More

  ಕೀಳರಿಮೆಯಿಂದಾದ ಕಿರುಕುಳ: ಆ ಕ್ಷಣ ಅಂಕಣ..

  ಕೀಳರಿಮೆಯಿಂದಾದ ಕಿರುಕುಳ: ಆ ಕ್ಷಣ ಅಂಕಣ..ಮಧ್ಯಮ ವರ್ಗದ ಕುಟುಂಬವೊಂದಕ್ಕೆ ಸೇರಿದ್ದ ಸುನೀಲ್ ದುಶ್ಚಟಗಳಿಗೆ ಬಿದ್ದು ಪಿಯುಸಿ ಓದಿದ ನಂತರ ಮುಂದೆ ಓದಲು ನಿರಾಕರಿಸಿದಾಗ ಅವನ ತಂದೆ ಅವನಿಗೆ ಜಿಲ್ಲಾ ಕೇಂದ್ರವೊಂದರಲ್ಲಿ ಕಿರಾಣಿ ಅಂಗಡಿ ಹಾಕಿಕೊಟ್ಟಿದ್ದರು. ಅವನಿಗೆ ಒಬ್ಬ ಅಣ್ಣ ಮತ್ತು ಇಬ್ಬರು ಅಕ್ಕಂದಿರಿದ್ದರು. ಅಣ್ಣನ ಮದುವೆಯಾಗಿದ್ದು ಆತ ಬ್ಯಾಂಕೊಂದರಲ್ಲಿ ಕೆಲಸ ಮಾಡುತ್ತಿದ್ದ. ಒಬ್ಬ ಅಕ್ಕ ಲಗ್ನವಾಗಿ ಬೇರೆ ಊರಿಗೆ ಹೋಗಿದ್ದಳು. ಇನ್ನೊಬ್ಬಳು ಲಗ್ನವಾಗದೇ ಸರ್ಕಾರಿ ಕಚೇರಿಯೊಂದರಲ್ಲಿ ಕೆಲಸಕ್ಕಿದ್ದಳು. ಸುನೀಲ್​ಗೆ 26 ವರ್ಷ ವಯಸ್ಸಾದಾಗ ಅವನ ತಂದೆ ತೀರಿ ಹೋದರು. ಆಗ ಅವನ ಅಣ್ಣನೇ ಸಂಸಾರವನ್ನು ನಡೆಸತೊಡಗಿದ.

  ಸುನೀಲನ ಅಣ್ಣನಿಗೆ ಬೇರೆ ಊರಿಗೆ ವರ್ಗವಾದಾಗ ಅವನ ತಾಯಿ ಆಗಲೇ 30 ವರ್ಷ ವಯಸ್ಸಾಗಿದ್ದ ಸುನೀಲನಿಗೆ ಮದುವೆ ಮಾಡಿಕೊಳ್ಳಲು ಪೀಡಿಸತೊಡಗಿದಳು. ಆಗ ಅವನ ಅಣ್ಣ ಅವನಿಗಾಗಿ ಕನ್ಯೆಯರನ್ನು ಹುಡುಕತೊಡಗಿದ. ಪಕ್ಕದ ಜಿಲ್ಲೆಯ ಯುವತಿಯೊಬ್ಬಳ ಜಾತಕವನ್ನು ಮಧ್ಯವರ್ತಿಯೊಬ್ಬ ಅವನಿಗೆ ತಂದು ತೋರಿಸಿದ. ಸುನೀಲ್ ಮತ್ತು ಆಕೆಯ ಜಾತಕಗಳು ಕೂಡುತ್ತಿದ್ದುದರಿಂದ ಸುನೀಲನ ಮನೆಯವರು ಆ ಹೆಣ್ಣನ್ನು ನೋಡಲು ಹೋದರು.

