ಮಂಡ್ಯದ ವಿಸಿ ನಾಲೆಯಲ್ಲಿ 3 ದಿನದ ಅಂತರದಲ್ಲಿ 2 ದುರಂತ: ನೆಂಟರನ್ನು ಕರೆಯಲು ಹೋದವರು ದುರ್ಮರಣ

Mandya Accident
Published on

ಮಂಡ್ಯ: ನಿನ್ನೆ (ಜು.29) ರಾತ್ರಿ ವಿ.ಸಿ. ನಾಲೆಗೆ ಕಾರು ಉರುಳಿ ಬಿದ್ದು ನಾಲ್ವರು ದುರಂತ ಸಾವಿಗೀಡಾದ ಘಟನೆ ಗಾಮನಹಳ್ಳಿ ಬಳಿ ನಡೆದಿದೆ. ಕೇವಲ ಮೂರು ದಿನದ ಅಂತರದಲ್ಲಿ ನಡೆದ ಮತ್ತೊಂದು ದುರಂತ ಘಟನೆ ಇದಾಗಿದೆ.

ಎರಡು ಪ್ರತ್ಯೇಕ ಘಟನೆಯಲ್ಲಿ ವಿ.ಸಿ ನಾಲೆಗೆ ಕಾರು ಉರುಳಿ ಐವರು ಜಲಸಮಾಧಿಯಾಗಿದ್ದಾರೆ. ಕಳೆದ ಗುರುವಾರ ಮಂಡ್ಯದ ತಿಬ್ಬನಹಳ್ಳಿ ಬಳಿ ನಡೆದ ದುರಂತದಲ್ಲಿ ಓರ್ವ ಮೃತಪಟ್ಟಿದ್ದ. ಆ ಘಟನೆ ಮಾಸುವ ಮುನ್ನವೇ ನಿನ್ನೆ ರಾತ್ರಿ ಮತ್ತೊಂದು ದುರಂತ ಸಂಭವಿಸಿದೆ.

ಕಳೆದ ರಾತ್ರಿ ಗಾಮನಹಳ್ಳಿ ಬಳಿ ವಿ.ಸಿ ನಾಲೆಗೆ ಕಾರು ಉರುಳಿಬಿದ್ದ ನಾಲ್ವರು ಮಹಿಳೆಯರು ಮೃತಪಟ್ಟಿದ್ದಾರೆ. ಮೃತರನ್ನು ಗಾಮನಹಳ್ಳಿ ಗ್ರಾಮದ ಮಹದೇವಮ್ಮ, ಗೊರವನಹಳ್ಳಿ ಗ್ರಾಮದ ಸಂಜನಾ, ಮಮತಾ ಹಾಗೂ ರೇಖಾ ಎಂದು ಗುರುತಿಸಲಾಗಿದೆ. ಕಾರು ಚಲಾಯಿಸುತ್ತಿದ್ದ ಮನೋಜ್ ಬಚಾವ್ ಆಗಿದ್ದಾರೆ.

ಈ ಅಪಘಾತಕ್ಕೆ ಕಾರಿನ ವೇಗವೇ ಕಾರಣ ಎನ್ನಲಾಗುತ್ತಿದೆ. ದೇವರ ಕಾರ್ಯಕ್ಕೆ ಸಂಬಂಧಿಕರನ್ನು ಆಹ್ವಾನಿಸಲು ಹೋದವರು ಇದೀಗ ಮಸಣ ಸೇರಿದ್ದಾರೆ. ಸಂಬಂಧಿಕರನ್ನು ಕರೆಯಲು ಗೊರವನಹಳ್ಳಿಯಿಂದ ದೊಡ್ಡ ಮಲಗೂಡಿಗೆ ಕುಟುಂಬಸ್ಥರು ತೆರಳುತ್ತಿದ್ದರು. ರಸ್ತೆ ತಿರುವಿನಲ್ಲಿ ಬಲವಾಗಿ ಬ್ರೇಕ್ ಹಾಕಿದರೂ ಕಂಟ್ರೋಲ್ ಸಿಗದ ಕಾರು ತಡೆಗೋಡೆಗೆ ಡಿಕ್ಕಿಯಾಗಿ, ಪಲ್ಟಿ ಹೊಡೆದು ನಾಲೆಗೆ ಉರುಳಿದೆ. ಕಾರಿನಲ್ಲಿದ್ದ ಐವರ ಪೈಕಿ ನಾಲ್ವರು ಕಾರಿನಿಂದ ಹೊರಬರಲಾಗದೆ ಮೃತಪಟ್ಟಿದ್ದಾರೆ. ಇದೀಗ ಗಾಮನಹಳ್ಳಿ ಗ್ರಾಮದಲ್ಲಿ ನೀರವ ಮೌನ ಆವರಿಸಿದೆ. (ದಿಗ್ವಿಜಯ ನ್ಯೂಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net