ಬಿಜೆಪಿ ಪ್ರಣಾಳಿಕೆಯಲ್ಲೂ ಮಹಿಳೆಯರಿಗೆ ಉಚಿತ ಬಸ್​ ಪಾಸ್!

Free bus journey to women
Published on

ಧಾರವಾಡ: ಕಾಂಗ್ರೆಸಿಗರು ತಾವು ಅಧಿಕಾರಕ್ಕೆ ಬಂದರೆ ರಾಜ್ಯದ ಎಲ್ಲ ಮಹಿಳೆಯರಿಗೆ ಉಚಿತ ಬಸ್​ ಪ್ರಯಾಣ ಕಲ್ಪಿಸುವುದಾಗಿ ಘೋಷಿಸಿದ್ದು ಬಿಜೆಪಿ ಬೆಂಬಲಿಗರಿಂದ ತೀವ್ರ ಟೀಕೆಗೆ ಒಳಗಾಗಿತ್ತು. ಇದೀಗ ಬಿಜೆಪಿ ಪ್ರಣಾಳಿಕೆಯಲ್ಲೂ ಮಹಿಳೆಯರಿಗೆ ಉಚಿತ ಪ್ರಯಾಣ ಕಲ್ಪಿಸಲಿರುವ ಸಂಗತಿ ಹೊರಬಿದ್ದಿದೆ.

ಧಾರವಾಡ ತಾಲೂಕಿನ ಉಪ್ಪಿನಬೆಟಗೇರಿಯಲ್ಲಿ ಬಿಜೆಪಿ ಅಭ್ಯರ್ಥಿ ಅಮೃತ ದೇಸಾಯಿ ಪ್ರಚಾರಾರ್ಥ ಸಮಾವೇಶದಲ್ಲಿ ಈ ವಿಷಯವನ್ನು ತಿಳಿಸಿದರು. ನಾಳೆ ಬೆಂಗಳೂರಿನಲ್ಲಿ ಬಿಜೆಪಿ ಪ್ರಣಾಳಿಕೆ ಬಿಡುಗಡೆ ಮಾಡುತ್ತೇವೆ, ಹೆಣ್ಣು ಮಕ್ಕಳಿಗೆ ಬಸ್‌ನಲ್ಲಿ ಉಚಿತ ಬಸ್ ಪಾಸ್ ಕೊಡುವ ತೀರ್ಮಾನ ಮಾಡಿದ್ದೇವೆ ಎಂಬುದಾಗಿ ಅವರು ಹೇಳಿದರು.

ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಮಹಿಳೆಯರಿಗೆ ಯಾವ ರೀತಿ ಮಹತ್ವ ಕೊಟ್ಟಿದ್ದಾರೆ ಎನ್ನುವುದಕ್ಕೆ ದೇಶದ ರಾಷ್ಟ್ರಪತಿ ದ್ರೌಪದಿ ಮುರ್ಮು, ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ನಿದರ್ಶನ ಎಂದ ಅವರು, ಕಾಂಗ್ರೆಸ್ ಮುಳುಗುತ್ತಿರುವ ಹಡಗು, ಅದರ ನಾಯಕ ರಾಹುಲ್ ಗಾಂಧಿ ನಮ್ಮ ನಾಯಕರಾದ ಮೋದಿ-ಷಾ ಎದುರು ನಿಲ್ಲುವುದಕ್ಕೆ ಸಾಧ್ಯವೇ ಎಂದರು.

ಕಾಂಗ್ರೆಸ್​ ವೀರೇಂದ್ರ ಪಾಟೀಲರ ರಾಜೀನಾಮೆ ಪಡೆದಿತ್ತು. ರಾಜೀನಾಮೆ ನೀಡಿ ಎಂದು ಅವರಿಗೆ ವಿಮಾನನಿಲ್ದಾಣದಲ್ಲೇ ರಾಜೀವ್ ಗಾಂಧಿ ಕೇಳಿದ್ದರು. ಯಾವ ಅಪರಾಧಕ್ಕಾಗಿ ವೀರೇಂದ್ರ ಪಾಟೀಲರನ್ನು ಅಧಿಕಾರದಿಂದ ಇಳಿಸಿದ್ರಿ? ಇದಕ್ಕೆ ಕಾಂಗ್ರೆಸ್ ಉತ್ತರ ಕೊಡುತ್ತಾ? ಎಂದೂ ಅವರು ಪ್ರಶ್ನಿಸಿದ್ದಾರೆ.

18ರಿಂದ 20 ಲಕ್ಷ ಹೆಣ್ಣು ಮಕ್ಕಳಿಗೆ ಭಾಗ್ಯಲಕ್ಷ್ಮಿ ಕೊಟ್ಟಿದ್ದು ಯಡಿಯೂರಪ್ಪ. ರೈತರ ಪಂಪ್‌ಸೆಟ್‌ಗೆ ಉಚಿತ ವಿದ್ಯುತ್ ಕೊಟ್ಟಿದ್ದು ಯಡಿಯೂರಪ್ಪ. ರೈತರಿಗಾಗಿ ಪ್ರತ್ಯೇಕ ಬಜೆಟ್ ಮಂಡನೆ ಮಾಡಿದ್ದು ನಾವು, ದೇಶದ ಮಠ ಮಂದಿರಗಳ ಅಭಿವೃದ್ಧಿ ಕೆಲಸ ಮೋದಿ ಮಾಡುತ್ತಿದ್ದಾರೆ. ಶಿಕ್ಷಣಕ್ಕೆ ಹೆಚ್ಚು ‌ಒತ್ತು ನೀಡಿದ್ದೇವೆ, ಭಾರತವನ್ನು ಇಡೀ ವಿಶ್ವಕ್ಕೆ ಪರಿಚಯಿಸಿದ್ದು ಮೋದಿ. ಅಂಥ ಮೋದಿಯವರ ಬಗ್ಗೆ ಕೆಲವರು ಹಗುರವಾಗಿ ಮಾತನಾಡುತ್ತಿದ್ದಾರೆ. ಎಐಸಿಸಿ ಅಧ್ಯಕ್ಷ ಇಷ್ಟು ಕೆಳಮಟ್ಟಕ್ಕೆ ಇಳಿಯುತ್ತಾರೆಂದು ನಾನು ನಿರೀಕ್ಷೆ ಮಾಡಿರಲಿಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net