  25 ವರ್ಷ ವಯಸ್ಸಿನ ಪಾರ್ವತಿ ಅನಾಥೆಯಾಗಿದ್ದು, ತನ್ನ ಅಣ್ಣ, ಅತ್ತಿಗೆಯರೊಂದಿಗೆ ವಾಸಿಸುತ್ತಿದ್ದಳು. ಬಿ.ಎ, ಬಿ.ಎಡ್ ಪದವೀಧರೆಯಾಗಿದ್ದ ಆಕೆ ಕೇವಲ ಆರು ತಿಂಗಳ ಹಿಂದೆಯೇ ತನ್ನ ಊರಿನಲ್ಲಿಯೇ ಇದ್ದ ಒಂದು ಖಾಸಗಿ ಶಾಲೆಯಲ್ಲಿ ಶಿಕ್ಷಕಿಯ ಕೆಲಸವನ್ನು ಗಳಿಸಿದ್ದಳು. ಆಕೆಯ ನೌಕರಿ ತಾತ್ಕಾಲಿಕವಾಗಿದ್ದು ಒಂದು ವರ್ಷದ ಸೇವೆಯ ನಂತರ ಕಾಯಂ ಮಾಡುವುದಾಗಿ ಶಾಲೆಯ ಮ್ಯಾನೇಜ್​ವೆುಂಟ್ ಆಕೆಗೆ ತಿಳಿಸಿತ್ತು. ಹೀಗಾಗಿ, ಆಕೆಗೆ ಮದುವೆಯಾದ ನಂತರವೂ ಅದೇ ಊರಿನಲ್ಲಿಯೇ ಇರಬೇಕೆಂಬ ಮನಸ್ಸಿತ್ತು.

  ತನ್ನನ್ನು ನೋಡಲು ಬೇರೊಂದು ಊರಿನಿಂದ ಗಂಡಿನ ಕಡೆಯವರು ಬರುತ್ತಿದ್ದಾರೆ ಎಂದು ತಿಳಿದಾಗ ಪಾರ್ವತಿ ಬೇಸರಗೊಂಡದ್ದು ಸತ್ಯ. ಸುನೀಲ್ ತನ್ನ ಕುಟುಂಬದೊಡನೆ ಅವಳ ಮನೆಗೆ ಬಂದಾಗ ಅವನಿಗೆ ಪಾರ್ವತಿ ಇಷ್ಟವಾದಳು. ಸ್ಥಳದಲ್ಲಿಯೇ ತನ್ನ ಒಪ್ಪಿಗೆಯನ್ನೂ ಸೂಚಿಸಿದ. ಎರಡೂ ಕುಟುಂಬಗಳು ಮುಂದಿನ ಮಾತುಕತೆಗಳಿಗಾಗಿ ಕುಳಿತಾಗ ಪಾರ್ವತಿ ತನ್ನ ಅಣ್ಣನನ್ನು ಪಕ್ಕಕ್ಕೆ ಕರೆದು ತನಗೆ ಸುನೀಲ್ ಇಷ್ಟವಾಗಲಿಲ್ಲವೆಂದಳು. ಮದುವೆಯಾದರೆ ತಾನು ಬೇರೆ ಊರಿಗೆ ಹೋಗಬೇಕು, ಆಗ ತನ್ನ ನೌಕರಿ ಹೋಗುತ್ತದೆ, ತನಗೆ ಸುಮ್ಮನೆ ಮನೆಯಲ್ಲಿ ಕುಳಿತಿರುವುದು ಇಷ್ಟವಿಲ್ಲ ಎಂದಳು. ಇದಲ್ಲದೆ ಸುನೀಲ್ ಕೇವಲ ಪಿಯುಸಿ ಪಾಸಾಗಿದ್ದು, ಉತ್ತಮ ನೌಕರಿಯನ್ನೂ ಹೊಂದಿಲ್ಲ, ಅವನ ಮನೆ ಜಂಟಿ ಕುಟುಂಬವಾಗಿದ್ದು ಅಂತಹ ಕುಟುಂಬದಲ್ಲಿರಲು ತನಗಿಷ್ಟವಿಲ್ಲ ಎಂದಳು. ಇಂತಹ ಉತ್ತಮ ಕುಟುಂಬದವರು ನಿನ್ನನ್ನು ಕೇಳಿಕೊಂಡು ಬಂದಿರುವುದು ನಿನ್ನ ಪುಣ್ಯವೆಂದೇ ಭಾವಿಸು. ಅವರಿರುವುದು ಇಲ್ಲಿಗಿಂತ ದೊಡ್ಡ ಊರು. ಅಲ್ಲಿ ಹಲವಾರು ಶಾಲೆಗಳಿದ್ದು ಅಲ್ಲಿ ನಿನಗೆ ಕೆಲಸ ಸಿಗುತ್ತದೆ, ಚಿಂತಿಸಬೇಡ ಎಂದ ಅವಳ ಅಣ್ಣ ಅವಳ ಬಾಯಿ ಮುಚ್ಚಿಸಿದ. ಈ ಸಂಬಂಧಕ್ಕೆ ತನ್ನ ಒಪ್ಪಿಗೆಯನ್ನೂ ಸೂಚಿಸಿದ.

