಂತವಾಗಿ ಗರ್ಭಪಾತ ಮಾಡಿಸಲು ಮುಂದಾದರು.

ಆಸ್ಪತ್ರೆಯಲ್ಲಿ ಗರ್ಭಪಾತ ಮಾಡಿಸುವಾಗ ಕೊನೆಯ ಹಂತದ ಆಪರೇಷನ್​ ವೇಳೆ ಸಂತ್ರಸ್ತೆಯ ಆರೋಗ್ಯದಲ್ಲಿ ಸಂಕೀರ್ಣತೆ ಸೃಷ್ಟಿಯಾಗಿ ಕೊನೆಯುಸಿರೆಳೆದಿದ್ದಾಳೆ. ಇತ್ತ ಉಜ್ಮಾ ಸಾವಿಗೀಡಾಗುತ್ತಲೇ ಆಕೆಯ ತಂದೆ ದೂರು ದಾಖಲಿಸಿದ್ದು, ಆರೋಪಿಗಳನ್ನು ಬಂಧಿಸಲು ಆಗ್ರಹಿಸಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net