  ಶುಭಸ್ಯ ಶೀಘ್ರಂ ಎನ್ನುವಂತೆ ಮದುವೆಯ ನಿಶ್ಚಿತಾರ್ಥ ಮಾರನೆಯ ದಿನವೇ ನಡೆದೇ ಹೋಯಿತು. ಆ ಸಮಯದಲ್ಲಿ ವರನ ಕುಟುಂಬ ಲಗ್ನವನ್ನು ತಮ್ಮ ಊರಿನಲ್ಲಿಯೇ ಮಾಡಿಕೊಡಬೇಕು, ಹಾಗೂ ಸುನೀಲನಿಗೆ ಒಂದು ತೊಲೆ ಬಂಗಾರ, ಒಂದು ವಾಚ್ ಮತ್ತು ಒಂದು ಬೈಕನ್ನು ಕೊಡಿಸಬೇಕೆಂದರು. ನಾವು ಬಡ ಕುಟುಂಬಕ್ಕೆ ಸೇರಿದವರು. ಹೆಚ್ಚೆಂದರೆ ಒಂದು ಬಂಗಾರದ ಉಂಗುರ, ಚೈನ್ ಮತ್ತು ಮೂವತ್ತು ಸಾವಿರ ರೂ. ನಗದನ್ನು ವರದಕ್ಷಿಣೆಯಾಗಿ ಕೊಡುತ್ತೇವೆ. ಮದುವೆಯ ಮಂಟಪದ ಖರ್ಚನ್ನು ಇಬ್ಬರೂ ಹಂಚಿಕೊಳ್ಳೋಣ ಎಂದ ಪಾರ್ವತಿಯ ಸೋದರ. ಸುನೀಲನ ಮನೆಯವರು ಇದಕ್ಕೊಪ್ಪಿದರು. ಮೂರು ತಿಂಗಳ ನಂತರ ಇಬ್ಬರ ಮದುವೆ ನಡೆಯಿತು. ಪಾರ್ವತಿ ತನ್ನ ನೌಕರಿಗೆ ರಾಜೀನಾಮೆ ನೀಡಿ ಗಂಡನ ಮನೆಗೆ ಬಂದಳು. ಅದೇ ವೇಳೆಗೆ ಸುನೀಲನ ಸೋದರನಿಗೆ ಬೇರೆ ಊರಿಗೆ ವರ್ಗವಾದ ಕಾರಣ ಆತ ಮನೆಯಿಂದ ತನ್ನ ಸಂಸಾರದೊಡನೆ ಹೊರಟುಹೋದ.

  ತನ್ನ ಮನೆಗೆ ಬಂದಕೂಡಲೇ ಪಾರ್ವತಿಗೆ ಹೊರಗೆಲ್ಲೂ ಕೆಲಸಕ್ಕೆ ಹೋಗಬಾರದೆಂಬ ನಿರ್ಬಂಧವನ್ನು ಸುನೀಲ್ ಹೇರಿದ. ಮನೆಯ ಅಷ್ಟೂ ಕೆಲಸಗಳನ್ನು ಅವಳೊಬ್ಬಳೇ ಮಾಡಬೇಕೆಂದು ಸುನೀಲನ ತಾಯಿ ಮತ್ತು ಸೋದರಿ ಪಾರ್ವತಿಗೆ ಆದೇಶಿಸಿದರು. ಆಕೆ ಮರುಮಾತನಾಡದೆ ಮನೆಗೆಲಸಗಳನ್ನು ಮಾಡತೊಡಗಿದಾಗ ಪಾರ್ವತಿ ಮಾಡಿದ ಎಲ್ಲ ಕೆಲಸಗಳಲ್ಲೂ ಹುಳುಕನ್ನು ಕಾಣತೊಡಗಿದರು. ಅವಾಚ್ಯ ಶಬ್ದಗಳಿಂದ ಬೈಯುತ್ತಿದ್ದರು. ಇದು ಸಾಲದೆಂಬಂತೆ ಸುನೀಲ್ ತಾನು ತನ್ನ ವ್ಯಾಪಾರವನ್ನು ಅಭಿವೃದ್ಧಿ ಮಾಡಬಯಸುವುದರಿಂದ ತವರಿನಿಂದ ಹಣ ತರಲು ಪಾರ್ವತಿಯನ್ನು ಪೀಡಿಸತೊಡಗಿದ. ಮದುವೆ ಮಂಟಪದ ಅರ್ಧ ಖರ್ಚನ್ನು ಮಾತ್ರ ಕೊಟ್ಟಿದ್ದು ಪೂರ್ಣ ಖರ್ಚನ್ನು ಕೊಡಲು ಬಲವಂತ ಮಾಡಿದ. ಪ್ರತಿ ರಾತ್ರಿಯೂ ಕುಡಿದು ಬಂದು ಹೆಂಡತಿಯನ್ನು ಬೈಯುವುದಲ್ಲದೆ, ಹೊಡೆಯುತ್ತಲೂ ಇದ್ದ. ಆ ಸಮಯದಲ್ಲವನಿಗೆ ಅವನ ತಾಯಿ ಮತ್ತು ಸೋದರಿ ಕುಮ್ಮಕ್ಕು ಕೊಡುತ್ತಿದ್ದರು. ಅವರೆಲ್ಲರ ಕಿರುಕುಳ ತಾಳಲಾರದೆ ಪಾರ್ವತಿ ತವರುಮನೆಗೆ ಹೋಗಿ ಅಣ್ಣ ಅತ್ತಿಗೆಗೆ ಗಂಡನ ಮನೆಯವರ ಹಿಂಸೆಯ ಬಗ್ಗೆ ತಿಳಿಸಿದಳು. ಅದಳ ಸೋದರ ಅವಳ ಕೈಗೆ 10 ಗ್ರಾಂ ತೂಕದ ಚಿನ್ನದ ಸರವನ್ನು ಕೊಟ್ಟು, ಇದರ ಹೊರತಾಗಿ ನಮ್ಮ ಬಳಿ ಬೇರೇನೂ ಇಲ್ಲವೆಂದು ಗಂಡನ ಮನೆಯವರನ್ನು ಸಂತೈಸು ಎಂದ. ಮನೆಗೆ ವಾಪಸಾದ ಪಾರ್ವತಿ ಸರವನ್ನು ತನ್ನ ಅತ್ತೆಗೆ ಕೊಟ್ಟಾಗ, ಕೇವಲ ಚಿನ್ನ ಕೊಟ್ಟರೆ ಮುಗಿಯುವುದಿಲ್ಲ, ನಗದು ಹಣ ತರಲಿಲ್ಲವೇಕೆ? ಎಂದು ಕೋಪಗೊಂಡಳು.

  ಮುಂದಿನ ದಿನಗಳಲ್ಲಿ ಸುನೀಲನ ಕಿರುಕುಳ ಹೆಚ್ಚಾಗುತ್ತಲೇ ಬಂದಿತು. ಪ್ರತಿ ದಿನವೂ ಆತ ಕ್ಷುಲ್ಲಕ ಕಾರಣಗಳಿಗಾಗಿ ಪಾರ್ವತಿಯ ಮೇಲೆ ಸಿಟ್ಟಾಗಿ ಅವಳನ್ನು ತನ್ನ ಕೈಗೆ ಸಿಕ್ಕ ವಸ್ತುವಿನೊಂದಿಗೆ ಹೊಡೆಯುತ್ತಿದ್ದ, ಒಮ್ಮೆ ಬೆಲ್ಟ್​ನಿಂದ ಹೊಡೆದರೆ, ಇನ್ನೊಮ್ಮೆ ಕ್ರಿಕೆಟ್ ಬ್ಯಾಟ್​ನಿಂದ ಹೊಡೆಯುತ್ತಿದ್ದ. ಅವಳಿಗಾತ ಹೊಡೆಯುತ್ತಿದ್ದಾಗ ಮನೆಯಲ್ಲಿದ್ದ ಇತರರು ಇನ್ನಷ್ಟು ಹೊಡಿ ಎನ್ನುತ್ತಾ ಅವನನ್ನು ಪ್ರಚೋದಿಸುತ್ತಿದ್ದರು. ಆದರೆ, ಪಾರ್ವತಿ ಇವೆಲ್ಲವನ್ನೂ ಸಹಿಸಿಕೊಂಡೇ ಇದ್ದಳು. ಆದರೊಂದು ದಿನ ಸುನೀಲನ ಸೋದರ ತಾನಿದ್ದ ಊರಿನಿಂದ ಮನೆಗಾಗಮಿಸಿ ಸುನೀಲನ ಜತೆಗೆ ಸೇರಿ ತನ್ನನ್ನು ಹೊಡೆದಾಗ ಅವಳ ಸಹನೆಯ ಕಟ್ಟೆ ಒಡೆಯಿತು.

  ಪಾರ್ವತಿ ಅದೇ ರಾತ್ರಿ ಬಸ್ಸಿನಲ್ಲಿ ತನ್ನ ತವರು ಮನೆಗೆ ಹಿಂತಿರುಗಿ ಬಂದಳು. ಅವಳ ಅಣ್ಣ ಮತ್ತು ಅತ್ತಿಗೆ ಅವಳನ್ನು ಗಂಡನ ಮನೆಗೆ ಹೋಗಲು ಎಷ್ಟೇ ಹೇಳಿದರೂ ಆಕೆ ಒಪ್ಪಲಿಲ್ಲ. ಎರಡು ದಿನಗಳ ಕಾಲ ಅವಳಿಗೆ ಬುದ್ಧಿ ಹೇಳಿದ ಅವಳ ಸೋದರ ತನ್ನ ಪತ್ನಿಯೊಡನೆ ಪಾರ್ವತಿಯನ್ನು ಸುನೀಲನ ಮನೆಗೆ ಬಲವಂತದಿಂದ ಕರೆದೊಯ್ದು ಅಲ್ಲಿ ಬಿಟ್ಟ. ಅವರಿಬ್ಬರನ್ನೂ ಸುನೀಲನ ತಾಯಿ ಮತ್ತು ಅಕ್ಕ ವಾಚಾಮಗೋಚರವಾಗಿ ಬೈದರು. ಅವರು ಮನೆಯಿಂದ ಹೊರಟ ನಂತರದ ಎರಡು ದಿನಗಳ ಕಾಲ ಪಾರ್ವತಿಯ ಮೇಲೆ ಕ್ರೌರ್ಯ ನಡೆಸಿದ ಸುನೀಲ್, ಮೂರನೆಯ ದಿನ ತಾನೇ ಟ್ಯಾಕ್ಸಿ ಮಾಡಿಕೊಂಡು ಅವಳನ್ನು ಅವಳ ತವರಿಗೆ ಬಿಟ್ಟ.

  ಈ ಘಟನೆಯ ನಂತರ ರೊಚ್ಚಿಗೆದ್ದ ಪಾರ್ವತಿ ತನ್ನ ಊರಿನ ಮಹಿಳಾ ಪೊಲೀಸ್ ಠಾಣೆಗೆ ಹೋಗಿ ತನ್ನ ಗಂಡ, ಅತ್ತೆ, ನಾದಿನಿ ಮತ್ತು ಗಂಡನ ಅಣ್ಣ ಇವರೆಲ್ಲರ ವಿರುದ್ಧ ವರದಕ್ಷಿಣೆ ಕಿರುಕುಳದ ದೂರನ್ನು ನೀಡಿ ಸಂಬಂಧಿಸಿದ ದಾಖಲೆಗಳನ್ನು ಕೊಟ್ಟಳು. ಆದರೆ, ಆ ಠಾಣೆಯ ಮಹಿಳಾ ಸಬ್​ಇನ್ಸ್​ಪೆಕ್ಟರ್, ನಿನ್ನ ದೂರನ್ನು ನಾನೀಗಲೇ ಸ್ವೀಕರಿಸುವುದಿಲ್ಲ. ನಿನ್ನ ಗಂಡನನ್ನು ಕರೆಸೋಣ, ನಿಮ್ಮಿಬ್ಬರಿಗೂ ಕೌನ್ಸೆಲಿಂಗ್ ಮಾಡಿಸುವೆ. ಆನಂತರ ಮುಂದಿನ ಕ್ರಮವನ್ನು ತೆಗೆದುಕೊಳ್ಳುವೆ ಎಂದರು.

  ವಾರವೊಂದರ ನಂತರ ಸುನೀಲನನ್ನು ಪೊಲೀಸ್ ಠಾಣೆಗೆ ಕರೆಸಿದ ಪೊಲೀಸರು ಅವನಿಗೆ ಕೌನ್ಸೆಲಿಂಗ್ ಮಾಡಿದಾಗ ಆತ ಪಾರ್ವತಿಯನ್ನು ತನ್ನೊಡನೆ ಕರೆದುಕೊಂಡು ಹೋಗಲು ಸಿದ್ಧನಾದ. ಆದರೆ ಪಾರ್ವತಿ ತಾನು ಯಾವುದೇ ಕಾರಣಕ್ಕೂ ಗಂಡನ ಮನೆಗೆ ಹೋಗುವುದಿಲ್ಲ ಎಂದು ಖಡಾಖಂಡಿತವಾಗಿ ನುಡಿದಳು. ಬೇರೆ ದಾರಿ ಕಾಣದ ಪಿಎಸ್​ಐ ವರದಕ್ಷಿಣೆ ಕಿರುಕುಳದ ಪ್ರಕರಣವನ್ನು ದಾಖಲಿಸಿದರು. ಪ್ರಕರಣವು ಬೇರೆ ಊರಿನಲ್ಲಿ ನಡೆದಿದ್ದ ಕಾರಣ ಅದನ್ನು ನೆರೆ ಜಿಲ್ಲೆಯ ಸಂಬಂಧಪಟ್ಟ ಪೊಲೀಸ್ ಠಾಣೆಗೆ ವರ್ಗಾಯಿಸಿದರು. ತನಿಖೆ ಮುಂದುವರಿದು ಸೂಕ್ತ ಸಾಕ್ಷ್ಯಾಧಾರಗಳು ಸಿಕ್ಕ ನಂತರ ಪೊಲೀಸರು ಎಲ್ಲ ಆರೋಪಿಗಳನ್ನೂ ಬಂಧಿಸಿ ನ್ಯಾಯಾಲಯದಲ್ಲಿ ಆರೋಪಪಟ್ಟಿಯನ್ನು ಸಲ್ಲಿಸಿದರು.

  ಏತನ್ಮಧ್ಯೆ ತನ್ನ ಸತತ ಪ್ರಯತ್ನದಿಂದ ತಾನು ಮೊದಲಿಗೆ ಸೇವೆ ಸಲ್ಲಿಸುತ್ತಿದ್ದ ಶಾಲೆಯಲ್ಲಿಯೇ ಪಾರ್ವತಿ ನೌಕರಿ ಗಿಟ್ಟಿಸಿದಳು. ನ್ಯಾಯಾಲಯದ ವಿಚಾರಣೆ ನಡೆಯುತ್ತಿದ್ದಾಗಲೇ ಸುನೀಲನ ತಾಯಿ ಅಸುನೀಗಿದರು. ಹೀಗಾಗಿ, ಅವರ ಮೇಲಿದ್ದ ಆರೋಪ ರದ್ದಾಯಿತು. ಉಳಿದವರ ಮೇಲೆ ವಿಚಾರಣೆ ಮುಗಿದ ನಂತರ ಆರೋಪಗಳು ಸಾಬೀತಾಗಿವೆ ಎಂದು ತೀರ್ವನಿಸಿದ ನ್ಯಾಯಾಧೀಶರು ಎಲ್ಲ ಆರೋಪಿಗಳಿಗೂ ಎರಡು ವರ್ಷಗಳ ಕಠಿಣ ಶಿಕ್ಷೆಯನ್ನು ನೀಡಿದರು. ಈ ಶಿಕ್ಷೆಯ ವಿರುದ್ಧ ಅವರೆಲ್ಲರೂ ಜಿಲ್ಲಾ ನ್ಯಾಯಾಲಯಕ್ಕೆ ಮೇಲ್ಮನವಿ ಸಲ್ಲಿಸಿದರು. ಸುನೀಲ್ ಒಬ್ಬನ ಮೇಲೆ ಮಾತ್ರ ಆರೋಪಗಳು ಸಾಬೀತಾಗಿದೆಯೆಂದು ಅವನ ಶಿಕ್ಷೆಯನ್ನು ಕಾಯಂ ಮಾಡಿದ ನ್ಯಾಯಾಧೀಶರು ಉಳಿದವರನ್ನು ಬಿಡುಗಡೆ ಮಾಡಿದರು. ಈ ತೀರ್ಪಿನ ವಿರುದ್ಧ ಸುನೀಲ್ ಉಚ್ಚ ನ್ಯಾಯಾಲಯಕ್ಕೆ ಅಪೀಲ್ ಹೋದ. ಉಚ್ಚ ನ್ಯಾಯಾಲಯವು ಕೆಳಗಿನ ನ್ಯಾಯಾಲಯ ಸುನೀಲನಿಗೆ ಕಡಿಮೆ ಶಿಕ್ಷೆ ನೀಡಿರುವುದಾಗಿ ತೀರ್ವನಿಸಿ ಅವನ ಶಿಕ್ಷೆಯನ್ನು 5 ವರ್ಷಗಳ ಕಾರಾಗೃಹವಾಸಕ್ಕೆ ಹೆಚ್ಚಿಸಿತು. ತನ್ನ ಪತ್ನಿ ತನಗಿಂತಲೂ ಹೆಚ್ಚು ವಿದ್ಯಾವಂತಳಾಗಿದ್ದಾಳೆ ಎಂಬ ಕೀಳರಿಮೆಯಿಂದಲೇ ಸುನೀಲ್ ಅವಳಿಗೆ ಕಿರುಕುಳ ನೀಡಿದ್ದಾನೆ ಎಂದು ನ್ಯಾಯಾಧೀಶರು ಅಭಿಪ್ರಾಯವನ್ನು ಪಟ್ಟರು. ಯಯೋರೇವ ಸಮಂ ವಿತ್ತಂ ಯಯೋರೇವ ಸಮಂ ಕುಲಂ, ತಯೋಃ ಸಖ್ಯಂ ವಿವಾಹಶ್ಚ ನತು ಪುಷ್ಟ ವಿಪುಷ್ಟಯೋಃ ಎಂದು ಚಾಣಕ್ಯ ನೀತಿ ಹೇಳುತ್ತದೆ. ಇದರರ್ಥ ಯಾರ ಮಧ್ಯೆ ಆರ್ಥಿಕ, ಸಾಮಾಜಿಕ ಸಮಾನತೆಯಿರುತ್ತದೆಯೋ ಅವರ ನಡುವೆಯೇ ವಿವಾಹ ಮತ್ತು ಸಖ್ಯವು ನಡೆಯಬೇಕೇ ಹೊರತು ಬಲಶಾಲಿಗಳು ಮತ್ತು ಬಲಹೀನರ ಮಧ್ಯೆ ಅಲ್ಲ ಎಂದು. ಇದು ಸುನೀಲ್ ಮತ್ತು ಪಾರ್ವತಿಯ ವಿವಾಹದಲ್ಲಿ ಸಾಬೀತಾಯಿತು.

  (ಲೇಖಕರು ನಿವೃತ್ತ ಪೊಲೀಸ್ ಅಧಿಕಾರಿ)

  ನಾಪತ್ತೆ ಆಗಿದ್ದ ಗಂಡ ಹತ್ತು ವರ್ಷಗಳ ಬಳಿಕ ಪತ್ತೆ; ವೈದ್ಯರನ್ನು ನೋಡಲು ಹೋಗಿದ್ದ ಪತ್ನಿಗೆ ಪತಿಯೇ ಸಿಕ್ಕಿ ಅಚ್ಚರಿ!

  ಹೆಂಡತಿಗೆ ಹೆದರಿ ಮನೆ ಬಿಟ್ಟು ಒಂದೂವರೆ ವರ್ಷ ನಾಪತ್ತೆಯಾಗಿದ್ದ ಗಂಡ!

  ರಾಜ್ಯೋತ್ಸವ ರಸಪ್ರಶ್ನೆ - 22

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts